ಕಲಬುರಗಿ: ಜನತೆ ನಾಡಹಬ್ಬ ದಸರಾ ಸಡಗರದಲ್ಲಿದ್ದಾರೆ. ಬುಧವಾರ ಮಹಾನವಮಿ(ಆಯುಧ ಪೂಜೆ), ಗುರುವಾರ ದಶಮಿ ಆಚರಣೆಗೆ ಸಜ್ಜಾಗುತ್ತಿದ್ದಾರೆ. ಹಬ್ಬದ ಸಂಭ್ರಮಕ್ಕೆ ಹೂವುಗಳು ಬೇಕೆಬೇಕು. ಆದರೆ, ಮಾರುಕಟ್ಟೆಯಲ್ಲಿ ಹೂವುಗಳ ದರ ಗಗನಕ್ಕೇರಿದ್ದು, ಗ್ರಾಹಕರು ಗ್ರಾಂ ಲೆಕ್ಕದಲ್ಲಿ ಖರೀದಿ ಮಾಡುತ್ತಿದ್ದಾರೆ!
ಹೂವುಗಳ ದರ ಹೆಚ್ಚಳಕ್ಕೆ ನಿರಂತರ ಮಳೆಯೇ ಕಾರಣ. ಖರೀದಿಗಾದರೂ ಮಳೆ ಬಿಡುವು ನೀಡಿದೆ ಎಂದು ಸಾರ್ವಜನಿಕರು ಮಂಗಳವಾರ ಸೂಪರ್ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಂದ ಚೌಕಾಸಿ ಮಾಡಿ ಹೂವುಗಳನ್ನು ಕೊಂಡುಕೊಳ್ಳುತ್ತಿರುವುದು ಕಂಡುಬಂತು.
‘ಬಟನ್ ರೋಜ್ ಮತ್ತು ಸಾಮಾನ್ಯ ಗುಲಾಬಿ ಹೂವುಗಳನ್ನು ಕೆ.ಜಿಗೆ ತಲಾ ₹800ರಂತೆ ತಂದಿದ್ದು, ಚಟಾಕ್ (50 ಗ್ರಾಂ) ಹೂವುಗಳಿಗೆ ₹50ರಂತೆ ಮಾರಾಟ ಮಾಡುತ್ತಿದ್ದೇವೆ. ಸೇವಂತಿ ಹೂವು ₹50ಕ್ಕೆ 100 ಗ್ರಾಂ ಕೊಡುತ್ತಿದ್ದೇವೆ. ಮೊದಲೆಲ್ಲ ದರ ಕಡಿಮೆ ಇದ್ದುದ್ದರಿಂದ ಜನ ಕೆ.ಜಿ ಲೆಕ್ಕದಲ್ಲಿ ಖರೀದಿಸುತ್ತಿದ್ದರು’ ಎನ್ನುತ್ತಾರೆ ವ್ಯಾಪಾರಿ ರುಕ್ಮಾಬಾಯಿ.
ಚೆಂಡು ಹೂವುಗಳನ್ನು ಬಿಡಿ ಮತ್ತು ಹಾರದ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಒಂದು ಕೆ.ಜಿ ಬಿಡಿ ಚೆಂಡು ಹೂವಿನ ದರ ₹100 ಇದ್ದರೆ, ಕಟ್ಟಿದ ಹಾರಗಳನ್ನು ₹50ಕ್ಕೆ ಎರಡು ಮೊಳ ಕೊಡಲಾಗುತ್ತಿದೆ. ನಾಲ್ಕೈದು ಬಣ್ಣಗಳಲ್ಲಿರುವ ಸೇವಂತಿ ದರ ಕೂಡ ಇದೇ ಆಗಿದೆ. ಚೆಂಡು ಹೂವಿನ ಗಿಡ ಮತ್ತು ಮಾವಿನ ಎಲೆಯ ಗೊಂಚಲುಗಳನ್ನು ಹಿಡಿ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದ್ದು, ₹20 ದರ ಇದೆ.
‘ಬೂದುಗುಂಬಳಕಾಯಿ ಗಾತ್ರಕ್ಕೆ ತಕ್ಕಂತೆ ₹100, ₹50, ₹30ರ ದರದಲ್ಲಿ ಮಾರಾಟವಾಗುತ್ತಿವೆ. ಕಬ್ಬು ಜೋಡಿಗೆ ₹50, ಬಾಳೆದಿಂಡು ₹50ರಂತೆ ಕೊಡುತ್ತಿದ್ದೇವೆ. ಎರಡನ್ನೂ ಖರೀದಿಸಿದರೆ ₹80ಕ್ಕೆ ಮಾರುತ್ತಿದ್ದೇವೆ’ ಎಂದು ರಾಜಶೇಖರ ಭಾಗೋಡಿ ಮಾಹಿತಿ ನೀಡಿದರು.
ದೇವಿ ಮತ್ತು ವಾಹನಗಳ ಪೂಜೆಯ ವೇಳೆ ಹಣ್ಣುಗಳನ್ನು ಇಡುವುದು ವಾಡಿಕೆ. ಅವುಗಳ ದರವೂ ಹೆಚ್ಚಾಗಿದ್ದರಿಂದ ವ್ಯಾಪಾರಿಗಳು ಗ್ರಾಹಕರ ಆಲೋಚನೆಗೆ ತಕ್ಕಂತೆ ಎಲ್ಲಾ ಹಣ್ಣುಗಳನ್ನು ಸಣ್ಣಸಣ್ಣ ಪ್ಲಾಸ್ಟಿಕ್ ಬುಟ್ಟಿಗಳಲ್ಲಿಟ್ಟು ₹100ಕ್ಕೆ ಮಾರಾಟ ಮಾಡುತ್ತಿದ್ದಾರೆ. ಅದರಲ್ಲಿ ಸಣ್ಣ ಗಾತ್ರದ ಸೇಬು, ಚಿಕ್ಕು, ಸೀತಾಫಲ, ಮೂಸಂಬಿ ಹಣ್ಣುಗಳಿವೆ. ಇನ್ನು ಡಜನ್ ಬಾಳೆಹಣ್ಣು ದರ ₹40 ಮತ್ತು 16 ವೀಳ್ಯೆದೆಲೆಗಳ ಕಟ್ಟಿನ ದರ ₹20 ಇದೆ.
ದಸರಾ ಹಬ್ಬದ ನಿಮಿತ್ತ ಬಂಗಾರ ಮತ್ತು ಬೆಳ್ಳಿ ಎಂದು ನೀಡುವ ಬನ್ನಿ ಮರ ಮತ್ತು ಆರಿ ಗಿಡದ ಕೊಂಬೆಗಳನ್ನು ಹಿಡಿಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ಮತ್ತು ತಾಂಡಾಗಳ ಬಂಜಾರ ಸಮುದಾಯದ ಮಹಿಳೆಯರು ಹೊರೆಗಳಲ್ಲಿ ಮಾರುಕಟ್ಟೆಗೆ ತಂದಿದ್ದು, ₹20ಕ್ಕೆ ಹಿಡಿ ಕೊಡುತ್ತಿದ್ದಾರೆ.
ದಸರಾ ಹಬ್ಬದಲ್ಲಿ ದೇವಿ ಮತ್ತು ವಾಹನಗಳ ಪೂಜೆಗೆ ಹೂವು ಕಡ್ಡಾಯವಾಗಿ ಬೇಕು. ಹಾಗಾಗಿ ₹100 ಕೊಟ್ಟು ಕೆ.ಜಿ ಚೆಂಡು ಹೂವು ₹50ರಲ್ಲಿ 100 ಗ್ರಾಂ ಸೇವಂತಿ ಹೂವು ಖರೀದಿಸಿದ್ದೇನೆಶರಣಪ್ಪ ನಂದೂರ ಗ್ರಾಹಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.