ಕಲಬುರಗಿ: ತನ್ನ ಸಂಬಂಧಿಕರೊಂದಿಗೆ ಸೇರಿ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲು ನಕಲಿ ಸಂಸ್ಥೆ ಹುಟ್ಟುಹಾಕಲು ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಬುರಗಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಬೆರಳಚ್ಚುಗಾರ್ತಿಯಾಗಿರುವ ಚನ್ನಮ್ಮ ವಿ. ಯಾದವ್ ಅವರನ್ನು ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮೂಲತಃ ಬೀದರ್ ಜಿಲ್ಲೆಯವರಾದ ಚನ್ನಮ್ಮ ರಾಯಚೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಬೆರಳಚ್ಚುಗಾರ್ತಿಯಾಗಿದ್ದು, ನಿಯೋಜನೆ ಮೇರೆಗೆ ಪ್ರಸ್ತುತ ಕಲಬುರಗಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಕರಣರ ವಿವರ: 2012–13ರಲ್ಲಿ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಡಬಿವಾಡಿಯಲ್ಲಿ ರಾಧಾಕೃಷ್ಣ ಕಲಾ ಮತ್ತು ಸಾಂಸ್ಕೃತಿಕ ಗಡಿನಾಡು ಸೇವಾ ಸಂಸ್ಥೆಯ ಹೆಸರಿನ ಸಂಸ್ಥೆಯನ್ನು ಹುಟ್ಟು ಹಾಕಲು ಚನ್ನಮ್ಮ ಸಂಬಂಧಿಕರಿಗೆ ಸಹಾಯ ಮಾಡಿದ್ದರು. ಆ ಸಂಸ್ಥೆಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ₹ 10 ಲಕ್ಷ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹ 2.50 ಲಕ್ಷ ಹಾಗೂ ಬೀದರ್ ಜಿಲ್ಲಾ ಪರಿಶಿಷ್ಟ ಪಂಗಡಗಳ ಸಾಂಸ್ಕೃತಿಕ ಸಂಸ್ಥೆಗೆ ₹ 2.50 ಲಕ್ಷ ಬಿಡುಗಡೆ ಮಾಡಲಾಗಿತ್ತು. ಈ ಅನುದಾನ ದುರುಪಯೋಗವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೇ, ವಿಧಾನಪರಿಷತ್ ಭರವಸೆಗಳ ಸಮಿತಿಯ ಅಧ್ಯಕ್ಷರು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದರು. ಅದರಂತೆ ಇಲಾಖೆ ಅಮಾನತು ಆದೇಶ ಹೊರಡಿಸಿದೆ.
ಚನ್ನಮ್ಮ ಪತಿ ವೆಂಕಟರಾವ್ ಯಾದವ್ ಚಿಂಚೋಳಿ ತಾಲ್ಲೂಕಿನ ದುತ್ತರಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದು, ಅವರ ವಿರುದ್ಧವೂ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.
ಇಲಾಖೆಯಲ್ಲಿ ಪ್ರಭಾವಿಯಾಗಿರುವ ಚನ್ನಮ್ಮ ಯಾದವ್ ಹಲವು ವರ್ಷಗಳಿಂದ ಕಲಬುರಗಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಆರೋಪವೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.