
ಕಲಬುರಗಿ: ಇಲ್ಲಿನ ಗೋದುತಾಯಿ ನಗರದ ಶಿವಮಂದಿರ ಆವರಣದಲ್ಲಿ ಗುರುವಾರ ಸಂಜೆ ಶರಣಬಸವೇಶ್ವರರ ಮಹಾ ತೊಟ್ಟಿಲೋತ್ಸವ ಹಾಗೂ ಸಹಸ್ರ ದೀಪೋತ್ಸವದ ಸಂಭ್ರಮದಿಂದ ಜರುಗಿತು.
ದೇಗುಲದಲ್ಲಿ ಕಟ್ಟಿದ್ದ ಪುಷ್ಪಾಲಂಕೃತ ತೊಟ್ಟಿಲು ಜೀಕಲು ಬಡಾವಣೆಯ ಮಹಿಳೆಯರೆಲ್ಲ ಅಣಿಯಾಗಿದ್ದರು.
ಪುಟಾಣಿ ವೇದಿಕೆ ಕಾರ್ಯಕ್ರಮ ನಡೆಯಿತು. ಮುಖಂಡರಿಂದ ‘ಮಿತ ನುಡಿ’ಗಳ ಹಿತವಚನದ ಬಳಿಕ ದೀಪ ಪ್ರಜ್ವಲಿಸಲಾಯಿತು. ‘ಬಸವಲಿಂಗಾಯ ನಮಃ’, ‘ಶರಣಬಸವೇಶ್ವರ ಮಹಾರಾಜಕೀ ಜೈ’ ಇತ್ಯಾದಿ ಘೋಷಣೆಗಳು ಮೊಳಗಿದವು.
ಬಳಿಕ ಶಿವಮಂದಿರದ ಸುತ್ತಲೂ ಎಣ್ಣೆ ತುಂಬಿಕೊಂಡು ‘ಬೆಳಕು’ ಮಿನುಗಿಸಲು ಕಾತರಿಸುತ್ತಿದ್ದ ದೀಪಗಳನ್ನು ಭಕ್ತರು ಬೆಳಗಿದರು. ಅತ್ತ ದೀಪಗಳ ಬೆಳಕು ಮೂಡುತ್ತಿದ್ದರೆ ಇತ್ತ ದೇವಸ್ಥಾನದಲ್ಲಿ ಶರಣಬಸವೇಶ್ವರರ ಮಹಾತೊಟ್ಟಿಲೋತ್ಸವಕ್ಕೆ ಚಾಲನೆ ನೀಡಲಾಯಿತು. ನೂರಾರು ಮಹಿಳೆಯರ ಸಮ್ಮುಖದಲ್ಲಿ ಹಲವರು ಪುಷ್ಪಾಲಂಕೃತ ತೊಟ್ಟಿಲು ತೂಗಿ ಭಕ್ತಿ ಮೆರೆದರು.
ಇದಕ್ಕೂ ಮುನ್ನ ಮಾತನಾಡಿದ ಲಿಂಗರಾಜಪ್ಪ ಅಪ್ಪ, ‘2002ರಲ್ಲಿ ಪುಷ್ಯ ಮಾಸದ 6ನೇ ದಿನದಂದು ಬಸವರಾಜಪ್ಪ ಅಪ್ಪ ಶರಣಬಸವೇಶ್ವರರ ಮಹಾತೊಟ್ಟಿಲೋತ್ಸವ ಶುರು ಮಾಡಿದ್ದರು. ಆ ವರ್ಷ ನನ್ನ ಮಗ ಹುಟ್ಟಿದ್ದ. 23 ವರ್ಷಗಳಿಂದ ಮಹಾತೊಟ್ಟಿಲೋತ್ಸವ ನಡೆದುಕೊಂಡು ಬರುತ್ತಿದೆ. ಈ ತೊಟ್ಟಿಲು ಪೂಜಿಸಿದರೆ ಖಂಡಿತ ಒಳ್ಳೆಯದಾಗುತ್ತದೆ’ ಎಂದರು.
ಲಲಿತಾ ಇಬ್ರಾಹಿಂಪುರ ಮಾತನಾಡಿ, ‘ಸಹಸ್ರ ದೀಪೋತ್ಸವದ ಸಂಭ್ರಮ ದೀಪಾವಳಿಗೂ ಹೆಚ್ಚು ಕಾಣುತ್ತಿದೆ. ಈ ದೀಪದ ಬೆಳಕು ನಮ್ಮೆಲ್ಲರ ಅಜ್ಞಾನ ತೊಲಗಿಸಲಿ, ಮೂಢನಂಬಿಕೆ ನಿರ್ಮೂಲನೆ ಮಾಡಲಿ. ಶರಣಬಸವೇಶ್ವರರು ಎಲ್ಲರಿಗೂ ಸದ್ಗುಣ ಕರುಣಿಸಲಿ’ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಗೋದುತಾಯಿ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ‘ಶರಣಬಸವೇಶ್ವರರ ಪವಾಡಗಳು ವರ್ಣಾತೀತ. ಅವರ ತೊಟ್ಟಿಲೋತ್ಸವ ಸೇವೆ ಹಲವು ಕುಟುಂಬಗಳಿಗೆ ಸಂತಾನ ಭಾಗ್ಯ ಕರುಣಿಸಿದೆ. ಅವರ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ’ ಎಂದರು.
ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಉದನೂರ, ಕಾಂಗ್ರೆಸ್ ಮುಖಂಡ ಶರಣಗೌಡ ಅಲ್ಲಮಪ್ರಭು ಪಾಟೀಲ ಮಾತನಾಡಿದರು. ಲಿಂಗರಾಜಪ್ಪ ಅಪ್ಪ ಅವರ ಮಗಳು ಶ್ರವಣಾ, ಅಳಿಯ ಸುಭಾಷ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಸಮಾರಂಭದ ಬಳಿಕ ಭಕ್ತರಿಗೆ ಅನ್ನಪ್ರಸಾದ ಉಣಬಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.