ADVERTISEMENT

‘ಕನ್ನಡದ ಮೊದಲ ಗ್ರಂಥ ನೀಡಿದ ಕಲಬುರಗಿ’

ನಗರೇಶ್ವರ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿದ ಸಚಿವ ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 8:06 IST
Last Updated 2 ನವೆಂಬರ್ 2021, 8:06 IST
ಕಲಬುರಗಿಯ ನಗರೇಶ್ವರ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಮುರುಗೇಶ ನಿರಾಣಿ ಅವರು ಕನ್ನಡತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು. ಡಾ. ಅವಿನಾಶ್ ಜಾಧವ್, ಬಸವರಾಜ ಮತ್ತಿಮೂಡ, ದತ್ತಾತ್ರೇಯ ಪಾಟೀಲ ರೇವೂರ ಇದ್ದರು
ಕಲಬುರಗಿಯ ನಗರೇಶ್ವರ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಮುರುಗೇಶ ನಿರಾಣಿ ಅವರು ಕನ್ನಡತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು. ಡಾ. ಅವಿನಾಶ್ ಜಾಧವ್, ಬಸವರಾಜ ಮತ್ತಿಮೂಡ, ದತ್ತಾತ್ರೇಯ ಪಾಟೀಲ ರೇವೂರ ಇದ್ದರು   

ಕಲಬುರಗಿ: ‘ಕನ್ನಡದ ಮೊಟ್ಟ ಮೊದಲ ಲಾಕ್ಷಣಿಕ ಗ್ರಂಥ ಕವಿರಾಜ ಮಾರ್ಗವನ್ನು ಜಗತ್ತಿಗೆ ನೀಡಿದ್ದು ಕಲಬುರಗಿ ಜಿಲ್ಲೆ. ರಾಷ್ಟ್ರಕೂಟ ಅರಸ ಅಮೋಘವರ್ಷ ನೃಪತುಂಗ ರಚಿಸಿದ ಕವಿರಾಜ ಮಾರ್ಗದಲ್ಲಿ ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ ಇತ್ತು ಎಂಬುದು ನಿಜವಾಗಿಯೂ ಹೆಮ್ಮೆ ಮೂಡಿಸುವಂಥದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದ ವತಿಯಿಂದ ಇಲ್ಲಿನ ನಗರೇಶ್ವರ ಶಾಲೆಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕವಿರಾಜ ಮಾರ್ಗದಲ್ಲಿ ಕನ್ನಡ ನಾಡಿನ ವೈಭವವನ್ನು ವಿವರಿಸಲಾಗಿದೆ. ಹೀಗಾಗಿ ಕನ್ನಡದ ಇತಿಹಾಸ ಇಲ್ಲಿಂದಲೇ ಆರಂಭವಾಗಿದೆ ಎಂಬುವುದು ಅತಿಶಯೋಕ್ತಿಯಲ್ಲ. ಜಿಲ್ಲೆಯ ಶಿವಶರಣೆ ದುಗ್ಗಳೆ, ಶಿವಶರಣರಾದ ಏಕಾಂತ ರಾಮಯ್ಯ, ಕೋಲು ಶಾಂತಯ್ಯ, ಜೇವರ್ಗಿ ಷಣ್ಮುಖ ಶಿವಯೋಗಿಗಳು, ಖ್ಯಾತ ತತ್ವಪದಕಾರ ಕಡಕೋಳ ಮಡಿವಾಳಪ್ಪ, ಚೆನ್ನೂರು ಜಲಾಲಸಾಬ್, ಖೈನೂರು ಕೃಷ್ಣಪ್ಪ, ರಾಮಪುರದ ಬಕ್ಕಪ್ಪ, ಮಶಾಕಸಾಬ್, ಚಂಡ್ರಿಕೆ ದಾಸರು ಅನುಭಾವ ಸಾಹಿತ್ಯಕ್ಕೆ ಕ್ರಿಯಾಶೀಲತೆಯನ್ನು ತಂದಿದ್ದಾರೆ. ಕಲ್ಯಾಣದ ಹೆಬ್ಬಾಗಿಲೆಂದು ಕರೆಸಿಕೊಳ್ಳುವ ಕಲಬುರಗಿ ಜಿಲ್ಲೆ ಸಾಹಿತ್ಯ, ಸಂಗೀತ, ಕಲೆ, ಸಾಂಸ್ಕೃತಿಕ ಸಿರಿವಂತಿಕೆಯ ಶ್ರೀಮಂತ ಪ್ರದೇಶ. ಜನಪದ ಸಾಹಿತ್ಯ, ಜನಪದ ಕಲೆಗಳು, ಶರಣರ ವಚನ ಸಾಹಿತ್ಯ, ದಾಸರ ಕೀರ್ತನೆಗಳು, ತತ್ವಪದ ಸಾಹಿತ್ಯ, ಸೂಫಿ–ಸಂತರ ಸಾಹಿತ್ಯಗಳ ಸಮನ್ವಯದ ಸಂಪದ್ಭರಿತ ತವರೂರಾಗಿದೆ‘ ಎಂದರು.

ADVERTISEMENT

’ಬಹುಧರ್ಮ, ಬಹುಭಾಷೆಗಳ ಭಾವೈಕ್ಯದ ಬೀಡು, ಕಲಬುರಗಿ ಹಲವು ಸಂಸ್ಕೃತಿ–ಉಪಸಂಸ್ಕೃತಿಯ ಸಮನ್ವಯದ ನೆಲವೂ ಹೌದು. ಕಾಯಕ, ದಾಸೋಹಕ್ಕೆ ತಮ್ಮದೇ ಆದ ಕಾಣಿಕೆ ನೀಡಿದ ಶರಣಬಸವೇಶ್ವರ ಪುಣ್ಯ ಸ್ಥಳ, ಮಾನವೀಯ ಮನದ ಮಹಾಸಂತ ಹಜರತ್ ಖಾಜಾ ಬಂದಾ ನವಾಜ್ ಅವರ ಪಾವನ ಭೂಮಿ ಇದಾಗಿದೆ ಎಂದು ನಿರಾಣಿ ಸ್ಮರಿಸಿದರು.

ಇದಕ್ಕೂ ಮುನ್ನ ಸಚಿವ ನಿರಾಣಿ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಸಮರ್ಪಣೆ ಮಾಡಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ್ ಜಾಧವ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಎಸ್ಪಿ ಇಶಾ ಪಂತ್, ಜಿ.ಪಂ. ಸಿಇಒ ಡಾ. ದಿಲೀಷ್ ಶಶಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ನಲಿನ್ ಅತುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.