ಕಲಬುರಗಿ: ಛಲವಾದಿ ನಾರಾಯಣಸ್ವಾಮಿ ಮತ್ತು ಎನ್.ರವಿಕುಮಾರ್ ಅವರ ವಿಧಾನ ಪರಿಷತ್ತಿನ ಸದಸ್ಯತ್ವವನ್ನು ರದ್ದು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಜಗತ್ ವೃತ್ತದಲ್ಲಿ ಸೋಮವಾರ ಧರಣಿ ಸತ್ಯಾಗ್ರಹ ಮಾಡಿದರು.
ಶೋಷಿತ ಸಮುದಾಯದ ನಾಯಕರು, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅಧಿಕಾರಿಗಳ ನೈತಿಕತೆ ಕುಗ್ಗಿಸಿದ ನಾರಾಯಣಸ್ವಾಮಿ, ರವಿಕುಮಾರ್ ಹಾಗೂ ಸಂಸದ ಗೋವಿಂದ ಕಾರಜೋಳ ವಿರುದ್ಧ ಪ್ರಕರಣ ದಾಖಲಿಸಿ, ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ನಾರಾಯಣಸ್ವಾಮಿ ಅವರು ಅವಮಾನಕರ ಪದ ಬಳಸಿ ಟೀಕಿಸಿದ್ದರು. ಇದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಾರಾಯಣಸ್ವಾಮಿ ಅವರನ್ನು ಚಿತ್ತಾಪುರದಲ್ಲಿ ದಿಗ್ಬಂಧನ ಹಾಕಿದ್ದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿಗರು ಪ್ರತಿಭಟಿಸಿದಾಗ ರವಿಕುಮಾರ್ ಅವರು ಸಭೀಕರ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಭರದಲ್ಲಿ ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದಿದ್ದಾರೋ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದು ಖಂಡನೀಯ ಎಂದಿದ್ದಾರೆ.
ಜಿಲ್ಲೆಗೆ ಗೌರವ ತಂದುಕೊಟ್ಟ ಅಧಿಕಾರಿಗೆ ಅಂತಹ ಪದಗಳನ್ನು ಬಳಸಬಾರದಿತ್ತು. ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ವಿರುದ್ಧವೂ ನಿಂದನಾತ್ಮಕವಾಗಿ ಮಾತನಾಡಿ, ಸಾರ್ವಜನಿಕರಿಗೆ ತಪ್ಪು ಮಾಹಿತಿ ಹೋಗುವಂತೆ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ನಾಯಕರಾದ ಬಿ.ವೈ. ವಿಜಯೇಂದ್ರ, ಆರ್.ಅಶೋಕ, ಸಿ.ಟಿ. ರವಿ, ಗೋವಿಂದ ಕಾರಜೋಳ ಅವರು ಜಾತಿ, ಧರ್ಮದ ಹೆಸರಿನಲ್ಲಿ ನಿಂದನೆ ಮತ್ತು ದ್ವೇಷದ ಭಾಷಣಗಳನ್ನು ಮಾಡಿದ್ದಾರೆ. ಇದರ ಜತೆಗೆ ಕಲಬುರಗಿಯಲ್ಲಿ ಅಶಾಂತಿ ಉಂಟು ಮಾಡಲು ರವಿಕುಮಾರ್ ಅವರು ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸತ್ಯಾಗ್ರಹದಲ್ಲಿ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ ಭದ್ರೆ, ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಜಿಲ್ಲಾ ಸಂಚಾಲಕ ಎಂ.ಎಂ. ಮೇತ್ರೆ, ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಖನ್ನಾ, ಅಜೀಜ್ ಸಾಬ್ ಐಕೂರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.