ADVERTISEMENT

ಪ್ರಕಟಣೆಗೆ ಕಾಯುತ್ತಿವೆ ಚೆನ್ನಣ್ಣರ 2 ಮಹಾಕಾವ್ಯ

‘ಮಹಾನ್‌ ನಿರ್ಯುದ್ಧಾರಾಧನೆ’ ಮತ್ತು ‘ಮಹಾನ್‌ ಭಿಕ್ಖುಗಳು’ ರಚನೆ

ಗಣೇಶ-ಚಂದನಶಿವ
Published 29 ನವೆಂಬರ್ 2019, 11:09 IST
Last Updated 29 ನವೆಂಬರ್ 2019, 11:09 IST
ಮಹಾನ್‌ ನಿರ್ಯುದ್ಧಾರಾಧನೆ
ಮಹಾನ್‌ ನಿರ್ಯುದ್ಧಾರಾಧನೆ   

ಕಲಬುರ್ಗಿ: ಅನಾರೋಗ್ಯದಿಂದ ಇತ್ತೀಚೆಗಷ್ಟೇ ನಿಧನರಾದ ಹಿರಿಯ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ಅವರು ‘ಮಹಾನ್‌ ನಿರ್ಯುದ್ಧಾರಾಧನೆ’ ಮತ್ತು ‘ಮಹಾನ್‌ ಭಿಕ್ಖುಗಳು’ ಎಂಬ ಮಹಾಗ್ರಂಥಗಳನ್ನು ರಚಿಸಿದ್ದು, ಅವುಗಳ ಪ್ರಕಟಣೆಗೆ ಪರದಾಡಿದ ಸಂಗತಿ ಬೆಳಕಿಗೆ ಬಂದಿದೆ.

2009ರಲ್ಲಿ ಪ್ರಕಟವಾದ ಇವರ ‘ವ್ಯೋಮಾವ್ಯೋಮ’ ಮಹಾಕಾವ್ಯ ಸಾಹಿತ್ಯ ಲೋಕದಲ್ಲಿ ಹೊಸ ಬಗೆಯ ಚರ್ಚೆ ಹುಟ್ಟುಹಾಕಿತ್ತು. 1030 ‍ಪುಟಗಳ ಈ ಮಹಾಕಾವ್ಯದಲ್ಲಿ ಎಲ್ಲಿಯೂ ಅಲ್ಪವಿರಾಮ, ಪೂರ್ಣ ವಿರಾಮ, ಪ್ಯಾರಾಗಳು ಇಲ್ಲದ್ದು ಅದರ ವಿಶೇಷತೆಯಾಗಿತ್ತು. ಅವರು ಇಳಿಯವಸ್ಸಿನಲ್ಲಿ ರಚಿಸಿರುವ ಈ ಎರಡೂ ಮಹಾಕಾವ್ಯಗಳು ಅದೇ ಬಗೆಯವು.

‘ಮಹಾನ್‌ ನಿರ್ಯುದ್ಧಾರಾಧನೆ’ ಗದ್ಯ ರೂಪದ ಮಹಾಕಾವ್ಯ 548 ಪುಟಗಳನ್ನು ಹೊಂದಿದೆ. ಇದನ್ನು ಬರೆಯಲು ಏಳೂವರೆ ವರ್ಷ ತೆಗೆದುಕೊಂಡರು. ಇದರ ಜೊತೆ ಜೊತೆಗೇ ‘ಮಹಾನ್‌ ಭಿಕ್ಖುಗಳು’ ಎಂಬ ಪದ್ಯರೂಪದ ಮಹಾಕಾವ್ಯ ರಚಿಸಿದ್ದು, ಇದೂ ಸಹ 500 ಪುಟಗಳನ್ನು ಹೊಂದಿದೆ. ಡಿಟಿಪಿ–ಮುಖಪುಟ ಎಲ್ಲವೂ ಪೂರ್ಣಗೊಂಡಿದ್ದು, ಮುದ್ರಣ ಮಾತ್ರ ಬಾಕಿ ಇದೆ. ಅನಾರೋಗ್ಯದಿಂದ ಬಳಲುತ್ತಿದ್ದರೂ ಚೆನ್ನಣ್ಣ ಅವರು ಇವುಗಳ ಪ್ರಕಟಣೆ ಕೋರಿ ಕೆಲ ಪ್ರಕಾಶಕರ ಬಳಿ ಹೋಗಿದ್ದರು. ಆದರೆ, ಹೆಚ್ಚು ಪುಟಗಳನ್ನು ಹೊಂದಿವೆ ಎಂಬ ಕಾರಣಕ್ಕೆ ಪ್ರಕಾಶಕರು ಇವುಗಳ ಪ್ರಕಟಣೆಗೆ ಮುಂದಾಗಿಲ್ಲ’ ಎಂದು ಅವರ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮಹಾನ್‌ ನಿರ್ಯುದ್ಧಾರಾಧನೆ’ಯು ‘ವ್ಯೋಮಾವ್ಯೋಮ’ದ ಮುಂದುವರೆದ ಭಾಗ. ನಿತ್ಯವೂ ನಸುಕಿನಲ್ಲಿ ಅವರು ನನಗೆ ಹೇಳುತ್ತಿದ್ದರು. ನಾನು ಅದನ್ನು ಟೈಪ್‌ ಮಾಡುತ್ತಿದ್ದೆ. ಈ ಮಹಾಕಾವ್ಯದ ಸ್ವರೂಪದ ಬಗ್ಗೆ ಅವರು ಅತೀ ಹೆಚ್ಚು ಕಾಳಜಿ ವಯಸಿದ್ದರು.60 ಬಾರಿ ತಿದ್ದುಪಡಿ ಮಾಡಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಅವರ ಮೊಮ್ಮಗ ಅರವಿಂದ ವಾಲೀಕಾರ.

‘ಈ ಮಹಾಗ್ರಂಥಗಳು ಪ್ರಕಟವಾದರೆ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತೆ. ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಬೇಕಿತ್ತು. ಆದರೆ, ಆ ಅವಕಾಶ ಒದಗಿ ಬರಲಿಲ್ಲ. ಕಲಬುರ್ಗಿಯಲ್ಲೇ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಎರಡು ಗ್ರಂಥಗಳನ್ನು ಪ್ರಕಟಿಸಿ, ಸಮ್ಮೇಳನದಲ್ಲಿ ಬಿಡುಗಡೆ ಮಾಡಲು ಕನ್ನಡ ಸಾಹಿತ್ಯ ಪರಿಷತ್‌ ಮುಂದಾಗಬೇಕು.ಈ ಸಮ್ಮೇಳನದಲ್ಲಿ ಡಾ.ಚೆನ್ನಣ್ಣ ವಾಲೀಕಾರ ಬದುಕು–ಬರಹ ಕುರಿತು ಗೋಷ್ಠಿಯನ್ನು ಆಯೋಜಿಸಬೇಕು ಎಂಬುದು ಅವರ ಅನುಯಾಯಿಗಳ ಮಹದಾಸೆ’ ಎನ್ನುತ್ತಾರೆ ಅವರ ಸೊಸೆ ಬಸಂತಬಾಯಿ ವಾಲೀಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.