ADVERTISEMENT

ಕಲಬುರಗಿ: ಗುಡುಗು ಸಹಿತ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 10:51 IST
Last Updated 30 ಜುಲೈ 2022, 10:51 IST
ಕಲಬುರಗಿ ನಗರದಲ್ಲಿ ಶನಿವಾರ ಸುರಿದ ಮಳೆಯಲ್ಲಿ ಸಾಗಿದ ವಾಹನಗಳು
ಕಲಬುರಗಿ ನಗರದಲ್ಲಿ ಶನಿವಾರ ಸುರಿದ ಮಳೆಯಲ್ಲಿ ಸಾಗಿದ ವಾಹನಗಳು   

ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶನಿವಾರ ಮಧ್ಯಾಹ್ನ ಗುಡುಗು ಸಹಿತ ಬಿರುಸಿನ ಮಳೆ ಸುರಿಯಿತು. ಕೆಲವೆಡೆ, ರಸ್ತೆ ಮೇಲೆಯೇ ನೀರು ಹರಿದಾಡಿತು.

ಬಹುತೇಕ ಕಡೆ ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನ ನಂತರ ಕೆಲವು ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಕಂಡುಬಂತು. ಮಧ್ಯಾಹ್ನ 2.10ರ ವೇಳೆಗೆ ಸುಮಾರು 20 ನಿಮಿಷಗಳ ಕಾಲ ಗುಡುಗು ಸಹಿತ ಜೋರು ಮಳೆಯಾಯಿತು.

ಆರ್ಕಿಡ್ ಮಾಲ್ ಮುಂಭಾಗದ ರಸ್ತೆ, ಆನಂದ್ ಹೋಟೆಲ್‌ ವೃತ್ತ, ಕಣ್ಣಿ ಮಾರ್ಕೆಟ್‌ ಆವರಣ, ಬಂಬೂ ಬಜಾರ್, ಪಿಡಿಎ ಎಂಜಿನಿಯರಿಂಗ್ ಕಾಲೇಜು ಮುಂಭಾಗದ ರಸ್ತೆ, ಹಳೆ ಜೇವರ್ಗಿ ರಸ್ತೆಯ ರೈಲ್ವೆ ಕೆಳ ಸೇತುವೆ, ಮಾರ್ಕೆಟ್ ಬಸ್ ನಿಲ್ದಾಣ, ಖರ್ಗೆ ಪೆಟ್ರೋಲ್ ಬಂಕ್, ಲಾಲಗೇರಿ ಕ್ರಾಸ್ ಸೇರಿದಂತೆ ಇತರೆಡೆ ನೀರು ನಿಂತು, ವಾಹನ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಂದರೆ ಆಯಿತು.

ADVERTISEMENT

ಏಕಾಏಕಿ ಬಿದ್ದ ಮಳೆಯಿಂದಾಗಿ ಪಾದಚಾರಿಗಳು ಹಾಗೂ ಬೈಕ್‌ ಸವಾರರು ಮರದ ಕೆಳಗೆ ನಿಂತು ಮಳೆಯಿಂದ ರಕ್ಷಣೆ ಪಡೆದರು. ಕೆಲವು ಕಡೆ ಶಾರ್ಟ್‌ ಸರ್ಕಿಟ್‌ನಿಂದ ವಿದ್ಯುತ್ ಪೂರೈಕೆಯೂ ತಾತ್ಕಾಲಿಕವಾಗಿ ಸ್ಥಗಿತವಾಯಿತು.

ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಶುಕ್ರವಾರ ರಾತ್ರಿ ಸುಮಾರು 11.30ರಿಂದ ಶುರುವಾದ ಮಳೆ ಬೆಳಿಗ್ಗೆ 6ರ ವರೆಗೆ ಜೋರು ಮಳೆ ಬಿತ್ತು. ಇದರಿಂದ ಹಳ್ಳ ಕೊಳ್ಳಗಳು ತುಂಬಿ ಹರಿದವು. ಜಮೀನಿನ ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದು, ರೈತರಲ್ಲಿ ಬೆಳೆ ಒಣಗುವ ಆತಂಕ ಮೂಡಿದೆ.
ಜೇವರ್ಗಿ ಪಟ್ಟಣದಲ್ಲಿ 52.4ಮಿ.ಮೀ, ಆಂದೋಲಾ 36.4 ಮಿ.ಮೀ, ನೆಲೋಗಿ 36.2 ಮಿ.ಮೀ., ಜೇರಟಗ್ಗಿ 41.2ಮಿ.ಮೀ, ಯಡ್ರಾಮಿ 29.6, ಇಜೇರಿ 34 ಮಿ.ಮೀ ನಷ್ಟು ಮಳೆಯಾಗಿದೆ.

‘ಜುಲೈ ಮೊದಲ ವಾರದಲ್ಲಿ ಬಿದ್ದ ಸತತ ಮಳೆಯಿಂದಾಗಿ ತೊಗರಿ ಬೆಳೆಗಳು ಹೆಚ್ಚಿನ ತೇವಾಂಶದಿಂದ ಒಣಗಿದವು. ಇದಾದ ಬಳಿಕ ಮರು ಬಿತ್ತನೆ ಮಾಡಿದ್ದು, ಮತ್ತೆ ಮಳೆ ಶುರುವಾಗಿದ್ದರಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ’ ಎಂದು ರೈತರೊಬ್ಬರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.