ಕಲಬುರಗಿ: ಎರಡು ಸುಲಿಗೆ ಹಾಗೂ ಒಂದು ಮನೆಗಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಒಟ್ಟು ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.
‘ಬಂಧಿತರಿಂದ ಒಟ್ಟು ₹ 5.22 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಗುರುವಾರ ಪತ್ರಿಕಾಗೋಷ್ಠಿ ತಿಳಿಸಿದರು.
‘ಸೆ.8ರಂದು ತಾಡತೆಗನೂರು ಗ್ರಾಮ ವ್ಯಾಪ್ತಿಯ ಜಮೀನಿನಲ್ಲಿ ಮಹಿಳೆಯೊಬ್ಬರು ಟೊಮೊಟೊ ಹಣ್ಣು ಕೊಯ್ಲು ಮಾಡುತ್ತಿದ್ದಾಗ ಬುರ್ಖಾಧಾರಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ₹ 80 ಸಾವಿರ ಮೌಲ್ಯದ ಬಂಗಾರದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದರು. ಜೂನ್ 8ರಂದು ಅದೇ ಗ್ರಾಮದಲ್ಲಿ ಬಯಲುಶೌಚಕ್ಕೆ ಹೋಗಿ ಮರಳುವಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮಹಿಳೆಯ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದರು’ ಎಂದು ವಿವರಿಸಿದರು.
‘ಈ ಪ್ರಕರಣಗಳ ತನಿಖೆಗೆ ಸಬರ್ಬನ್ ಎಸಿಪಿ ಡಿ.ಜಿ.ರಾಜಣ್ಣ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಅವರ ತಂಡವು ಆರೋಪಿಗಳಾದ ಕಲ್ಲಾಲಿಂಗ ಅಲಿಯಾಸ್ ಕಲ್ಮೇಶ ದ್ಯಾಮನ್ (27) ಹಾಗೂ ಮಹೇಶ ರಾಠೋಡ್ (27) ಬಂಧಿತರು. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಂದ ₹ 2 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿ ಬೈಕ್, ಬುರ್ಖಾ ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಆರೋಪಿಗಳು ಸ್ನೇಹಿತರಾಗಿದ್ದು, ಕಡಣಿ ಗ್ರಾಮದವರು. ತಮ್ಮ ದುಶ್ಚಟಗಳಿಗೆ ಹಣ ಹೊಂದಿಸಲು ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಸಂಚು ಮಾಡಿ, ಹೆದರಿಸಿ ಸುಲಿಗೆ ಮಾಡುತ್ತಿದ್ದರು’ ಎಂದು ಶರಣಪ್ಪ ಮಾಹಿತಿ ನೀಡಿದರು.
ಮೂರು ಪ್ರಕರಣಗಳನ್ನು ಭೇದಿಸಿದ ಸಬರ್ಬನ್ ಎಸಿಪಿ ಡಿ.ಜಿ.ರಾಜಣ್ಣ, ಫರಹತಾಬಾದ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಇಕ್ಕಳಕಿ, ಎಎಸ್‌ಐ ಅಶೋಕ, ಸಿಬ್ಬಂದಿ ಕಲ್ಯಾಣಕುಮಾರ, ಆನಂದ, ತುಕಾರಾಮ ಅವರ ತಂಡಕ್ಕೆ ಕಮಿಷನರ್ ಶರಣಪ್ಪ ಎಸ್.ಡಿ. ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದರು.
ಬಾಲಕಿ ತನ್ನ ಪ್ರಿಯಕರನ ಜೊತೆಗೆ ಸೇರಿಕೊಂಡು ತಾಡತೆಗನೂರು ಗ್ರಾಮದ ತಮ್ಮ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆಶರಣಪ್ಪ ಎಸ್.ಡಿ. ನಗರ ಪೊಲೀಸ್ ಕಮಿಷನರ್
ಮನೆಗಳ್ಳತನದಲ್ಲಿ ಬಾಲಕಿ ಕೈವಾಡ!
ಕಲಬುರಗಿ ತಾಲ್ಲೂಕಿನ ತಾಡತೆಗೆನೂರು ಗ್ರಾಮದಲ್ಲಿ ನಡೆದ ಮನೆಗಳವು ಪ್ರಕರಣ ಭೇದಿಸಿರುವ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಜಗದೀಶ ಬುಳ್ಳಾ (23) ಬಂಧಿತ ಆರೋಪಿ. ‘ಆಗಸ್ಟ್ 4ರಂದು ನಡೆದ ಮನೆಗಳವು ಪ್ರಕರಣ ಭೇದಿಸುವುದು ಸವಾಲಾಗಿತ್ತು. ಬಳಿಕ ಅದೇ ಮನೆಯವರು ಬಾಲಕಿಯೊಬ್ಬರು ಅಪಹರಣದ ದೂರು ಕೊಟ್ಟರು. ಎರಡೂ ಪ್ರಕರಣದ ಬೆನ್ನಟ್ಟಿದ ತನಿಖಾ ತಂಡ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿದ್ದ ಆರೋಪಿಯನ್ನು ಬಂಧಿಸಿದೆ. ಬಂಧಿತನಿಂದ ₹ 3.22 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಮನೆಗಳವು ಪ್ರಕರಣದಲ್ಲಿ ಬಾಲಕಿಯದ್ದೂ ಕೈವಾಡವಿರುವುದು ತನಿಖೆಯಿಂದ ಗೊತ್ತಾಗಿದೆ. ಆರೋಪಿ ಜಗದೀಶ ಬರೀ ಮನೆಗಳವು ಪ್ರಕರಣವಲ್ಲದೇ ಬಾಲಕಿಯ ಅಪಹರಣ ಹಾಗೂ ಪೋಕ್ಸೊ ಪ್ರಕರಣದ ಆರೋಪಿಯೂ ಆಗಿದ್ದಾನೆ’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.