ADVERTISEMENT

ಆರೋಗ್ಯಕ್ಕೆ ಯೋಗ, ವ್ಯಾಯಾಮ ಪೂರಕ; ದಯಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 15:53 IST
Last Updated 16 ನವೆಂಬರ್ 2022, 15:53 IST
ಕಲಬುರಗಿಯ ಪೊಲೀಸ್ ಕವಾಯತ್‌ ಮೈದಾನದಲ್ಲಿ ಬುಧವಾರ ನಡೆದ ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ ಕ್ರೀಡಾಜ್ಯೋತಿ ಸ್ವೀಕರಿಸಿದರು. ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಎಸಿಪಿ ಎಂ.ಎನ್.ದೀಪನ್ ಇದ್ದಾರೆ
ಕಲಬುರಗಿಯ ಪೊಲೀಸ್ ಕವಾಯತ್‌ ಮೈದಾನದಲ್ಲಿ ಬುಧವಾರ ನಡೆದ ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ ಕ್ರೀಡಾಜ್ಯೋತಿ ಸ್ವೀಕರಿಸಿದರು. ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಎಸಿಪಿ ಎಂ.ಎನ್.ದೀಪನ್ ಇದ್ದಾರೆ   

ಕಲಬುರಗಿ: ‘ಜಿಮ್‌ನಲ್ಲಿ ದೇಹ ದಂಡಿಸುವುದಕ್ಕಿಂತ ನಿತ್ಯ ಯೋಗಾಸನ, ವ್ಯಾಯಾಮ ಮಾಡಿ ಶಾಶ್ವತ ಆರೋಗ್ಯ ಹೊಂದಬೇಕು’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ ಹೇಳಿದರು.

ಇಲ್ಲಿನ ಪೊಲೀಸ್ ಕವಾಯತ್‌ ಮೈದಾನದಲ್ಲಿ ಬುಧವಾರ ನಡೆದ ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರೋಗ್ಯ ಸಂಪತ್ತು ಎಲ್ಲಕ್ಕಿಂತ ಮಿಗಿಲಾದದ್ದು. ಸಮಾಜ ರಕ್ಷಣೆಯ ಹೊಣೆ ಹೊತ್ತವರು ತಮ್ಮ ಆರೋಗ್ಯದತ್ತ ಹೆಚ್ಚಿನ ಗಮನ ಹರಿಸಬೇಕು. ಆರೋಗ್ಯವಾಗಿ ಇದ್ದಾಗ ಮಾತ್ರವೇ ಕುಟುಂಬ, ಸಮಾಜ, ನಾಡು ಮತ್ತು ದೇಶ ಕಾಯಲು ಸಾಧ್ಯ’ ಎಂದರು.

ADVERTISEMENT

‘ಪೊಲೀಸ್ ಇಲಾಖೆ ಶಿಸ್ತು, ಸಂಯಮ, ಧೈರ್ಯಕ್ಕೆ ಹೆಸರುವಾಸಿಯಾಗಿದೆ. ಗಡಿಯಲ್ಲಿ ಸೈನಿಕರು ದೇಶವನ್ನು ಕಾಯುವಂತೆ ದೇಶದ ಒಳಗೆ ಪೊಲೀಸರು 24x7ಸಮಾಜವನ್ನು ಕಾಯುತ್ತಿದ್ದಾರೆ. ಕಂದಾಯ ಇಲಾಖೆ ಸಹ ಸಾರ್ವಜನಿಕರಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ಈ ಇಲಾಖೆಗಳಲ್ಲಿ ಇರುವವರು ಕರ್ತವ್ಯದ ಜತೆಗೆ ತಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕ್ರೀಡೆಗಳು ನಮ್ಮಲ್ಲಿ ಒಗ್ಗಟ್ಟಿನ ಮನೋಭಾವ ಮೂಡಿಸಿ, ಸಹ ಬಾಳ್ವೆಯಿಂದ ಬದುಕುವಂತೆ ಪ್ರೇರೇಪಿಸುತ್ತವೆ. ಆಟ ಆಡುವಾಗ ಎಲ್ಲರೂ ಭೇದಭಾವ ಮರೆತು ಒಂದಾಗಿ, ಮೇಲು–ಕೀಳು ಎನ್ನದೆ ಸ್ಪರ್ಧಿಸುತ್ತಾರೆ. ಕ್ರೀಡೆಯಲ್ಲಿ ತೀರ್ಪುಗಾರರ ನಿರ್ಧಾರಗಳಿಗೆ ಬದ್ಧರಾಗಿ ಇರಬೇಕು. ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸಿ, ನಿಮ್ಮ ಘಟಕಕ್ಕೆ ಕೀರ್ತಿ ತರಬೇಕು’ ಎಂದು ಹೇಳಿದರು.

‘ನಮ್ಮ ಸುತ್ತಲೂ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕದಂತಹ ಅನಿಷ್ಟ ಪದ್ಧತಿಗಳು ಇನ್ನು ಜೀವಂತವಾಗಿವೆ. ನಿಮ್ಮ ಸುತ್ತ ಬಾಲ್ಯ ವಿವಾಹ, ಬಾಲ ಕಾರ್ಮಿಕ ಆಚರಣೆ ಕಂಡುಬಂದಲ್ಲಿ ಅದರ ನಿಯಂತ್ರಣಕ್ಕೆ ಪ್ರಯತ್ನಿಸಿ’ ಎಂದು ತಿಳಿಸಿದರು.

ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ,ಎಸಿಪಿಗಳಾದ ಎಂ.ಎನ್.ದೀಪನ್. ಡಿ.ಎಂ. ಗಂಗಾಧರ, ಗೀತಾ ಬೇನಾಳ, ಸುಧಾ ಆಡಿ, ಬಿ.ಗಿರೀಶ್, ಎಸಿಪಿ ಸಿಆರ್ ಶಾಂತಕುಮಾರ ಗಾಯಕ್ವಾಡ್, ಸಿಪಿಐಗಳಾದ ರಾಜಶೇಖರ ಹಳಗೋಧಿ, ಸಚಿನ ಚಲವಾದಿ, ಪಂಡಿತ್ ಸಗರ್, ಚಂದ್ರಶೇಖರ ತಿಗಡಿ, ಅರುಣ ಮರಗುಂಡಿ, ಸದಾಶಿವ ಸೋನಾವಣೆ, ರಮೇಶ ಕಾಂಬಳೆ, ಸಂತೋಷ ತಟ್ಟೆಪಲ್ಲಿ, ಶಾಂತಿನಾಥ, ಅಮರೇಶ್, ಶಿವಾನಂದ ಗಾಣಗೇರ, ಬೋಜರಾಜ ರಾಠೋಡ, ಮಹಾದೇವ ಪಾಟೀಲ, ಶಿವುಕುಮಾರ ಮುದ್ದಾ ಸೇರಿ ಎಲ್ಲ ಠಾಣೆಗಳ ಪಿಎಸ್‌ಐ, ಸಿಬ್ಬಂದಿ ಇದ್ದರು.

6 ತಂಡಗಳಾಗಿ ರಚನೆ

ಕ್ರೀಡಾಕೂಟದಲ್ಲಿ ಸಿಎಆರ್ ವಿಭಾಗ, ಉತ್ತರ ಉಪ ವಿಭಾಗ, ದಕ್ಷಿಣ ಉಪ ವಿಭಾಗ, ಉಪನಗರ ಉಪವಿಭಾಗ, ವಿಶೇಷ ಘಟಕ ಹಾಗೂ ಮಹಿಳಾ ವಿಭಾಗಗಳಾಗಿ ಆರು ತಂಡ ರಚಿಸಲಾಗಿದೆ.

ನೂರಾರು ಪೊಲೀಸ್ ಕ್ರೀಡಾಪಟುಗಳು ಪರೇಡ್ ನಡೆಸಿದ್ದು, ಆರ್‌ಪಿಐ ಸಿಎಆರ್‌ ಶಿವಕುಮಾರ ಅವರು ಪರೇಡ್ ಕಮಾಂಡರ್ ಆಗಿದ್ದರು. ಕೆಎಸ್‌ಆರ್‌ಪಿ 6ನೇ ಪಡೆಯ ಅರ್ಜುನ ಆರ್‌ಎಸ್‌ಐ ಮಾಸ್ಟರ್ ತಂಡದ ಪೊಲೀಸ್ ವಾದ್ಯ ವೃಂದ ಬ್ಯಾಂಡ್‌ ನುಡಿಸಿತು.

ಮೊದಲ ದಿನದಂದು 100 ಮೀಟರ್ ಓಟ, ಗುಂಡು ಎಸೆತ, ಚಕ್ರ ಎಸೆತ, ವಾಲಿಬಾಲ್, ಕ್ರಿಕೆಟ್ ಸೇರಿ ಇತರೆ ಕ್ರೀಡೆಗಳು ಜರುಗಿದವು. ಪೋಲಿಸ್ ಮತ್ತು ಮಾಧ್ಯಮ ತಂಡಗಳ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಮಾಧ್ಯಮ ತಂಡ ಜಯಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.