ಕಲಬುರಗಿ: ‘ದೇಶದಲ್ಲಿ ಯಾರಿಗೂ ಕಾಯಂ ಕೆಲಸವೇ ಸಿಗದಂತಾಗಿದ್ದು, ಕೇವಲ ಸಂಸತ್ ಭವನ ಹಾಗೂ ವಿಧಾನಸೌಧ ಮಾತ್ರವೇ ಕಾಯಂ ಎನ್ನುವಂತಾಗಿದೆ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಎಚ್.ಎಸ್.ಸುನಂದಾ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು 18ನೇ ಕಲಬುರಗಿ ಜಿಲ್ಲಾ ಸಮ್ಮೇಳನದ ಅಂಗವಾಗಿ ನಗರದ ಐವಾನ್–ಎ–ಶಾಹಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ನಡೆದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
‘ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದ ಬಳಿಕ ಕುರ್ಚಿಗಾಗಿ ಕಿತ್ತಾಡುತ್ತಿವೆಯೇ ಹೊರತು ದುಡಿಯುವ ಬಡವರ ಪರ ನೀತಿಗಳನ್ನು ರೂಪಿಸುತ್ತಿಲ್ಲ. ಸಾರ್ವಜನಿಕ ಉದ್ದಿಮೆಗಳನ್ನು ನಾಶ ಮಾಡುತ್ತಿರುವ ಸರ್ಕಾರಗಳು, ಎಲ್ಲೆಡೆ ಬರೀ ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ನೇಮಿಸುತ್ತಿವೆ. ದೇಶದ ರಕ್ಷಣಾ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ’ ಎಂದು ಟೀಕಿಸಿದರು.
‘ದೇಶದಲ್ಲಿ 39 ಕಾರ್ಮಿಕರ ಕಾನೂನುಗಳಿದ್ದವು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಕಾನೂನುಗಳ ಸಂಖ್ಯೆ 29ಕ್ಕೆ ತಗ್ಗಿಸಿತು. ಬಳಿಕ ಅವುಗಳನ್ನು ನಾಲ್ಕು ಕಾರ್ಮಿಕ ಸಂಹಿತೆಯಾಗಿ ಜಾರಿಗೆ ಮುಂದಾಗಿದೆ. ಇದು ಬಂಡವಾಳಶಾಹಿ ಪರ ನಿಲುವಿಗೆ ನಿದರ್ಶನ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಇಂದಿನ ಯುವಜನರು ವಿದ್ಯಾವಂತರಾಗಿದ್ದಾರೆ. ಆದರೆ ಅವರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳೇ ಸರ್ಕಾರದ ಬಳಿಯಿಲ್ಲ. ದೇಶದಲ್ಲಿ ಬರೀ ರಾಮಮಂದಿರ ಕಟ್ಟಲು, ಕಾಶಿ ಮಂದಿರ ಅಭಿವೃದ್ಧಿ, ಪ್ರಯಾಗರಾಜ್‌ನಲ್ಲಿ ಕುಂಭಮೇಳ ನಡೆಸಲು ಅಷ್ಟೇ ಸರ್ಕಾರದ ಯೋಜನೆಗಳಿವೆ’ ಎಂದು ಟೀಕಿಸಿದರು.
‘ರಾಜ್ಯ ಸರ್ಕಾರವೂ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ ₹ 15 ಸಾವಿರ, ಬಿಸಿಯೂಟ ಕಾರ್ಯಕರ್ತೆಯರಿಗೆ ₹ 10 ಸಾವಿರ ಗೌರವಧನ ನೀಡುವುದಾಗಿ ಹೇಳಿತ್ತು. ಎಲ್ಲಿದೆ ಸ್ವಾಮಿ?’ ಎಂದು ಪ್ರಶ್ನಿಸಿದರು.
‘ದೇಶದಲ್ಲಿ ಉದ್ಯಮಪತಿಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಕಾರ್ಮಿಕರು 72 ಗಂಟೆ, 90 ಗಂಟೆ ಕೆಲಸ ಮಾಡಲಿ ಎಂದು ಹೇಳುತ್ತಾರೆ. ಎಷ್ಟು ಗಂಟೆ ಕೆಲಸ ಮಾಡಬೇಕು, ಎಷ್ಟು ಗಂಟೆ ವಿರಾಮ ಪಡೆಯಬೇಕು ಎಂಬುದನ್ನು ದುಡಿಯುವ ಜನರು ನಿರ್ಧರಿಸಬೇಕು. ಉದ್ಯಮಪತಿಗಳು ಹೇಳಿದಂತೆ ಕೇಳಲು ನಾವು ಗುಲಾಮರಲ್ಲ. ರಕ್ತ–ಬೆವರು ಸುರಿಸಿ ಕೆಲಸ ಮಾಡುವ ಕಾರ್ಮಿಕರು’ ಎಂದು ಹೇಳಿದರು.
‘ನೇಪಾಳದಲ್ಲಿ ಜನರ ಆಕ್ರೋಶಕ್ಕೆ ಆಡಳಿತವೇ ಬದಲಾಗಿದ್ದು, ಜನರ ತಾಳ್ಮೆಯನ್ನು ಸರ್ಕಾರಗಳು ಪರೀಕ್ಷಿಸಬಾರದು. ದೇಶದಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ, ಕಾರ್ಮಿಕ ಕಾನೂನುಗಳನ್ನು ಉಳಿಸಿಕೊಳ್ಳಬೇಕು. ಸ್ಕೀಂ ನೌಕರರಿಗೆ ಕನಿಷ್ಠ ₹ 31 ಸಾವಿರ ಕೂಲಿ ಕೊಡಬೇಕು. ಎಲ್ಲ ಉತ್ಪನ್ನಗಳ ದರ ಏರಿಸುವ ಸರ್ಕಾರಗಳು ಕಾರ್ಮಿಕರ ಕೂಲಿಯನ್ನೂ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.
ಬಹಿರಂಗ ಸಭೆಗೂ ಮುನ್ನ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಎದುರಿನ ಸಮಾಜ ಕಲ್ಯಾಣ ಇಲಾಖೆ ಕಚೇರಿ ತನಕ ಜಾಥಾ ನಡೆಯಿತು. ಬಳಿಕ ನಗರದ ಕನ್ನಡ ಭವನದಲ್ಲಿ ಸಿಐಟಿಯು ಪ್ರತಿನಿಧಿಗಳ ಸಭೆ ನಡೆಯಿತು. ಸಿಐಟಿಯು ಜಿಲ್ಲಾ ಘಟಕದಿಂದ ಕಳೆದ ಮೂರು ವರ್ಷಗಳಲ್ಲಿ ಮಾಡಿದ ಕಾರ್ಯಕ್ರಮಗಳ ಅವಲೋಕನ ನಡೆಯಿತು. ಮುಂದಿನ ಹೋರಾಟದ ರೂಪುರೇಷಗಳ ಕುರಿತು ಚರ್ಚಿಸಲಾಯಿತು.
ಸಿಐಟಿಯು ಜಿಲ್ಲಾಧ್ಯಕ್ಷೆ ಶಾಂತಾ ಎನ್.ಘಂಟಿ, ಉಪಾಧ್ಯಕ್ಷರಾದ ಗೌರಮ್ಮ ಪಾಟೀಲ, ಖಜಾಂಚಿ ನಾಗಯ್ಯ ಸ್ವಾಮಿ, ಭೀಮಶೆಟ್ಟಿ ಯಂಪಳ್ಳಿ, ಶರಣಬಸಪ್ಪ ಮಮಶೆಟ್ಟಿ, ಶ್ರೀಮಂತ ಬಿರಾದಾರ, ರಾಜಮತಿ ಪಾಟೀಲ, ವಿಜಯಲಕ್ಷ್ಮಿ ಹಿರೇಮಠ, ಅಯ್ಯಪ್ಪ, ಜಮೀಲ್ ಆಲಂ, ಬಾಬು ಹೂವಿನಹಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸಿಐಟಿಯು ಜಿಲ್ಲಾ ಸಂಘಟನೆಯಲ್ಲಿ ಸದ್ಯ 6500 ಸದಸ್ಯರಿದ್ದು ಮುಂದಿನ ಅವಧಿಯಲ್ಲಿ ಅದನ್ನು 10 ಸಾವಿರಕ್ಕೆ ಹೆಚ್ಚಿಸಿರುವ ಗುರಿಯಿದೆ.– ಎಂ.ಬಿ.ಸಜ್ಜನ, ಸಿಐಟಿಯು ಪ್ರಧಾನ ಕಾರ್ಯದರ್ಶಿ
ಸಮ್ಮೇಳನದ ನಿರ್ಣಯಗಳು...
* ಕನಿಷ್ಠ ಕೂಲಿ ವಿಷಯವು ಮಾಲೀಕರ ಒತ್ತಡಕ್ಕೆ ಮಣಿದು ನನೆಗುದಿಗೆ ಬಿದ್ದಿದೆ. ಅದನ್ನು ತಾರ್ಕಿಕ ಹಂತಕ್ಕೆ ಒಯ್ಯಬೇಕು.
* ಗುತ್ತಿಗೆ ಆಧಾರದ ನೇಮಕಾತಿ ರದ್ದುಗೊಳಿಸಬೇಕು.
* ಅಂಗನವಾಡಿಗಳಲ್ಲಿ ತಂದಿರುವ ಎಫ್‌ಆರ್‌ಎಸ್ (ಫೇಸ್ ರೆಕಗ್ನೇಷನ್ ಸಿಸ್ಟಂ) ವ್ಯವಸ್ಥೆ ಕೈಬಿಡಬೇಕು.
* ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು
* ಕಲ್ಯಾಣ ಕರ್ನಾಟಕದಲ್ಲಿನ ಅತಿವೃಷ್ಟಿ ಹಿನ್ನೆಲೆಯಲ್ಲಿ ರೈತರಿಗೆ ಕೂಡಲೇ ಪರಿಹಾರ ನೀಡಬೇಕು.
* ಮುಂದಿನ ದಿನಗಳಲ್ಲಿ ಹಾಸನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಮ್ಮೇಳನದ ತನಕ ಸಿಐಟಿಯು ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಮುಂದುವರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.