ADVERTISEMENT

ಸೆಂಟ್ರಲ್‌ ಜೈಲಿನಲ್ಲಿ ಟಿವಿಗಾಗಿ ಕೈದಿ ರಂಪಾಟ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 19:49 IST
Last Updated 6 ನವೆಂಬರ್ 2025, 19:49 IST
<div class="paragraphs"><p> ಜೈಲು</p></div>

ಜೈಲು

   

ಕಲಬುರಗಿ: ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಟಿವಿ ನೀಡುವಂತೆ ವಿಚಾರಣಾಧೀನ ಕೈದಿಗಳಿಬ್ಬರು ರಂಪಾಟ ನಡೆಸಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ವಿಚಾರಣಾಧೀನ ಕೈದಿಗಳಾದ ಕಿರಣ್‌ ಶೆಟ್ಟಿ ಹಾಗೂ ತುಳಸಿರಾಮ ಹರಿಜನ ರಂಪಾಟ ನಡೆಸಿದವರು.

ADVERTISEMENT

ಘಟನೆಯ ವಿವರ: ಮೈಸೂರು ಮೂಲದ ವಿಚಾರಣಾಧೀನ ಕೈದಿ ಕಿರಣ್‌ ಶೆಟ್ಟಿ ಶಿಸ್ತುಕ್ರಮದ ಮೇಲೆ ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ 2025ರ ಫೆಬ್ರುವರಿ 22ರಂದು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದ. ನ.1ರಂದು ಅನಾರೋಗ್ಯದ ನಿಮಿತ್ತ ಆತನನ್ನು ಜಿಮ್ಸ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ನ.4ರಂದು ಗುಣಮುಖವಾಗಿ ಕೈದಿ ಜೈಲಿಗೆ ಮರುಳುತ್ತಿದ್ದ. ಆಗ ತನ್ನೊಂದಿಗೆ 32 ಇಂಚಿನ ಟಿವಿ, ಏರ್‌ಟೆಲ್‌ ಡಿಶ್‌ ಬಾಕ್ಸ್‌, 64 ಜಿಬಿ ಸಾಮರ್ಥ್ಯದ ಪೆನ್‌ಡ್ರೈವ್‌, ಒಂದು ಸಣ್ಣ ಕನ್ನಡಿ, ಎರಡು ಚಿಕ್ಕ ಕತ್ತರಿ ಹಾಗೂ ₹ 2,500 ನಗದನ್ನು ಜೈಲಿನಲ್ಲಿ ಒಯ್ಯಲು ಯತ್ನಿಸಿದ್ದ. ಭದ್ರತೆಗೆ ನಿಯೋಜನೆಗೊಂಡಿದ್ದ ಕೆಎಸ್‌ಐಎಸ್‌ಎಫ್‌ನ ಸಿಬ್ಬಂದಿ ಆತನನ್ನು ತಪಾಸಣೆಗೆ ಒಳಪಡಿಸಿದಾಗ ಇದು ಪತ್ತೆಯಾಗಿತ್ತು. ಬಳಿಕ ಎಲ್ಲ ನಿಷೇಧಿತ ವಸ್ತುಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು.

‘ತದನಂತರ ಸಂಜೆ ಕಾರಾಗೃಹದಲ್ಲಿ ಕೈದಿಗಳನ್ನು ಸೆಲ್‌ಗೆ ಹಾಕುವಾಗ ವಿಚಾರಣಾಧೀನ ಕೈದಿ ಕಿರಣ್‌ ಶೆಟ್ಟಿ ಹಾಗೂ ಮತ್ತೊಬ್ಬ ವಿಚಾರಣಾಧೀನ ಕೈದಿ ತುಳಸಿರಾಮ ಹರಿಜನ ಸೆಲ್‌ನಲ್ಲಿ ಲಾಕ್‌ ಆಗದೇ ಟಿವಿ ನೀಡುವಂತೆ ಗಲಾಟೆ ಶುರು ಮಾಡಿದ್ದಾರೆ. ಕಾರಾಗೃಹದ ಸಿಬ್ಬಂದಿಗೆ ಏರುಧ್ವನಿಯಲ್ಲಿ ಕೂಗಾಡಿ, ಅವಾಚ್ಯ ಪದಗಳಿಂದ ನಿಂದಿಸಿ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ. ಕಾರಾಗೃಹದ ಆಡಳಿತ ಹಾಗೂ ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಜೈಲಿನ ಗೇಟ್‌ಗೆ ಕಲ್ಲು ತೂರಾಟ ನಡೆಸಿದ್ದಾರೆ’ ಎನ್ನಲಾಗಿದೆ.

ಈ ಕುರಿತು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್‌.ಅನಿತಾ ಅವರು ನೀಡಿದ ದೂರಿನನ್ವಯ ಫರಹತಾಬಾದ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.