ಕಲಬುರಗಿ: ಚಾಮರಾಜನಗರ ಜಿಲ್ಲೆಯ ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ದಲಿತ ಮಹಿಳೆ ತಯಾರಿಸಿದ ಬಿಸಿಯೂಟ ಮಾಡುವುದನ್ನು ತಪ್ಪಿಸಲು ಮಕ್ಕಳ ಪೋಷಕರು ಶಾಲೆಯನ್ನು ಬಿಡಿಸಿದ ಕ್ರಮಕ್ಕೆ ದಲಿತ ಮಾದಿಗ ಸಮನ್ವಯ ಸಮಿತಿ ಬೇಸರ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ಇಂಥ ಸುದ್ದಿಗಳು ಪ್ರತಿನಿತ್ಯ ವರದಿಯಾಗುವುದನ್ನು ಗಮನಿಸುತ್ತಿದ್ದರೆ ಜಾತಿ ಪದ್ಧತಿಯು ದೇಶದೆಲ್ಲೆಡೆ ಇನ್ನೂ ಜೀವಂತವಾಗಿರುವುದು ಎದ್ದು ಕಾಣುತ್ತದೆ. ಅಕ್ಷರಸ್ಥ ನಾಗರಿಕ ಸಮಾಜದ ನಿರ್ಮಾಣ ಹಾಗೂ ಜಾತಿ ಪದ್ಧತಿಯ ನಿವಾರಣೆ ಕನಸಾಗಿಯೇ ಉಳಿಯಬಹುದೇನೋ ಅನ್ನುವ ಕಲ್ಪನೆ ಮೂಡಿದೆ. ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿ ಹೀಗೆಯೇ ಮುಂದುವರಿದಲ್ಲಿ ವಿಶ್ವ ಮಾನವ ಸಂದೇಶಗಳು ಕಾರ್ಯರೂಪಕ್ಕೆ ಬರುವುದು ಯಾವಾಗ? ಈ ಕಾರಣಕ್ಕಾಗಿ ಡಾ. ಅಂಬೇಡ್ಕರ್ ಹಿಂದೂ ಧರ್ಮದಿಂದ ಆಗುವಂಥ ಅಪಮಾನಗಳನ್ನು ಪ್ರಶ್ನಿಸಿ ‘ನನಗಾದ ಅಪಮಾನ ನನ್ನ ಜನರಿಗೆ ಆಗಬಾರದು’ ಎಂದು ಹಿಂದೂ ಧರ್ಮವನ್ನು ತ್ಯಜಿಸಿ, ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಇಂಥ ಅಪಮಾನಕರ ಘಟನೆಗಳು ನಡೆದಾಗ ಹಿಂದುಗಳೆಲ್ಲ ಒಂದೇ ಎಂದು ಹೇಳುವ ಆರ್‌ಎಸ್‌ಎಸ್, ಸಂಘಪರಿವಾರದವರು ಮತ್ತು ಮಠಾಧೀಶರು ಏಕೆ ಖಂಡಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.