ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ಕಲಬುರಗಿ: ಮೂರನೇ ಸೆಮಿಸ್ಟರ್ ಶುಲ್ಕ ಪಾವತಿಸಲು ಆಗದಿರುವುದರಿಂದ ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ತಾಜ್ ಸುಲ್ತಾನಪುರ ನಿವಾಸಿ ಭಾಗ್ಯಶ್ರಿ ಚಿಟಗುಪ್ಪಿ ಮೃತ ವಿದ್ಯಾರ್ಥಿನಿ.
‘ಪಿಯುಸಿ ಮುಗಿಸಿದ ಬಳಿಕ ಭಾಗ್ಯಶ್ರೀ ಜಿದ್ದಿಗೆ ಬಿದ್ದು ನಗರದ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಳು. ತಂದೆಯೂ ಇಲ್ಲ. ನಾನು ದುಡಿಯುವ ಸಂಬಳದಿಂದ ಎಂಜಿನಿಯರಿಂಗ್ ಓದಿಸಲು ಆಗಲ್ಲ. ಬಿಸಿಎ ಓದು ಎಂದು ಹೇಳಿದರೂ ಕೇಳಿರಲಿಲ್ಲ. ಬಳಿಕ ₹1.25 ಲಕ್ಷ ಕೊಟ್ಟು ಕಾಲೇಜಿಗೆ ಪ್ರವೇಶ ಪಡೆದಿದ್ದಳು. 3ನೇ ಸೆಮಿಸ್ಟರ್ ಶುಲ್ಕ ಕಟ್ಟಲು ಸೆಪ್ಟೆಂಬರ್ 10 ಕೊನೆ ದಿನವಾಗಿತ್ತು. ಶುಲ್ಕ ಪಾವತಿಸುವಂತೆ ಕೇಳಿಕೊಂಡಿದ್ದಳು. ಅಷ್ಟೊಂದು ಹಣ ಕಟ್ಟಲು ಆಗಲ್ಲ ಎಂದು ಹೇಳಿ ನಾನು ಅಂಗನವಾಡಿಗೆ ಹೋಗಿದ್ದೆ. ನನ್ನ ಇನ್ನೊಬ್ಬ ಮಗಳು ಶಾಲೆಗೆ ಹೋಗಿದ್ದಳು. ಮೂರನೇ ಸೆಮಿಸ್ಟರ್ ಶುಲ್ಕ ಕಟ್ಟದಿರುವುದನ್ನು ಮನಸ್ಸಿಗೆ ತೆಗೆದುಕೊಂಡು ಭಾಗ್ಯಶ್ರೀ ನೇಣುಹಾಕಿಕೊಂಡಿದ್ದಾಳೆ’ ಎಂದು ಆಕೆಯ ತಾಯಿ ಅಂಗನವಾಡಿ ಶಿಕ್ಷಕಿ ಮಹಾನಂದಾ ಚಿಟಗುಪ್ಪಿ ದೂರಿನಲ್ಲಿ ತಿಳಿಸಿದ್ದಾರೆ. ಚೌಕ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.