ADVERTISEMENT

ಕಲಬುರಗಿ | ಬಸ್ ಡಿಕ್ಕಿ: ಬೈಕ್‌ನಲ್ಲಿದ್ದ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 20:19 IST
Last Updated 29 ಜುಲೈ 2024, 20:19 IST
   

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್‌ ಮಧ್ಯೆ ನಗರದ ಹೊರವಲಯದ ಜೇವರ್ಗಿ ರಸ್ತೆಯ ಕೇಂದ್ರ ಕಾರಾಗೃಹದ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನ ಟ್ಯಾಂಕ್ ಒಡೆದು ಪೆಟ್ರೋಲ್‌ಗೆ ಬೆಂಕಿ ಹೊತ್ತಿಕೊಂಡು ಬೈಕ್ ಸಂಪೂರ್ಣ ಸುಟ್ಟು ಹೋಗಿದೆ.

ಜೇವರ್ಗಿ ತಾಲ್ಲೂಕಿನ ಶಖಾಪುರ (ಎಸ್‌ಎ) ಗ್ರಾಮದ ಅಭಿಷೇಕ ರಾಮಚಂದ್ರಗೌಡ ಮಾಲಿಪಾಟೀಲ (18) ಮತ್ತು ತನೋಜ್ ಶ್ರೀಮಂತ ತಳವಾರ (18) ಮೃತಪಟ್ಟ ಯುವಕರು. ಬೈಕ್‌ನಲ್ಲಿದ್ದ ಯಶಪಾಲ್ ರೆಡ್ಡಿ ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ ಯಶಪಾಲ್‌ ರೆಡ್ಡಿ ಕಾಶಿಗೆ ಹೋಗಿ ವಾಪಸ್ ಬಂದಿದ್ದ. ಆತನನ್ನು ಕಲಬುರಗಿಯಿಂದ ಶಖಾಪುರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಬೆಳಿಗ್ಗೆ 6ಕ್ಕೆ ಹೊಸಪೇಟೆಯಿಂದ ಕಲಬುರಗಿಯತ್ತ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ಗೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಯುವಕರು ಸ್ಥಳದಲ್ಲೇ ಮೃತಪಟ್ಟರು.

ADVERTISEMENT

ಬೈಕ್ ಒಂದು ಕಡೆ, ದೇಹಗಳು ಇನ್ನೊಂದು ಕಡೆ ರಸ್ತೆಯ ಮೇಲೆ ಬಿದ್ದಿದ್ದವು.

ಘಟನೆ ಸುದ್ದಿ ತಿಳಿದು ಸ್ಥಳೀಯರು ಹಾಗೂ ಪೊಲೀಸರು ಆಂಬುಲೆನ್ಸ್ ವ್ಯವಸ್ಥೆ ಮಾಡಿ ಗಾಯಾಳು ಹಾಗೂ ಮೃತದೇಹವನ್ನು ಕೊಂಡೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.