ADVERTISEMENT

‘ಕಲಬುರ್ಗಿ ಸಾಂಸ್ಕೃತಿಕ ಶ್ರೀಮಂತಿಕೆಯ ನಾಡು’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 7:41 IST
Last Updated 24 ಅಕ್ಟೋಬರ್ 2018, 7:41 IST

ಕಲಬುರ್ಗಿ: ‘ಕಲಬುರ್ಗಿ ಹಲವು ಪ್ರಥಮಗಳನ್ನು ನೀಡಿದ ಜಿಲ್ಲೆಯಾಗಿದ್ದು, ಸಾಂಸ್ಕೃತಿಕ ಶ್ರೀಮಂತಿಕೆಯ ನಾಡಾಗಿದೆ’ ಎಂದು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಶಾರದಾ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕನ್ನಡ ಸಂಶೋಧನಾ ಸಂಘ ಹಾಗೂ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಎಂಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕವಿರಾಜಮಾರ್ಗ, ವಡ್ಡಾರಾಧನೆ, ಕೀರ್ತನ ಸಾಹಿತ್ಯ, ಮಿತಾಕ್ಷರ ಹೀಗೆ ಹಲವು ಶ್ರೇಷ್ಠ ಕೃತಿಗಳನ್ನು ಕಲಬುರ್ಗಿ ಜಿಲ್ಲೆಯು ಕನ್ನಡ ಸಾಹಿತ್ಯಕ್ಕೆ ನೀಡಿದೆ. ಆದರೂ ನಾವು ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದಿದೆ ಎಂದು ಹೇಳುತ್ತ ಅದರ ಮಹತ್ವವನ್ನು ಕಡಿಮೆ ಮಾಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಹೈದರಾಬಾದ್ ಕರ್ನಾಟಕ ಪ್ರದೇಶ ತುಂಬಾ ಶ್ರೀಮಂತವಾದುದು. ರಾಷ್ಟ್ರಕೂಟ, ಚಾಲುಕ್ಯ, ವಿಜಯನಗರ, ಬಹಮನಿ ಸಾಮ್ರಾಜ್ಯಗಳು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿವೆ. ಈ ನಾಡಿಗೆ ಶ್ರೀಮಂತ ಪರಂಪರೆ ಇದೆ’ ಎಂದರು.

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ‘ಕನ್ನಡ ಉಳಿಸುವ ಬೆಳೆಸುವ ಜವಾಬ್ದಾರಿ ಇಂದಿನ ಯುವ ಪಿಳಿಗೆಯ ಮೇಲಿದೆ. ಹೆಚ್ಚಿನ ಜ್ಞಾನಾರ್ಜನೆಗೆ ಯುವ ಸಾಹಿತಿಗಳು ಸನ್ನದ್ಧರಾಗಬೇಕು’ ಎಂದು ಹೇಳಿದರು.

ಪ್ರಾಧ್ಯಾಪಕಿ ಡಾ. ಜಯಶ್ರೀ ದಂಡೆ ಇದ್ದರು. ವಿದ್ಯಾರ್ಥಿಗಳಾದ ದೇವೀಂದ್ರಮ್ಮ, ತಮ್ಮಣ್ಣ ಅನಿಸಿಕೆ ವ್ಯಕ್ತಪಡಿಸಿದರು. ಶಂಶಾದ್ ಬೇಗಂ ನಿರೂಪಿಸಿ, ಉಷಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.