ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಮಳೆಯಾಗಿದೆ. ಕಾಳಗಿಯಲ್ಲಿ ಸೋಮವಾರ ನಸುಕಿನಜಾವ ಗುಡುಗು ಸಹಿತ ಮಳೆಯಾಗಿದೆ.
ಚಿಂಚೋಳಿ ತಾಲ್ಲೂಕಿನಲ್ಲೂ ಭಾರಿ ಮಳೆಯಾದ ಪರಿಣಾಮ ಕಾಳಗಿಯ ರೌದ್ರಾವತಿ ನದಿ ಉಕ್ಕೇರಿ ಐತಿಹಾಸಿಕ ನೀಲಕಂಠ ಕಾಳೇಶ್ವರ ಮಂದಿರಕ್ಕೆ ನುಗ್ಗಿತ್ತು. ಇದರಿಂದ ಏಳೆಂಟು ತಾಸಿನವರೆಗೆ ದೇವರ ದರ್ಶನ ಮತ್ತು ಪೂಜೆಗೆ ಅಡಚಣೆಯಾಯಿತು.
ಕೊಡದೂರ ರಸ್ತೆ ಮಾರ್ಗದ ಹಳೇ ಸೇತುವೆ (ಢೋರ ಹಳ್ಳ) ಜಲಾವೃತವಾಗಿದೆ. ಕುಡಳ್ಳಿ ಗ್ರಾಮದ ನಾಲಾ ಒಡೆದು ಏಳೆಂಟು ಮನೆಗಳಿಗೆ ನೀರು ನುಗ್ಗಿ ದೈನಂದಿನ ಬಳಕೆಯ ವಸ್ತುಗಳನ್ನು ಹಾಳು ಮಾಡಿದೆ. ರಾಜಾಪುರ ಗ್ರಾಮದಲ್ಲಿ ಹಳ್ಳ ಮತ್ತು ನಾಲಾ ತುಂಬಿ ಹರಿದಿದೆ. ಹೀಗಾಗಿ ರಾಜಾಪುರ ಇಂದ ಕಾಳಗಿ ಮತ್ತು ಕೊಡದೂರ ಕಡೆಗೆ ಸಂಪರ್ಕ ಕಡಿತವಾಗಿದೆ.
ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ ಜಿಲ್ಲೆಯ ಸೇಡಂ ತಾಲ್ಲೂಕಿನ ಆಡಕಿಯಲ್ಲಿ 10.45 ಸೆಂ.ಮೀ ಮಳೆ ಸುರಿದಿದೆ .ಆಳಂದ ತಾಲ್ಲೂಕಿನ ಹಿರೊಳ್ಳಿಯಲ್ಲಿ 9.35 ಸೆಂ.ಮೀ.., ಅಫಜಲಪುರ ತಾಲ್ಲೂಕಿನ ಉಡಚಣದಲ್ಲಿ 8.7 ಸೆಂ.ಮೀ ಮಳೆಯಾದ ಬಗೆಗೆ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.