ಕಲಬುರಗಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರದಲ್ಲಿ ಕಲಬುರಗಿ ಮೂಲದ ಅರ್ಥಶಾಸ್ತ್ರಜ್ಞ ಎಸ್.ಪಿ.ಕೊಠಾರಿ ಅವರು ಉನ್ನತ ಸ್ಥಾನ ಪಡೆದಿದ್ದಾರೆ.
ಇಲ್ಲಿನ ಎನ್.ವಿ. ವಿದ್ಯಾಸಂಸ್ಥೆಯಲ್ಲಿ ಅಧ್ಯಯನ ಮಾಡಿರುವ ಕೊಠಾರಿ ಅವರನ್ನು ಅಮೆರಿಕದ ಖಜಾನೆ ಇಲಾಖೆಯ ಆರ್ಥಿಕ ನೀತಿ ಸಹಾಯಕ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಈ ಕುರಿತು ಕೊಠಾರಿ ಅವರಿಗೆ ಪತ್ರ ಬರೆದಿರುವ ಶ್ವೇತ ಭವನದ ಖಜಾನೆ ಇಲಾಖೆಯ ಲೈಸನ್ ಅಧಿಕಾರಿ ಜಿಲಿಯನ್ ವ್ಯಾಂಟ್ ಅವರು, ‘ಅಮೆರಿಕದ ಸಿನೆಟ್‌ನ ಒಪ್ಪಿಗೆ ಹಾಗೂ ಅಮೆರಿಕ ಅಧ್ಯಕ್ಷರ ಅನುಮೋದನೆಯೊಂದಿಗೆ ಹುದ್ದೆಯನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಕೊಠಾರಿ ಅವರು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಮತ್ತು ಅಮೆರಿಕದ ಅಯೊವಾ ವಿ.ವಿ.ಯಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.
2015ರಿಂದ 2019ರವರೆಗೆ ದೇಶದ ಪ್ರಮುಖ ಷೇರುಪೇಟೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರವು ಇವರ ಸಾಧನೆಯನ್ನು ಗುರುತಿಸಿ 2020ರಲ್ಲಿ ಪದ್ಮಶ್ರೀ ಪದವಿ ನೀಡಿ ಗೌರವಿಸಿದೆ. ದಶಕಗಳಿಂದ ಅಮೆರಿಕದಲ್ಲಿ ನೆಲೆಸಿರುವ ಕೊಠಾರಿ ಅವರು ಅಲ್ಲಿನ ಎಂಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಲೆಕ್ಕಪತ್ರ ಮತ್ತು ಹಣಕಾಸು ವಿಭಾಗದ ಪ್ರಾಧ್ಯಾಪಕರಾಗಿ, ಡೆಪ್ಯೂಟಿ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. 2019ರಿಂದ 2021ರವರೆಗೆ ಯುಎಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಆಯೋಗದಲ್ಲಿ ಆರ್ಥಿಕ ಮತ್ತು ಅಪಾಯ ವಿಶ್ಲೇಷಣೆ ವಿಭಾಗದ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.