ADVERTISEMENT

ಕಲಬುರಗಿ ಅಭಿವೃದ್ಧಿಗೆ ಕೊಡುಗೆ ಏನು?

ಶಾಸಕ ಅಲ್ಲಮಪ್ರಭುಗೆ ದತ್ತಾತ್ರೇಯ ಪಾಟೀಲ ರೇವೂರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 6:21 IST
Last Updated 19 ಜುಲೈ 2025, 6:21 IST
ದತ್ತಾತ್ರೇಯ ಪಾಟೀಲ ರೇವೂರ
ದತ್ತಾತ್ರೇಯ ಪಾಟೀಲ ರೇವೂರ   

ಕಲಬುರಗಿ: ‘ಲಿಂಗರಾಜ ಕಣ್ಣಿ ಮಾದಕ ಔಷಧಿಗಳೊಂದಿಗೆ ಮಹಾರಾಷ್ಟ್ರದಲ್ಲಿ ಬಂಧಿತರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಲ್ಲಮಪ್ರಭು ಪಾಟೀಲರು ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ. ಅವರಿಗೆ ಕಿವಿ ದೋಷ ಎಂದು ಕೇಳಿದ್ದೆ. ಆದರೆ, ತಲೆ ಮತ್ತು ನಾಲಿಗೆ ದೋಷವೂ ಆದಂತಿದೆ’ ಎಂದು ಕಲಬುರಗಿ ದಕ್ಷಿಣಮತಕ್ಷೇತ್ರದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ವ್ಯಂಗ್ಯವಾಡಿದರು.

‘ಜನರು ನಿಮ್ಮನ್ನು ಅಭಿವೃದ್ಧಿ ಮಾಡಲಿ ಎಂದು ಚುನಾವಣೆಯಲ್ಲಿ ಆರಿಸಿದ್ದಾರೆ. ಎರಡು ವರ್ಷದಲ್ಲಿ ಕಲಬುರಗಿಗೆ ನಿಮ್ಮ ಕೊಡುಗೆ ಏನು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಶಾಸಕರು ಕುಂಭಕರ್ಣ ನಿದ್ದೆಯಲ್ಲಿ ಇದ್ದರೆನಿಸುತ್ತದೆ. ಕಣ್ಣಿ ಪ್ರಕರಣ ಮಾಧ್ಯಮಗಳಲ್ಲಿ ಹರಿದಾಡಿದ ವಾರದ ಬಳಿಕ ಎಚ್ಚೆತ್ತು ಪ್ರತಿಕ್ರಿಯಿಸಿದ್ದಾರೆ. ಅದರಲ್ಲೂ ಕಣ್ಣಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಕಣ್ಣಿ ಅವರೇನು ಪ್ರಥಮ ದರ್ಜೆ ಗುತ್ತಿಗೆದಾರರೇ? ನಿಮಗೆ ಇಷ್ಟ ಬಂದವರಿಗೆ, ಅರ್ಹತೆ ಇಲ್ಲದವರಿಗೆ ಕಾಮಗಾರಿ ಕೊಡುವುದು ಅಕ್ರಮ ಅಲ್ಲವೇ? ಜೊತೆಗೆ ಶಾಸಕರು ಎಲ್ಲ ಕೆಲಸಗಳನ್ನು ನಿರ್ಮಿತಿ ಕೇಂದ್ರ, ಕೆಆರ್‌ಐಡಿಲ್‌ಗೆ ಕೊಡುವುದಾದರೆ, ಪಿಡಬ್ಲ್ಯುಡಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗ ಏಕೆ ಬೇಕು’ ಎಂದು ಪ್ರಶ್ನಿಸಿದರು.

ADVERTISEMENT

‘ಲಿಂಗರಾಜ ಕಣ್ಣಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಶಾಸಕ ಅಲ್ಲಮಪ್ರಭು ಆದಷ್ಟು ಬೇಗ ಪತ್ರ ಬರೆಯಬೇಕು. ಈ ಮೂಲಕ ಪ್ರಕರಣದಲ್ಲಿ ಯಾರದೆಲ್ಲ ಕೈವಾಡವಿದೆ ಎಂಬುದು ತಿಳಿಯಬೇಕಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್‌ ವಿಶಾಲ ದರ್ಗಿ, ಮುಖಂಡರಾದ ರಾಜು ವಾಡೇಕರ, ಅಪ್ಪು ಕಣಕಿ, ಮಹಾದೇವ, ಶಿವಯೋಗಿ ಇದ್ದರು.

‘ಕಾವಿ ಬಟ್ಟೆ ಕಾಂಗ್ರೆಸ್‌ನಿಂದ ಬಾಡಿಗೆ ತಂದಿಲ್ಲ’ ‘ಲಿಂಗರಾಜ ಕಣ್ಣಿ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಲ್ಲಮಪ್ರಭು ಪಾಟೀಲರು ಸೇರಿದಂತೆ ಕಾಂಗ್ರೆಸ್‌ನವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಕಾವಿ ಕಳಚಿ ಮಾತನಾಡಲಿ ಎಂದು ತೇಜೋವಧೆ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್‌ ಕಚೇರಿಯಿಂದ ಕಾವಿ ಬಟ್ಟೆ ಬಾಡಿಗೆ ಪಡೆದಿಲ್ಲ. ಕಾವಿ ತ್ಯಾಗದ ಸಂಕೇತ’ ಎಂದು ಆಂದೋಲಾ ಸಿದ್ದಲಿಂಗ ಸ್ವಾಮೀಜಿ ತಿರುಗೇಟು ನೀಡಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಆಣೆ–ಪ್ರಮಾಣದ ಬಗೆಗೆ ಶಾಸಕರು ಮಾತನಾಡಿದ್ದಾರೆ. ನಮ್ಮ ವಿರುದ್ಧ ಆರೋಪ ಬಂದಾಗ ಅದನ್ನು ಕಾನೂನು ಬದ್ಧವಾಗಿ ಎದುರಿಸಿದ್ದೇವೆ. ಕಾಂಗ್ರೆಸ್‌ನವರು ದೈವೀ ಭಕ್ತರಲ್ಲ ಸಂವಿಧಾನದ ಭಕ್ತರು. ಗದ್ದುಗೆ ಮುಟ್ಟಲು ಮೊದಲು ಉಸ್ತುವಾರಿ ಸಚಿವರ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ವ್ಯಂಗ್ಯವಾಡಿದರು. ‘ದೇಶಕ್ಕಾಗಿ ನಾನು ಬಿಜೆಪಿ ಏಜೆಂಟ್‌ ಆಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್‌ ಏನು ಡ್ರಗ್ಸ್‌ ಕಂಪನಿ ಏಜೆಂಟಾ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.