
‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಕಲಬುರಗಿಯ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳವನ್ನು ಕೆಕೆಆರ್‌ಡಿಬಿ ಕಾರ್ಯದರ್ಶಿ ನಲಿನ್ ಅತುಲ್ ಉದ್ಘಾಟಿಸಿದರು
ಕಲಬುರಗಿ: ಉನ್ನತ ಶಿಕ್ಷಣದ ಕನಸು ಹೊತ್ತು ಬಂದಿದ್ದ ನೂರಾರು ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜ್ಞಾನ ದೇಗುಲ’ವು ಪಿಯುಸಿ ನಂತರ ಇರುವ ವಿಪುಲ ಅವಕಾಶಗಳಿಗೆ ದೀವಿಗೆ ಹಿಡಿಯಿತು.
ಮಂಗಳವಾರ ಚಳಿ ತಣಿದ ಆಹ್ಲಾದಕರ ವಾತಾವರಣವಿತ್ತು. ಬೆಳಿಗ್ಗೆ 9 ಗಂಟೆ ಹೊತ್ತಿಗೆ ಸೂರ್ಯರಶ್ಮಿ ಭುವಿತಾಕಿ ಮಿನುಗುತ್ತಿತ್ತು. ಅಂಥ ಹೊಳಪಿದ್ದ ಮೊಗದೊಂದಿಗೆ ವಿವಿಧ ಕಾಲೇಜುಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ರಂಗಮಂದಿರದತ್ತ ಧಾವಿಸಿ ಬಂದರು. ‘ಪಿಯುಸಿ ನಂತರ ಮುಂದೇನು? ಎಂಜಿನಿಯರಿಂಗ್‌ನ ಸಿಇಟಿ ಹೇಗೆ ಎದುರಿಸಬೇಕು? ನೀಟ್‌ಗೆ ಸಿದ್ಧತೆ ಹೇಗಿದ್ದರೆ ಚೆನ್ನ? ಎಂಬೆಲ್ಲ ಕುತೂಹಲಭರಿತ ಪ್ರಶ್ನೆಗಳಿಗೆ 5ನೇ ಆವೃತ್ತಿಯ ಶೈಕ್ಷಣಿಕ ಮೇಳ ‘ಜ್ಞಾನ ದೇಗುಲ’ವು ಉತ್ತರ ಒದಗಿಸಿತು.
ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳಾಡಿದ ಅನುಭವ ಜನ್ಯ ಪ್ರೇರಣಾನುಡಿಗಳು ವಿದ್ಯಾರ್ಥಿಗಳನ್ನು ಸಾಧನೆಗೆ ಹುರಿದುಂಬಿಸಿದವು. ಸಂಪನ್ಮೂಲ ವ್ಯಕ್ತಿಗಳು ಸಿಇಟಿ, ನೀಟ್ ಬಗೆಗಿನ ವಿದ್ಯಾರ್ಥಿಗಳ ದುಗುಡ ದೂರ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೆಕೆಆರ್‌ಡಿಬಿ ಕಾರ್ಯದರ್ಶಿ ನಲಿನ್ ಅತುಲ್ ಮಾತನಾಡಿ, ‘ಕಾಲವು ಕ್ಷಿಪ್ರವಾಗಿ ಬದಲಾಗುತ್ತಿದೆ. ಅದರ ವೇಗಕ್ಕೆ ತಕ್ಕಂತೆ ಒಗ್ಗಿಕೊಳ್ಳುವ ಕೌಶಲಗಳನ್ನು ಹೊಂದಿದ್ದರೆ ಮಾತ್ರವೇ ಪ್ರಸ್ತುತರಾಗಲು ಸಾಧ್ಯ’ ಎಂದರು.
‘ಹೋಮೊಸೆಪಿಯನ್ಸ್‌ಗಳಿಗೆ ಸುಮಾರು 3 ಲಕ್ಷ ವರ್ಷಗಳ ಇತಿಹಾಸವಿದೆ. ಆದರೆ, ಸಾಂಪ್ರದಾಯಿಕ ನಾಗರಿಕತೆ ಶುರುವಾಗಿದ್ದು ಐದಾರು ಸಾವಿರ ವರ್ಷಗಳಿಂದೀಚೆಗೆ. ಮನುಷ್ಯನ ವಿಚಾರ ಶಕ್ತಿಯು ಅಂಥ ಬದಲಾವಣೆಗೆ ಕಾರಣವಾಯಿತು’ ಎಂದು ಹೇಳಿದರು.
‘ಮನುಷ್ಯ ಆರಂಭದಲ್ಲಿ ಗುಂಪುಗಳಲ್ಲಿ ಜೀವಿಸಲು ಆರಂಭಿಸಿದ. ಖಾಲಿಯಿದ್ದಾಗ ಗುಹೆಗಳಲ್ಲಿ ಮನದ ಕಲ್ಪನೆಯಲ್ಲಿ ಮೂಡಿದ ಗೆರೆಗಳನ್ನು ಗೀಚಿದ. ಅದು ಕ್ರಮೇಣ ಸಂವಹನ ಮಾಧ್ಯಮವಾಗಿ, ಒಂದು ಬಗೆಯಲ್ಲಿ ಭಾಷೆಯಾಗಿ ಬೆಳೆಯಿತು. ಭಾಷೆ ಬೆಳೆದಂತೆಲ್ಲ ಮಾನವನ ವಿಚಾರಶೀಲತೆ ಹಾಗೂ ಕನಸು ಕಾಣುವ ಗುಣ ವೃದ್ಧಿಸುತ್ತ ಹೋಯಿತು. ಈ ಯೋಚನಾ ಶಕ್ತಿಯೇ ಮನುಷ್ಯನ ಇಂದಿನ ಪ್ರಗತಿಗೆ ಕಾರಣ’ ಎಂದರು.
‘ನೀವೆಲ್ಲ ಓದು ಮುಗಿಸಿ ಉದ್ಯೋಗ ಹುಡುಕುವ ಹೊತ್ತಿಗೆ ಎಐ, ರೊಬೊಟಿಕ್ಸ್ ಮಾರುಕಟ್ಟೆಯಲ್ಲಿ ಉದ್ಯೋಗದಲ್ಲಿರಬಹುದು. ಆದರೆ, ರೊಬೊಗಳಿಗೆ ಯೋಚನಾ ಶಕ್ತಿ, ಕ್ರಿಯಾಶೀಲತೆ ಹಾಗೂ ಸ್ವಂತಿಕೆ ಇರಲ್ಲ. ಅವು ಮನುಷ್ಯರಲ್ಲಿನ ವಿಶಿಷ್ಟ ಗುಣ. ವಿದ್ಯಾರ್ಥಿಗಳಿಗೆ ಪ್ರಸಕ್ತ ಶಿಕ್ಷಣ ವ್ಯವಸ್ಥೆಯು ಅಂಥ ಕೌಶಲಗಳನ್ನೇ ಕೊಡುವಲ್ಲಿ ವಿಫಲವಾಗಿದೆ’ ಎಂದು ಬೇಸರಿಸಿದರು.
‘ಪ್ರಾಮಾಣಿಕತೆ, ಸಮಗ್ರತೆ ಹಾಗೂ ಪರಿಶ್ರಮ ಪ್ರತಿಯೊಬ್ಬರಲ್ಲೂ ಇರಬೇಕಾದ ಕಡ್ಡಾಯ ನೈತಿಕ ಗುಣಗಳು. ಯಾವುದೇ ಸಾಧನೆಗೂ ಇವೇ ಮೂಲ ಮಂತ್ರಗಳು. ಸಾಧನೆಯ ಹಾದಿಯಲ್ಲಿ ಸೋಲು ಸಹಜ. ಅದನ್ನು ಮೀರುವಂಥ ಪರಿಶ್ರಮವೇ ಸಾಧನೆಗೆ ಇರುವ ಏಕೈಕ ದಾರಿ. ಸದ್ಯದ ಶಿಕ್ಷಣ ವ್ಯವಸ್ಥೆಯು ಫಲಿತಾಂಶ ಕೇಂದ್ರಿತವಾಗಿದೆ. ಅದು ಭವಿಷ್ಯದಲ್ಲಿ ಬದಲಾಗಲಿದೆ. ನಿಮ್ಮ ವಿಚಾರಶೀಲತೆ, ಕ್ರಿಯಾಶೀಲತೆ ಹಾಗೂ ಸ್ವಂತಿಕೆಯು ನಿಮ್ಮೆಲ್ಲರ ಭವಿಷ್ಯ ನಿರ್ಧರಿಸಲಿದೆ’ ಎಂದರು.
‘ಕಾಕ ದೃಷ್ಟಿ, ಬಕ ಧ್ಯಾನ, ಶ್ವಾನ ನಿದ್ರಾ, ಅಲ್ಪಾಹಾರಿ, ಗೃಹತ್ಯಾಗಿ ವಿದ್ಯಾರ್ಥಿ ಪಂಚ ಲಕ್ಷಣಂ ಎಂಬ ಮಾತಿದೆ. ಅದರಂತೆ ವಿದ್ಯಾರ್ಥಿ ಜೀವನ ಇರಬೇಕು. ಮೊಬೈಲ್ ಬಿಟ್ಟು ಪುಸ್ತಕ ಓದಬೇಕು. ವಿಚಾರಶೀಲತೆ, ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು. ಹೊಸ ಬಗೆಯಲ್ಲಿ ಭಿನ್ನವಾಗಿ ಯೋಚಿಸುವುದನ್ನು ಕಲಿಯಬೇಕು. ಅಂದಾಗಲೇ ಭವಿಷ್ಯದ ಭಾರತ ಚೆನ್ನಾಗಿರಲು ಸಾಧ್ಯ’ ಎಂದರು.
‘ಪ್ರಜಾವಾಣಿ’ ಕಲಬುರಗಿ ಬ್ಯುರೊ ಮುಖ್ಯಸ್ಥ ವಿನಾಯಕ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದನಕುಮಾರ ನಿರೂಪಿಸಿದರು.
ನವೋದಯ ಸಮೂಹ ಶಿಕ್ಷಣ ಸಂಸ್ಥೆ, ಭೀಮಣ್ಣ ಖಂಡ್ರೆ ಎಂಜಿನಿಯರಿಂಗ್ ಕಾಲೇಜು ‘ಗೋಲ್ಡ್’ ಪ್ರಾಯೋಜಕತ್ವವನ್ನು ವಹಿಸಿದ್ದವು.
ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಸಮತಾ ಲೋಕ ಶಿಕ್ಷಣ ಸಮಿತಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಎಸ್.ಡಿ.ಎಂ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜು, ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು, ಗಾರ್ಡನ್ ಸಿಟಿ ವಿಶ್ವವಿದ್ಯಾಲಯ ‘ಸಿಲ್ವರ್’ ಪ್ರಾಯೋಜಕತ್ವ ವಹಿಸಿದ್ದವು.
ಪಿಯುಸಿ ನಂತರ ಇರುವ ಕಲಿಕಾ ಕೋರ್ಸ್‌ಗಳ ಕುರಿತು ಬೆಳಕು ಚೆಲ್ಲಲು ಪ್ರಜಾವಾಣಿಯು ಜ್ಞಾನದ ದೇಗುಲ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ನಲಿನ್ ಅತುಲ್ ಕೆಕೆಆರ್‌ಡಿಬಿ ಕಾರ್ಯದರ್ಶಿನಲಿನ್ ಅತುಲ್ ಕೆಕೆಆರ್‌ಡಿಬಿ ಕಾರ್ಯದರ್ಶಿ
ಪ್ರಜಾವಾಣಿಯು ಸಮಾಜದ ಓರೆಕೋರೆಗಳನ್ನು ತಿದ್ದುವ ಜೊತೆಗೆ ವಿದ್ಯಾರ್ಥಿಗಳಿಗೆ ಪಿಯುಸಿ ನಂತರದ ಶಿಕ್ಷಣಕ್ಕೂ ಮಾರ್ಗದರ್ಶನ ಮಾಡುತ್ತಿರುವುದು ಅಭಿನಂದನೀಯಸುರೇಶ ಅಕ್ಕಣ್ಣ ಡಿಡಿಪಿಯು
ಸ್ವಸಾಮರ್ಥ್ಯ ಅರಿತರೆ ಸಾಧನೆ ಸುಲಭ
‘ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಸ್ವಸಾಮರ್ಥ್ಯ ಆಧರಿಸಿ ಪ್ರಯತ್ನ ಪಟ್ಟರೆ ಯಾವುದೂ ಅಸಾಧ್ಯವಲ್ಲ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಮಹೇಶ ಪಾಟೀಲ ಖಚಿತ ಧ್ವನಿಯಲ್ಲಿ ಹೇಳಿದರು. ಆಮೆ–ಮೊಲ ಓಟದ ಕಥೆಯನ್ನೂ ಹೇಳಿದರು.
‘ಮೊದಲ ಸ್ಪರ್ಧೆಯಲ್ಲಿ ಆಮೆ ಗೆದ್ದು ಮೊಲ ಸೋತಿತು. ಬಳಿಕ ಮೊಲ ಸೂಕ್ತ ಮಾರ್ಗದರ್ಶನ ಪಡೆದು ಗೆಲುವು ಕಂಡಿತು. ಆಗ ಸೋತ ಆಮೆಯೂ ಮಾರ್ಗದರ್ಶನದ ಮೊರೆ ಹೋಯಿತು. ಕೆರೆಯಲ್ಲಿ ಸ್ಪರ್ಧೆ ಆಯೋಜಿಸಿ ಆಮೆ ಗೆದ್ದಿತು. ಅದರಂತೆ ನಾವೆಲ್ಲರೂ ನಮ್ಮ ಸಾಮರ್ಥ್ಯ ಪ್ರತಿಭೆ ಆಧರಿಸಿ ಯಶಸ್ಸಿನ ದಾರಿ ಕಂಡುಕೊಳ್ಳಬಹುದು’ ಎಂದರು. ‘ಅನಕ್ಷರತೆ ಬಡತನ ದಾರಿದ್ರ್ಯದಂಥ ಸಮಸ್ಯೆಗಳಿಗೆ ಶಿಕ್ಷಣವೇ ರಾಮಬಾಣ. ಹಿಂದೆಲ್ಲ ಬದುಕುಳಿದವನೇ ಸದೃಢ ಎಂಬ ಮಾತಿತ್ತು. ಇಂದು ಜ್ಞಾನವುಳ್ಳವನಷ್ಟೇ ಬದುಕಬಲ್ಲ ಎಂಬಷ್ಟು ಜ್ಞಾನ ಮಹತ್ವ ಪಡೆದಿದೆ. ಹರಸಾಹಸ ಮಾಡಿಯಾದರೂ ಶಿಕ್ಷಣ ಪಡೆಯಬೇಕು. ಗುರು ಹಾಗೂ ಶಿಕ್ಷಣದಲ್ಲಿ ದೊಡ್ಡ ಶಕ್ತಿ ಇದ್ದು ಅದಕ್ಕೆ ಗೌರವ ಕೊಟ್ಟರೆ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ’ ಎಂದು ಪ್ರತಿಪಾದಿಸಿದರು.