ಪ್ರವಾಹದಿಂದ ಕಲಬುರಗಿ-ಜೇವರ್ಗಿ ಸೇತುವೆ ಮುಳುಗಡೆ: ಊಟಕ್ಕೆ ಪರದಾಡಿದ ಲಾರಿ ಚಾಲಕರು
ಕಲಬುರಗಿ: ಮಹಾರಾಷ್ಟ್ರದ ಸೀನಾ, ಉಜನಿ, ವೀರ್ ಜಲಾಶಯಗಳಿಂದ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜಿಗೆ 2.85 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಇದರಿಂದಾಗಿ ಕಲಬುರಗಿ-ಜೇವರ್ಗಿ ಮಧ್ಯದ ಕೋನ ಹಿಪ್ಪರಗಾ ಸಮೀಪದ ಮತ್ತೊಂದು ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಕಳೆದ ಎರಡು ದಿನಗಳಿಂದ ಭಾರಿ ವಾಹನಗಳು ರಸ್ತೆ ಬದಿ ನಿಂತಿವೆ. ಲಾರಿ ಚಾಲಕರು, ಕ್ಲೀನರ್ ಗಳು ಊಟಕ್ಕಾಗಿ ಪರದಾಡುತ್ತಿದ್ದು, ಶುದ್ಧ ಕುಡಿಯುವ ನೀರೂ ಸಿಗುತ್ತಿಲ್ಲ. ಕೋನ ಹಿಪ್ಪರಗಾ ಸೇತುವೆ ಬಳಿ ಪರಿಶೀಲನೆಗೆ ಬಂದಿದ್ದ ಕಲಬುರಗಿ ಉಪವಿಭಾಗಾಧಿಕಾರಿ ಸಾಹಿತ್ಯ ಆಲದಕಟ್ಟಿ ಅವರನ್ನು ಲಾರಿ ಚಾಲಕ ಅಷ್ಪಾಕ್ ವಾಹನ ಸಂಚಾರ ಆರಂಭವಾಗುವವರೆಗೆ ಊಟ, ಕುಡಿಯುವ ಒದಗಿಸುವಂತೆ ಒತ್ತಾಯಿಸಿದರು.
ಸಾಹಿತ್ಯ ಅವರು ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳಿಗೆ ಫರಹತಾಬಾದ್ ಬಳಿ ಕಾಳಜಿ ಕೇಂದ್ರ ತೆರೆದು ಊಟ ಪೂರೈಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಪಾಯಕಾರಿ ಸಂಚಾರ: ಸೇತುವೆಯ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಿದರೂ ಬೈಕ್ ಸವಾರರು, ಪಾದಚಾರಿಗಳು ನೀರಿನಲ್ಲಿ ದಾಟಿಕೊಂಡು ಬಂದರು. ಇದನ್ನು ಗಮನಿಸಿದ ತಹಶೀಲ್ದಾರ್ ಕೆ.ಆನಂದಶೀಲ್ ಹಾಗೂ ಪೊಲೀಸರು ಪ್ರವಾಹದ ನೀರಿನಲ್ಲಿ ಬರದಂತೆ ತಾಕೀತು ಮಾಡಿದರು. ಆದಾಗ್ಯೂ ಜನರು ಬರುವುದು ಮುಂದುವರಿದೇ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.