
ಕಲಬುರಗಿ: 64 ಚದರ ಕಿ.ಮೀ ವ್ಯಾಪ್ತಿ, 55 ವಾರ್ಡ್‌ಗಳು, ಏಳು ಲಕ್ಷದಷ್ಟು ಜನಸಂಖ್ಯೆ, ಕೋಟ್ಯಂತರ ರೂಪಾಯಿ ಆದಾಯ ಹೊಂದಿರುವ ಕಲಬುರಗಿ ಮಹಾನಗರ ಪಾಲಿಕೆಯ ಸುಗಮ ಆಡಳಿತಕ್ಕೆ ‘ಸಿಬ್ಬಂದಿ ಕೊರತೆ’ ಗ್ರಹಣ ಹಿಡಿದಿದೆ.
‘ಬಿಳಿ ಆನೆ’ಯಂತಾಗಿರುವ ಪಾಲಿಕೆ ಆಡಳಿತವು ಸಿಬ್ಬಂದಿ ಕೊರತೆಯಿಂದ ತತ್ತರಿಸಿದೆ. ನಾಗರಿಕರಿಗೆ ಸರಿಯಾಗಿ ಸೇವೆಯೂ ದೊರೆಯದಂತಾಗಿದೆ.
‘ಎ’, ‘ಬಿ’, ‘ಸಿ’ ಹಾಗೂ ‘ಡಿ’ ದರ್ಜೆ ಸೇರಿದಂತೆ ಪಾಲಿಕೆಯಲ್ಲಿ ಒಟ್ಟು 1,981 ಮಂಜೂರಾತಿ ಹುದ್ದೆಗಳಿವೆ. ಈ ಪೈಕಿ 1,642 ಹುದ್ದೆಗಳು ಖಾಲಿಯಿವೆ. ಹಲವು ಆಯಕಟ್ಟಿನ ಹುದ್ದೆಗಳ ಭಾರ ‘ಪ್ರಭಾರ’ಗಳ ಹೆಗಲೇರಿದೆ. ಕಾರ್ಯದೊತ್ತಡದ ಫಲವಾಗಿ ‘ಪ್ರಭಾರ’ಗಳು ಅತ್ತ ಮೂಲ ಹುದ್ದೆಗೂ ಇತ್ತ ವಹಿಸಿಕೊಂಡ ಹುದ್ದೆಗೂ ‘ನ್ಯಾಯ’ ಒದಗಿಸಲು ಪರದಾಡುವಂತಾಗಿದೆ.
ಅಧಿಕಾರಿಗಳೇ ಇಲ್ಲ:
ಪಾಲಿಕೆಯ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಆಧಾರಸ್ತಂಭ. ಅಧಿಕಾರಿಗಳ ಶ್ರೇಣಿಯಲ್ಲಿ ಉತ್ತುಂಗದಲ್ಲಿರುವ ‘ಎ’ ಗ್ರೂಪ್‌ನಲ್ಲಿ ಶೇ 39ರಷ್ಟು ಹುದ್ದೆಗಳು ಖಾಲಿ ಇವೆ. ಪಾಲಿಕೆಗೆ ಮಂಜೂರಾದ 31 ಹುದ್ದೆಗಳ ಪೈಕಿ 19 ಹುದ್ದೆಗಳಲ್ಲಿ ಮಾತ್ರವೇ ‘ಕಾಯಂ’ ಅಧಿಕಾರಿಗಳಿದ್ದಾರೆ. ಇನ್ನುಳಿದ 12 ಹುದ್ದೆಗಳಲ್ಲಿ ಭಾರ ‘ಪ್ರಭಾರ’ ಅಧಿಕಾರಿಗಳಿದ್ದಾರೆ.
ಪಾಲಿಕೆಗೆ ಮೂರು ಉಪ ಆಯುಕ್ತರ ಸ್ಥಾನಗಳು ಮಂಜೂರಿದ್ದು, ಅಭಿವೃದ್ಧಿ ಹಾಗೂ ಕಂದಾಯ ವಿಭಾಗದ ಉಪ ಆಯುಕ್ತರ ಎರಡೂ ಹುದ್ದೆಗಳು ‘ಕಾಯಂ’ ಅಧಿಕಾರಿಗಳಿಲ್ಲದೇ ‘ಅಭಿವೃದ್ಧಿ’ ಹಾಗೂ ‘ಆದಾಯ’ಕ್ಕೆ ಗ್ರಹಣ ಹಿಡಿದಿದೆ.
‘ತೆರಿಗೆ’ಯು ಪಾಲಿಕೆಯ ಆದಾಯದ ಪ್ರಮುಖ ಮೂಲ. ವಾರ್ಷಿಕ ಅಂದಾಜು ₹40 ಕೋಟಿಗಳಷ್ಟು ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಿರುವ ಪಾಲಿಕೆಗೆ ‘ಕಂದಾಯ ವಿಭಾಗ’ದ ಆಯುಕ್ತರೇ ಇಲ್ಲ. ‘ಹೀಗಾದರೆ ಪಾಲಿಕೆಯ ಆದಾಯ ಸಂಗ್ರಹದ ಪಾಡೇನು?’ ಎಂಬುದು ಜನರ ಪ್ರಶ್ನೆ. ಈಗ ಈ ಹುದ್ದೆಯಲ್ಲಿ ಇರೋದು ಪಾಲಿಕೆ ‘ಆರೋಗ್ಯ ಅಧಿಕಾರಿ’!
ಇನ್ನು, ಅಭಿವೃದ್ಧಿ ವಿಭಾಗದ ಉಪ ಆಯುಕ್ತರ ಸ್ಥಾನವನ್ನು ಪಾಲಿಕೆಯ 2ನೇ ‘ದೊಡ್ಡ ಹುದ್ದೆ’ ಎನ್ನಬಹುದು. ನಗರದ ಅಭಿವೃದ್ಧಿ ಕಾಮಗಾರಿಗಳು, ಘನತ್ಯಾಜ್ಯ ನಿರ್ವಹಣೆ, ತೋಟಗಾರಿಕೆ ವಿಭಾಗ, ಸ್ಟೋರ್ ವಿಭಾಗದ ಇದರಡಿಗೆ ಬರುತ್ತವೆ. ಈ ಹುದ್ದೆಯಲ್ಲಿ ಸೂಪರಿಂಟೆಂಡೆಂಟ್ ಎಂಜಿನಿಯರ್ ದರ್ಜೆಯ ಅಧಿಕಾರಿ ಇರಬೇಕು ಎಂಬುದು ನಿಯಮ. ಆದರೆ, ಈಗ ಇರೋದು ಕಾರ್ಯನಿರ್ವಾಹಕ ಎಂಜಿನಿಯರ್ ದರ್ಜೆಯ ಅಧಿಕಾರಿ.
ಪಾಲಿಕೆ ವ್ಯಾಪ್ತಿಯ ವಿದ್ಯುತ್ ಸಂಬಂಧಿತ ಉಸ್ತುವಾರಿ ವಹಿಸಬೇಕಿದ್ದ ಕಾರ್ಯಪಾಲಕ ಎಂಜಿನಿಯರ್(ಎಲೆಕ್ಟ್ರಿಕ್), ಒಳಚರಂಡಿ ನಿರ್ವಹಣೆ ನೋಡಿಕೊಳ್ಳಬೇಕಿದ್ದ ಕಾರ್ಯಪಾಲಕ ಎಂಜಿನಿಯರ್ (ಒಳಚರಂಡಿ), ಪಾಲಿಕೆಯ ಕಾನೂನು ಸಮಸ್ಯೆಗಳನ್ನು ನೋಡಿಕೊಳ್ಳುವ ಕಾನೂನು ಅಧಿಕಾರಿ, ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಚಟುವಟಿಕೆ ನೋಡಿಕೊಳ್ಳಬೇಕಿದ್ದ ‘ಸೆಕ್ರೆಟರಿ’ ಹುದ್ದೆಗಳು, ಪಾಲಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಪಾಲಿಕೆಯ ಮೂರು ವಲಯಗಳಲ್ಲಿ 2ನೇ ವಲಯದ ವಲಯ ಆಯುಕ್ತ, ಬೀದಿನಾಯಿಗಳ ಹಾವಳಿ ಸಮಸ್ಯೆ ತೀವ್ರವಾಗಿ ಎದುರಿಸುತ್ತಿರುವ ಪಾಲಿಕೆಗೆ ಪಶು ವೈದ್ಯಾಧಿಕಾರಿ ಹುದ್ದೆಗಳಲ್ಲೂ ‘ಕಾಯಂ’ ಸಿಬ್ಬಂದಿಯೇ ಇಲ್ಲ. ಅಲ್ಲೆಲ್ಲ ‘ಪ್ರಭಾರ’ ಅಧಿಕಾರಿಗಳೇ ತುಂಬಿದ್ದಾರೆ.
‘ಬಿ’ ಗ್ರೂಪ್‌ನ 32 ಮಂಜೂರಾತಿ ಹುದ್ದೆಗಳ ಪೈಕಿ 16 ಹುದ್ದೆಗಳಲ್ಲಿ ಕಾಯಂ ಸಿಬ್ಬಂದಿ ಕೊರತೆ ಕಾಡುತ್ತಿದೆ. ‘ಸಿ’ ಗ್ರೂಪ್‌ನ 575 ಮಂಜೂರಾತಿ ಹುದ್ದೆಗಳ ಪೈಕಿ 367 ಹುದ್ದೆಗಳು ಖಾಲಿ ಇವೆ. ಇಲ್ಲಿಯೂ ‘ಪ್ರಭಾರ’ಗಳು, ‘ಹೆಚ್ಚುವರಿ’ಗಳು ಸೇವೆ ನೀಡುತ್ತಿದ್ದಾರೆ.
ಗುತ್ತಿಗೆ ಸಿಬ್ಬಂದಿಯ ಬಲ:
ಪೌರಕಾರ್ಮಿಕರು, ಒಳಚರಂಡಿ ಕಾರ್ಮಿಕರು, ವಾಹನಕ್ಕೆ ಕಸ ತುಂಬುವ ಲೋಡರ್‌ಗಳಂಥ ‘ಡಿ’ ಗ್ರೂಪ್‌ನ 1,343 ಮಂಜೂರಾತಿ ಹುದ್ದೆಗಳ ಪೈಕಿ 1,247 ಹುದ್ದೆಗಳಲ್ಲಿ ‘ಕಾಯಂ’ ಸಿಬ್ಬಂದಿ ಇಲ್ಲ. ‘ಡಿ–ಗ್ರೂಪ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಡೈವರ್, ಕ್ಲೀನರ್, ಲೋಡರ್‌ನಂಥ ಹುದ್ದೆಗಳಿಗೆ ಒಂದು ಸಾವಿರದಷ್ಟು ಸಿಬ್ಬಂದಿಯನ್ನು ನೇಮಿಸಿಕೊಂಡಿರುವ ಕಾರಣ, ನಗರ ಸ್ವಚ್ಛತಾ ಕಾರ್ಯಕ್ಕೆ ತೊಂದರೆಯಾಗಿಲ್ಲ. ಇಲ್ಲದಿದ್ದರೆ, ನಗರದ ಸ್ವಚ್ಛತಾ ಕಾರ್ಯದ ಸ್ಥಿತಿ ಶೋಚನೀಯವಾಗುತ್ತಿತ್ತು’ ಎಂದು ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿದರು.
ಪಾಲಿಕೆಯ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಆರು ತಿಂಗಳ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿದೆ. ಹುದ್ದೆಗಳ ಭರ್ತಿಯಾದರೆ ಸುಗಮ ಆಡಳಿತಕ್ಕೆ ನೆರವಾಗುತ್ತದೆ ಅವಿನಾಶ ಶಿಂದೆ ಪಾಲಿಕೆ ಆಯುಕ್ತಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಪಾಲಿಕೆಯಲ್ಲಿ ಖಾಲಿ ಹುದ್ದೆಗಳ ವಿವರ ಗ್ರುಪ್; ಮಂಜೂರಾದ ಹುದ್ದೆ; ಇರುವ ಸಿಬ್ಬಂದಿ; ಖಾಲಿ ಹುದ್ದೆ ಎ; 31;19;12 ಬಿ; 32;16;16 ಸಿ;575;208;367 ಡಿ;1343; 94; 1247 ಒಟ್ಟು ಹುದ್ದೆಗಳು 1981