ಮಹಿಳಾ ಸಬಲೀಕರಣ
– ಗೆಟ್ಟಿ ಚಿತ್ರ
ಕಲಬುರಗಿ: ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಅವಕಾಶ ಕೊಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ವಾಹನಗಳಿಗೆ ಮಹಿಳಾ ಚಾಲಕರನ್ನು ನಿಯೋಜಿಸಿದರೂ ಅವರಿಗೆ ಅಗತ್ಯ ಪ್ರೋತ್ಸಾಹ ಸಿಗುತ್ತಿಲ್ಲ. ಇದರಿಂದಾಗಿ ಆ ಕೆಲಸದಿಂದಲೇ ದೂರ ಉಳಿಯುವ ತೀರ್ಮಾನಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗಿದೆ. ಗ್ರಾಮದ ಮನೆಗಳಿಂದ ಸಂಗ್ರಹಿಸಿದ ಕಸವನ್ನು ಘಟಕಕ್ಕೆ ಸಾಗಿಸಬೇಕಿತ್ತು. ಅದನ್ನು ಗೊಬ್ಬರವಾಗಿ ಪರಿವರ್ತಿಸಲು ಗ್ರಾಮ ಪಂಚಾಯಿತಿಗಳು ಯೋಜನೆ ರೂಪಿಸಿವೆ. ಆದರೆ, ಇದು ಇನ್ನೂ ಹಲವು ಗ್ರಾ.ಪಂ.ಗಳಲ್ಲಿ ಸಮರ್ಪಕವಾಗಿ ಅನುಷ್ಠಾನವಾಗದ ಕಾರಣ ಕಸದ ವಾಹನ ಚಾಲನೆ ಮಾಡುವ ಮಹಿಳಾ ಚಾಲಕರಿಗೆ ಅಗತ್ಯ ಪ್ರೋತ್ಸಾಹ ಸಿಗುತ್ತಿಲ್ಲ. ಸುಮಾರು ಎರಡು ವರ್ಷಗಳಿಂದ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿದ್ದರೂ ಅವರಿಗೆ ಸಕಾಲಕ್ಕೆ ವೇತನ ಸಿಗುತ್ತಿಲ್ಲ. ಮಹಿಳೆಯರು ಎಂಬ ಕಾರಣಕ್ಕೆ ಹಲವು ಗ್ರಾ.ಪಂ.ಗಳಲ್ಲಿ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒಗಳು ತಮ್ಮನ್ನು ಅಸಡ್ಡೆಯಿಂದ ಕಾಣುತ್ತಿದ್ದಾರೆ ಎಂದು ಮಹಿಳಾ ಚಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಮತ್ತೊಂದೆಡೆ ವರ್ಷಗಟ್ಟಲೇ ಕಸ ವಿಲೇವಾರಿ ವಾಹನದ ಚಾಲಕಿಯಾಗಿ, ಸಹಾಯಕರಾಗಿ ಕೆಲಸ ಮಾಡಿದರೂ ಪಂಚಾಯಿತಿಯಿಂದ ವೇತನ ಆಗಿಲ್ಲ. ಇದರಿಂದಾಗಿ ಮನೆಯಲ್ಲಿ ಈ ಕೆಲಸ ಬಿಡುವಂತೆಯೂ ಒತ್ತಡ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಕೆಲ ಪಂಚಾಯಿತಿಗಳ ಅಧ್ಯಕ್ಷರು, ಪಿಡಿಒಗಳು ನೀವು ಏಕೆ ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸುವ ಮೂಲಕ ಕೆಲಸ ಮಾಡುವ ಉತ್ಸಾಹವನ್ನೇ ಕಳೆಯುತ್ತಿದ್ದಾರೆ ಎಂದು ದೂರುತ್ತಿದ್ದಾರೆ.
ಮಹಿಳಾ ಸ್ವಸಹಾಯಕ ಗುಂಪುಗಳ ಸದಸ್ಯರನ್ನು ಪಂಚಾಯಿತಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಗ್ರಾ.ಪಂ.ಗಳ ಕಸ ವಿಲೇವಾರಿ ವಾಹನಗಳನ್ನು ಮಹಿಳೆಯರೇ ನಿರ್ವಹಿಸುವ ತೀರ್ಮಾನವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಕೈಗೊಂಡಿದೆ. ಅದರ ಭಾಗವಾಗಿ ಆಯ್ದ ಸಂಘದ ಸದಸ್ಯೆಯರಿಗೆ ಚಾಲನಾ ಚಾಲನೆಯ ತರಬೇತಿ ನೀಡಿ ಪರವಾನಗಿಯನ್ನೂ ಕೊಡಿಸಲಾಗಿದೆ. ಆದರೆ, ಕೆಲವು ಕಡೆಗಳಲ್ಲಿ ವಾಹನಗಳನ್ನು ನಡೆಸಲು ಪಂಚಾಯಿತಿಯವರು ಅವಕಾಶ ನೀಡುತ್ತಿಲ್ಲ. ಮತ್ತೆ ಕೆಲ ಪಂಚಾಯಿತಿಗಳಲ್ಲಿ ವಾಹನಗಳನ್ನು ಕೊಟ್ಟರೂ ಸಮರ್ಪಕವಾಗಿ ಡೀಸೆಲ್ ಹಾಕಿಸುತ್ತಿಲ್ಲ. ವಾಹನದ ವಿಮೆ ನವೀಕರಣ ಮಾಡುತ್ತಿಲ್ಲ. ಕೆಟ್ಟು ಹೋದರೆ ದುರಸ್ತಿ ಮಾಡಿಸುತ್ತಿಲ್ಲ ಎಂದು ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಚಾಲಕಿಯಾಗಿರುವ ಸುಮಿತ್ರಾ ಬೇಸರ ಹೊರಹಾಕುತ್ತಾರೆ.
ಜಿಲ್ಲೆಯಲ್ಲಿ 261 ಗ್ರಾಮ ಪಂಚಾಯಿತಿಗಳಿದ್ದು, ಶೇ 90ರಷ್ಟು ಗ್ರಾ.ಪಂ.ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳಿವೆ. ಮನೆ ಮನೆಗಳಿಂದ ಕಸ ಸಂಗ್ರಹಿಸಿಕೊಂಡು ಅವುಗಳಿಗೆ ತಲುಪಿಸುವುದು ವಾಹನ ಚಾಲಕರು ಹಾಗೂ ಸಹಾಯಕಿಯರ ಜವಾಬ್ದಾರಿ. ಆದರೆ, ಕೆಲಸ ಮಾಡಿ ಆರು ತಿಂಗಳಾದರೂ ಮಾಸಿಕ ₹ 5 ಸಾವಿರದಂತೆ ವೇತನವನ್ನೂ ಕೊಡುತ್ತಿಲ್ಲ. ಅಲ್ಲದೇ, ₹ 5 ಸಾವಿರ ಯಾವುದಕ್ಕೂ ಸಾಕಾಗುವುದಿಲ್ಲ. ಕನಿಷ್ಠ ₹ 20 ಸಾವಿರವನ್ನಾದರೂ ನಿಗದಿ ಮಾಡಬೇಕು ಎಂದು ಮಹಿಳಾ ಚಾಲಕಿಯರಾದ ಯಡ್ರಾಮಿ ತಾಲ್ಲೂಕಿನ ಮಳ್ಳಿ ಗ್ರಾ.ಪಂ.ನ ಕವಿತಾ, ಕಮಲಾಪುರ ತಾಲ್ಲೂಕಿನ ಸೊಂತ ಗ್ರಾ.ಪಂ.ನ ಮೀನಾಕ್ಷಿ, ಮಿಣಜಗಿಯ ಬಸಮ್ಮ, ಚೌಡಾಪುರದ ಲಕ್ಷ್ಮಿ, ಗಾಣಗಾಪುರದ ಜಗದೇವಿ, ಕಡಗಂಚಿಯ ಶರಣಮ್ಮ, ಶಿವಮಂಗಲಾ ಒತ್ತಾಯಿಸಿದರು.
ಮಹಿಳಾ ಚಾಲಕರಿಗೆ ವಾಹನ ನೀಡದಿರುವುದು ವೇತನ ಪಾವತಿಯಾಗದಿರುವ ವಿಚಾರ ಗಮನಕ್ಕೆ ಬಂದಿದ್ದು ಪಂಚಾಯಿತಿ ಬಜೆಟ್‌ನಲ್ಲೇ ಈ ಖರ್ಚನ್ನು ಸೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಹಿಳೆಯರಿಗೆ ವಾಹನ ಕೊಡುವಂತೆ ಪಿಡಿಒಗಳಿಗೆ ಸೂಚಿಸಲಾಗುವುದುಭಂವರ್ ಸಿಂಗ್ ಮೀನಾ ಜಿಲ್ಲಾ ಪಂಚಾಯಿತಿ ಸಿಇಒ
ಜಿಲ್ಲಾ ಪಂಚಾಯಿತಿಗಳಿಂದ ವಾಹನ ನೀಡಿದ್ದರೂ ಹಲವು ಗ್ರಾ.ಪಂ.ಗಳಲ್ಲಿ ಆರ್.ಸಿ. ಬುಕ್‌ಗಳು ಕಳೆದು ಹೋಗಿವೆ. ಆರ್‌ಟಿಒ ಅಧಿಕಾರಿಗಳೊಂದಿಗೆ ಮಾತನಾಡಿ ಅವುಗಳ ಪ್ರತಿ ಪಡೆದಿದ್ದು ತಾಲ್ಲೂಕಿನ 36 ವಾಹನಗಳಿಗೆ ವಿಮೆ ಮಾಡಿಸುತ್ತಿದ್ದೇವೆಮಾನಪ್ಪ ಕಟ್ಟಿಮನಿ ತಾ.ಪಂ. ಇಒ ಆಳಂದ
ಜಿಲ್ಲೆಯ ಬಹುತೇಕ ಪಂಚಾಯಿತಿಗಳಲ್ಲಿ ವಾಹನ ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಸಕಾಲಕ್ಕೆ ವೇತನವನ್ನೂ ಕೊಡುತ್ತಿಲ್ಲ. ನನಗೆ 10 ತಿಂಗಳ ವೇತನ ಇನ್ನೂ ಬಂದಿಲ್ಲಸುವರ್ಣಾ ಪಟ್ಟಣ ಗ್ರಾ.ಪಂ.
ವಾಹನ ಚಾಲಕಿಯಾಗಿ ಕೆಲಸ ಮಾಡಿದರೂ ಒಂದು ತಿಂಗಳ ವೇತನವನ್ನೂ ಕೊಟ್ಟಿಲ್ಲ. ಇದರಿಂದ ನಮ್ಮ ಮನೆಯಲ್ಲಿ ಕೆಲಸಕ್ಕೆ ಹೋಗಬೇಡ ಎನ್ನುತ್ತಿದ್ದಾರೆ. ಕೆಲಸವೂ ಇಲ್ಲದೇ ವೇತನವೂ ಇಲ್ಲದೇ ಖಾಲಿ ಕುಳಿತಿದ್ದೇನೆಶೈಲಜಾ ಗೋಳಾ (ಬಿ) ಗ್ರಾ.ಪಂ.
ಕಸ ಸಂಗ್ರಹ ಮಾಡುವ ವಾಹನದ ಮಹಿಳಾ ಚಾಲಕರಿಗೆ ಗ್ರಾಮ ಪಂಚಾಯಿತಿಯು ಆರು ತಿಂಗಳವರೆಗೆ ಮಾಸಿಕ ₹ 5 ಸಾವಿರ ವೇತನ ಪಾವತಿಸಬೇಕು. ಅದಾದ ನಂತರ ಕಸ ಸಂಗ್ರಹ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಚಾಲಕರು ಪ್ರತಿ ಮನೆಗಳಿಂದ ₹ 30 ಸಂಗ್ರಹಿಸಿ ತಮ್ಮ ವೇತನವನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು. ಆದರೆ ಮೊದಲ ಆರು ತಿಂಗಳವರೆಗೂ ಹಲವು ಪಂಚಾಯಿತಿಗಳು ವೇತನ ನೀಡುತ್ತಿಲ್ಲ. ಅಲ್ಲದೇ ಬಹುತೇಕ ಮನೆಗಳಲ್ಲಿ ತಿಂಗಳಿಗೆ ₹ 30 ನೀಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಹೀಗಾಗಿ ಪಂಚಾಯಿತಿಯೇ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಚಾಲಕರು ಒತ್ತಾಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.