ಪ್ರಾಧಿನಿಧಿಕ ಚಿತ್ರ
ಐಸ್ಟಾಕ್ ಚಿತ್ರ
ಕಲಬುರಗಿ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ ಆರೋಪ ಸಾಬೀತಾಗಿದ್ದರಿಂದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸೇಡಂ ಪೀಠವು ಶಹಾಬಾದ್‌ನ ಅಪರಾಧಿ ಅನಿಲ್ ಈರಣ್ಣ ಗಿರಣಿ ಎಂಬಾತನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹ 21 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
2021ರ ಮಾರ್ಚ್ 20ರಂದು ಶೋಭಾ ಹಾಗೂ ಸುರೇಶ ಸಾಳುಂಕೆ ದಂಪತಿಯ ಬಳಿ ಬಂದ ಅನಿಲ್ ಅಂಗಡಿಯ ಬಾಡಿಗೆ ರೂಪದ ಹಣವನ್ನು ಕೊಡುವಂತೆ ಕೇಳಿದ್ದಾನೆ. ಇದಕ್ಕೆ ಸುರೇಶ ಈಗಾಗಲೇ ಅಂಗಡಿ ಖಾಲಿ ಮಾಡಿದ್ದು ಹಣ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಅನಿಲ್ ಸುರೇಶ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ದಲ್ಲದೇ ಚಾಕುವಿನಿಂದ ಹೊಟ್ಟೆಯ ಹತ್ತಿರ ಇರಿದು ಗಾಯ ಮಾಡಿದನು. ಜಗಳ ಬಿಡಿಸಲು ಬಂದ ಶೇಖರ್ ವಿಶ್ವನಾಥ ಚವಾಣ್ ಎಂಬುವವರ ಬಲಗೈಗೆ ಹೊಡೆದು ಗಾಯಗೊಳಿಸಿದನು. ಚಾಕುವಿನ ಇರಿತದಿಂದ ಗಾಯಗೊಂಡಿದ್ದ ಸುರೇಶ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಇಬ್ಬರೂ ಗಾಯಾಳುಗಳನ್ನು ಶಹಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಶಹಾಬಾದ್ ಪಿಎಸ್‌ಐ ತಿರುಮಲೇಶ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಕರಣ್ ಗುಜ್ಜಾರ್ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದರು. ₹ 21 ಸಾವಿರ ಪರಿಹಾರ ದಂಡದ ಪೈಕಿ ₹ 5 ಸಾವಿರವನ್ನು ಗಾಯಾಳುವಿನ ಪತ್ನಿ ಶೋಭಾ ಸಾಳುಂಕೆ ಅವರಿಗೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಅಭಿಯೋಜಕ ಕೆ.ಆರ್. ನಾಗರಾಜ ಮಸ್ಕಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.