
ಕಲಬುರಗಿ: ‘ಪೊಲೀಸರು ಕೇವಲ ಕಾನೂನು ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗದೇ, ಸ್ವತಃ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ ಮಾದರಿಯಾಗಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಹೇಳಿದರು.
ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಹೆಲ್ಮೆಟ್ ಧರಿಸುವ ಜಾಗೃತಿ ಮೂಡಿಸಲು ಯುನೈಟೆಡ್ ಆಸ್ಪತ್ರೆ ಸಹಯೋಗದಲ್ಲಿ ಕಲಬುರಗಿ ನಗರ ಪೊಲೀಸ್ ಕಮಿಷನರೇಟ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.
‘ನಮ್ಮ ಮೇಲೆ ಕಾನೂನು ಜಾರಿಗೆ ತರುವ ಜವಾಬ್ದಾರಿ ಮಾತ್ರವಲ್ಲ, ಕಾನೂನನ್ನು ಗೌರವಿಸಿ, ಪರಿಪಾಲಿಸುವ ಹೊಣೆಗಾರಿಕೆಯೂ ಇದೆ. ಪ್ರತಿದಿನ ಅಪಘಾತಗಳಲ್ಲಿ ಅಮೂಲ್ಯ ಜೀವಗಳು ಕಳೆದು ಹೋಗುತ್ತಿವೆ. ಅವರ ಅವಲಂಬಿತ ಕುಟುಂಬಗಳು ಅನುಭವಿಸುವ ದುಃಖವೂ ನಮ್ಮ ಮುಂದಿದೆ. ರಸ್ತೆ ಸಂಚಾರ ನಿಯಮಗಳನ್ನು ಪಾಲಿಸದಿದ್ದರೆ ನಮಗೂ ಅದೇ ಗತಿ ಬರುತ್ತದೆ’ ಎಂದು ಎಚ್ಚರಿಸಿದರು.
‘ಹೆಲ್ಮೆಟ್ ಧರಿಸಿದರೆ ಸಾವಿನ ಅಪಾಯ ಶೇ 70ರಿಂದ 80ರಷ್ಟು ಕಡಿಮೆಯಾಗುತ್ತದೆ. ಪೊಲೀಸರೇ ಹೆಲ್ಮೆಟ್ ಧರಿಸಿದರೆ ಇತರರೂ ಅದನ್ನೇ ಅನುಸರಿಸುತ್ತಾರೆ. ಹೆಲ್ಮೆಟ್ ಧಾರಣೆ ನಿತ್ಯದ ಬದ್ಧತೆಯಾಗಲಿ’ ಎಂದರು.
ಯುನೈಟೆಡ್ ಆಸ್ಪತ್ರೆಯ ತಜ್ಞರಾದ ಡಾ.ಮೊಹಮ್ಮದ್ ಅಬ್ದುಲ್ ಬಷೀರ್, ಡಾ.ವಿನಯಸಾಗರ್ ಶರ್ಮಾ ಮಾತನಾಡಿದರು.
ಡಿಸಿಪಿ ಪ್ರವೀಣ ಎಚ್.ನಾಯಕ, ಎಸಿಪಿಗಳಾದ ಶರಣಬಸಪ್ಪ ಸುಬೇದಾರ, ಬಸವೇಶ್ವರ ಹೀರಾ, ಸುಧಾ ಆದಿ, ಜೇಮ್ಸ್ ಮಿನೇಜಸ್, ಯುನೈಟೆಡ್ ಆಸ್ಪತ್ರೆಯ ಆಡಳಿತಾಧಿಕಾರಿ ದಾವೂದ್, ಹಾಗೂ ಸಂಚಾರ ಠಾಣೆ–1 ಮತ್ತು 2ರ ಹಿರಿಯ ಅಧಿಕಾರಿಗಳು ಇದ್ದರು.
ಯುನೈಟೆಡ್ ಆಸ್ಪತ್ರೆಯಿಂದ ಪೊಲೀಸರಿಗೆ 120 ಹೆಲ್ಮೆಟ್‌ಗಳನ್ನು ವಿತರಿಸಲಾಯಿತು. ಬೈಕ್ ರ್‍ಯಾಲಿಯು ಪೊಲೀಸ್ ಮೈದಾನದಿಂದ ಜಗತ್ ವೃತ್ತ, ಸರ್ದಾರ್ ಪಟೇಲ್ ವೃತ್ತ ಮಾರ್ಗವಾಗಿ ಸಂಚರಿಸಿ ಮತ್ತೆ ಪೊಲೀಸ್ ಮೈದಾನಕ್ಕೆ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.