ಕಲಬುರಗಿ: ‘ಬಸವೇಶ್ವರ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ ಆರಂಭಿಸಿದ್ದು ಸಂತೋಷ. ಆದರೆ, ಕಾರ್ಪೊರೇಟ್ ಆಸ್ಪತ್ರೆಗಳಂತೆ ಅಧಿಕ ಶುಲ್ಕ ವಿಧಿಸಬಾರದು. ಅದರಿಂದ ಈ ಭಾಗದ ಜನರಿಗೆ ತೊಂದರೆಯಾಗುತ್ತದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ 7 ಟ್ರಯೇಜ್ ಹಾಗೂ 25 ಐಸಿಯು ಸೇರಿ 32 ಹಾಸಿಗೆ ಸಾಮರ್ಥ್ಯದ ತುರ್ತು ಚಿಕಿತ್ಸಾ ಘಟಕವನ್ನು ಉದ್ಘಾಟಿಸಿದ ಬಳಿಕ ಎಂಆರ್‌ಎಂಸಿ ಸ್ಯಾಕ್ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮ್ಮ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಗೂ ಸರ್ಕಾರಿ ವೈದ್ಯಕೀಯ ಕಾಲೇಜು, ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್, ಕ್ಯಾನ್ಸರ್ ಆಸ್ಪತ್ರೆಗಳನ್ನು ಸ್ಥಾಪಿಸುವ ಸಂಕಲ್ಪ ಮಾಡಿದೆ. ಜನರಿಗೆ ಉಚಿತ ಆರೋಗ್ಯ ಸೇವೆ ದೊರಕಿಸುವುದು ನಮ್ಮ ಉದ್ದೇಶ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರು ಚಿಕಿತ್ಸೆ ಪಡೆದರೆ, ಮಧ್ಯಮವರ್ಗದವರು ಖಾಸಗಿ ಸಂಸ್ಥೆಗಳತ್ತ ಹೋಗುತ್ತಾರೆ. ಹೀಗಾಗಿತುರ್ತು ಆರೋಗ್ಯ ಸೇವೆಗಳಿಗೆ ವಿಧಿಸುವ ಶುಲ್ಕ ಸಮಂಜಸವಾಗಿರಬೇಕು. ಸಾಮಾನ್ಯ, ಮಧ್ಯಮ ವರ್ಗದ ಜನರು ಜೇಬಿಗೆ ಭಾರವಾಗದಂತಿರಬೇಕು’ ಎಂದು ಸಲಹೆ ನೀಡಿದರು.
‘ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಎಷ್ಟು ತ್ವರಿತ ಹಾಗೂ ಕಾಳಜಿಪೂರ್ವಕ ಸೇವೆ ನೀಡಲಾಗುತ್ತದೆ ಎಂಬುದು ಯಾವುದೇ ಆಸ್ಪತ್ರೆ ಖ್ಯಾತಿ ಹಾಗೂ ಜನರ ವಿಶ್ವಾಸಗಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಮಾತನಾಡಿ, ‘ಬಸವೇಶ್ವರ ಆಸ್ಪತ್ರೆಯಿಂದ ಈಗಲೂ ಶೇ95ರಷ್ಟು ಆರೋಗ್ಯ ಸೇವೆಗಳನ್ನು ಉಚಿತವಾಗಿಯೇ ನೀಡಲಾಗುತ್ತಿದೆ. ಸುಸ್ಥಿರತೆಯ ದೃಷ್ಟಿಯಿಂದ ಒಂದಿಷ್ಟು ಸೇವೆಗಳಿಗೆ ಶುಲ್ಕ ವಿಧಿಸುತ್ತಿದ್ದೇವೆ. ಆದರೆ, ತುರ್ತು ಚಿಕಿತ್ಸಾ ಘಟಕದ ಸೇವೆಗಳಿಗೂ ಕಾರ್ಪೊರೇಟ್ ಆಸ್ಪತ್ರೆಗಳಂತೆ ಶುಲ್ಕ ವಿಧಿಸಲ್ಲ. ಕಡಿಮೆ ದರದಲ್ಲೇ ಜನರಿಗೆ ಆರೋಗ್ಯ ಸೇವೆ ಒದಗಿಸುವುದಾಗಿ ಮಾತು ನೀಡುತ್ತೇವೆ’ ಎಂದರು.
‘ನಮ್ಮ ಅವಧಿಯಲ್ಲಿ ಆರೋಗ್ಯ ಸೇವೆಗಳಲ್ಲಿ ಗಮನಾರ್ಹ ಸುಧಾರಣೆ ತಂದಿದ್ದು, ಶೀಘ್ರವೇ 65ರಿಂದ70 ಹಾಸಿಗೆ ಸಾಮರ್ಥ್ಯದ ಹೊಸ ಐಸಿಯು ಕಟ್ಟಡ ನಿರ್ಮಿಸಲಾಗುವುದು. ನೂತನ ಫಿಜಿಯೊಥೆರಪಿ ಕಾಲೇಜು ಆರಂಭಿಸಲಾಗುವುದು. 6 ಹೊಸ ಅರೆವೈದ್ಯಕೀಯ ಕೋರ್ಸ್ ಆರಂಭಿಸಲಾಗುವುದು. ಜೊತೆಗೆ ₹70ಕೋಟಿಗೂ ಅಧಿಕ ವೆಚ್ಚದಲ್ಲಿ ಸಂಗಮೇಶ್ವರ ಆಸ್ಪತ್ರೆಗೆ ಏಳು ಅಂತಸ್ತಿನ ಹೊಸ ಕಟ್ಟಡ ನಿರ್ಮಿಸಲಾಗುವುದು’ ಎಂದರು.
ಶಾಸಕ ಡಾ.ಅವಿನಾಶ ಜಾಧವ ಮಾತನಾಡಿದರು. ಡಾ.ರಾಹುಲ್ ಕಟ್ಟಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕಿರಣ ದೇಶಮುಖ ಸ್ವಾಗತಿಸಿದರು. ಶಾಸಕ ಬಸವರಾಜ ಮತ್ತಿಮಡು, ಎಚ್‌ಕೆಇ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಕೈಲಾಶ ಪಾಟೀಲ, ಡಾ.ಎಸ್.ಆರ್.ಹರವಾಳ, ಡಾ.ಪಿ.ಎಸ್.ಶಂಕರ, ಅರುಣಕುಮಾರ ಪಾಟೀಲ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಬಸವೇಶ್ವರ ಆಸ್ಪತ್ರೆಗೆ ರೋಗಿಗಳು ಬಂದರೆ ಬದುಕುವುದೇ ಅನುಮಾನ ಎನ್ನುವ ಸ್ಥಿತಿಯಿತ್ತು. ಈಗ ಗುಣಮುಖರಾಗುವ ವಿಶ್ವಾಸ ಮೂಡಿದೆ. ಅದರ ಶ್ರೇಯ ಶಶೀಲ್ ನಮೋಶಿಗೆ ಸಲ್ಲುತ್ತದೆತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯ
ದಿ.ರಾಂಪುರೆ ಎಂಆರ್‌ಎಂಸಿ ಸ್ಥಾಪಿಸದಿದ್ದರೆ ಶರಣಪ್ರಕಾಶ ಡಾಕ್ಟರ್ ಆಗುತ್ತಿರಲಿಲ್ಲ ಪಿಡಿಎ ಕಾಲೇಜು ಸ್ಥಾಪಿಸದಿದ್ದರೆ ನಾನು ನಮೋಶಿ ಎಂಜಿನಿಯರ್‌ಗಳು ಆಗುತ್ತಿರಲಿಲ್ಲಸುನೀಲ ವಲ್ಯಾಪುರೆ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.