ಕಲಬುರಗಿಯ ಕೆಸಿಟಿ ಕಾಲೇಜು ಮೈದಾನದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಉದ್ಯೋಗ ಮೇಳದ ಸ್ಥಳವನ್ನು ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮಂಗಳವಾರ ಪರಿಶೀಲಿಸಿದರು.
ಕಲಬುರಗಿ: ಬುಧವಾರ (ಏ.16) ನಗರದ ಕೆಸಿಟಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕೌಶಲಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನಡೆಯಲಿರುವ ಕಲ್ಯಾಣ ಕರ್ನಾಟಕ ವಿಭಾಗಮಟ್ಟದ ಉದ್ಯೋಗ ಮೇಳದ ಸಿದ್ಧತೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮಂಗಳವಾರ ಪರಿಶೀಲಿಸಿದರು.
ಜರ್ಮನ್ ಟೆಂಟ್‌ನಲ್ಲಿ ಅಳವಡಿಸಲಾದ ವೇದಿಕೆ, ಸಭಿಕರ ಕುರ್ಚಿಗಳು, ಉದ್ಯೋಗಾಕಾಂಕ್ಷಿಗಳ ನೋಂದಣಿ ಕೌಂಟರ್ ಹಾಗೂ ಸಂದರ್ಶನ ನಡೆಯಲಿರುವ ಎಂಜಿನಿಯರಿಂಗ್ ಕಾಲೇಜಿನ ಕೊಠಡಿಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹಾಗೂ ಕೌಶಲಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಚಿವರಿಗೆ ಮೇಳದ ಸಿದ್ಧತೆಯ ಮಾಹಿತಿಯನ್ನು ನೀಡಿದರು.
ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮೇಳದ ಕುರಿತು ಮಾಹಿತಿ ಹಂಚಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ, ‘ಕಲ್ಯಾಣ ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದ್ದು, ಈಗಾಗಲೇ 22 ಸಾವಿರ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. 280 ಕಂಪನಿಗಳು ಭಾಗವಹಿಸಲಿದ್ದು, ಅಭ್ಯರ್ಥಿಗಳ ಸಂದರ್ಶನದ ಬಳಿಕ ನೇಮಕಾತಿ ಪ್ರಮಾಣಪತ್ರ ನೀಡಲಾಗುವುದು. ಆಯ್ಕೆಯಾಗದವರಿಗೆ ತರಬೇತಿ ಅಗತ್ಯವಿದ್ದಲ್ಲಿ ಕಂಪನಿಗಳೇ ಲೆಟರ್ ಆಫ್ ಇಂಟೆಂಟ್ ನೀಡಲಿದ್ದು, ಸೂಕ್ತ ತರಬೇತಿ ಬಳಿಕ ಅವರನ್ನು ನೇಮಕ ಮಾಡಿಕೊಳ್ಳಲಿವೆ. ಆಯ್ಕೆಯಾಗದವರಿಗೆ ಐಟಿ, ಬಿಟಿ ಇಲಾಖೆಯ ನಿಪುಣ ಕರ್ನಾಟಕ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಯುವನಿಧಿ ಪ್ಲಸ್ ಯೋಜನೆಯಡಿ ಸೂಕ್ತ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗ ದೊರಕುವಂತೆ ಮಾಡಲಾಗುವುದು’ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಮಾತನಾಡಿ, ‘ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬೆಳಿಗ್ಗೆಯಿಂದ ಸಂಜೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. ಕಲ್ಯಾಣ ಕರ್ನಾಟಕದಲ್ಲಿ 75 ಸಾವಿರ ನಿರುದ್ಯೋಗಿಗಳು ಯುವನಿಧಿಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿದ್ದಾರೆ. ಅವರಿಗೆಲ್ಲ ಮೇಳದಲ್ಲಿ ಭಾಗವಹಿಸುವಂತೆ ಸಂದೇಶ ಕಳುಹಿಸಲಾಗಿದೆ. ಈ ಮೇಳದಲ್ಲಿ ಯಾವ ಅಭ್ಯರ್ಥಿ ಯಾವ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ ಎಂಬುದು ಗೊತ್ತಾಗಲಿದೆ’ ಎಂದು ತಿಳಿಸಿದರು.
ಉದ್ಯೋಗ ಮೇಳದಲ್ಲಿ ಅವಕಾಶ ಸಿಗದಿರುವ ಅಭ್ಯರ್ಥಿಗಳಿಗೆ ನಿಪುಣ ಕರ್ನಾಟಕ ಯುವನಿಧಿ ಪ್ಲಸ್ ಯೋಜನೆಯಡಿ ವಿಶೇಷ ಕೌಶಲ ತರಬೇತಿ ನೀಡಲಾಗುವುದು. ಕಂಪನಿಗಳೂ ಅಗತ್ಯ ನೆರವನ್ನು ನೀಡಲಿವೆಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ
ನಿರುದ್ಯೋಗವು ಗಂಭೀರ ಸಮಸ್ಯೆಯಾಗಿದ್ದು ಶೇ 90ರಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಲು ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿರುದ್ಯೋಗ ಸಮಸ್ಯೆಯನ್ನು ಪಕ್ಕಕ್ಕಿಟ್ಟಿದ್ದಾರೆಡಾ.ಶರಣಪ್ರಕಾಶ್ ಪಾಟೀಲ ವೈದ್ಯಕೀಯ ಶಿಕ್ಷಣ ಕೌಶಲಾಭಿವೃದ್ಧಿ ಸಚಿವ
ಸಿದ್ದರಾಮಯ್ಯ, ಖರ್ಗೆ, ಡಿ.ಕೆ.ಶಿವಕುಮಾರ್ ಭಾಗಿ
ಇಲ್ಲಿನ ಕೆಸಿಟಿ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ವಿಭಾಗ ಮಟ್ಟದ ಉದ್ಯೋಗ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೈದ್ಯಕೀಯ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕೆಕೆಆರ್‌ಡಿಬಿ ಅಧ್ಯಕ್ಷ ಡಾ ಅಜಯ್ ಸಿಂಗ್ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಹಾಗೂ ಸ್ಥಳೀಯ ಶಾಸಕರು ಭಾಗವಹಿಸಲಿದ್ದಾರೆ.
ಸಂಚಾರ ಮಾರ್ಗ ಬದಲಾವಣೆ
ಕೆಸಿಟಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಉದ್ಯೋಗ ಮೇಳ ಇರುವುದರಿಂದ ಸೇಡಂ ರಿಂಗ್ ರೋಡ್‌ನಿಂದ ಹುಮನಾಬಾದ್ ರಿಂಗ್ ರೋಡ್‌ನಲ್ಲಿ ಭಾರಿ ವಾಹನಗಳ ಓಡಾಟವನ್ನು ನಿಷೇಧಿಸಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಮೇಳ ನಡೆಯುವ ಸಂದರ್ಭದಲ್ಲಿ ಬೇರೆ ಮಾರ್ಗದಲ್ಲಿ ಸಂಚರಿಸಲು ಸಲಹೆ ನೀಡಿದ್ದಾರೆ. ಪಾರ್ಕಿಂಗ್ ವ್ಯವಸ್ಥೆ: ಉದ್ಯೋಗ ಮೇಳಕ್ಕೆ ಬರುವ ಸಾರ್ವಜನಿಕರು ಹಾಗೂ ಅಭ್ಯರ್ಥಿಗಳು ಕೆಸಿಟಿ ಕಾಲೇಜಿನ ಮುಖ್ಯದ್ವಾರದ ಮೂಲಕ ಬರಬೇಕು. ಕಾಲೇಜಿನ ಆವರಣದಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ಕಾರ್ಯಕ್ರಮಕ್ಕೆ ಅಭ್ಯರ್ಥಿಗಳನ್ನು ಕರೆತರುವ ಸರ್ಕಾರಿ ಬಸ್‌ಗಳನ್ನು ಪೀರ್ ಬಂಗಾಲಿ ಮೈದಾನದಲ್ಲಿ ನಿಲ್ಲಿಸಬೇಕು. ಜಿಮ್ಸ್ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಇರುವುದರಿಂದ ಅಲ್ಲಿಗೆ ಸಾರ್ವಜನಿಕರು ವೀರೇಶ ನಗರ ಕ್ರಾಸ್ ಮೂಲಕ ಬಂದು ವಾಹನಗಳನ್ನು ಪಾರ್ಕ್ ಮಾಡಬೇಕು. ಕಾರ್ಯಕ್ರಮ ನಡೆಯುವ ವೇಳೆ ಜಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಹೋಗುವ ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.