ADVERTISEMENT

ಕಲಬುರಗಿ | ಹೊರಗ ಒಂದೇ ಸಮ ಮಳಿ, ಮನ್ಯಾಗ ಕೊಳಚಿ ನೀರು: ಜನರ ಗೋಳು

ಕಲಬುರಗಿಯ ಬಿದ್ದಾಪುರ ಕಾಲೊನಿ ನಿವಾಸಿಗಳ ಅಳಲು; ಕೆರೆಯಂತಾದ ರಸ್ತೆಗಳು, ಖಾಲಿ ನಿವೇಶನಗಳು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:48 IST
Last Updated 12 ಸೆಪ್ಟೆಂಬರ್ 2025, 5:48 IST
ಕಲಬುರಗಿಯ ಬಿದ್ದಾಪುರ ಕಾಲೊನಿಯಲ್ಲಿ ಗುರುವಾರ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಮನೆಯ ಪಾತ್ರೆಗಳನ್ನು ಮಹಿಳೆಯರು ಬೇರೆಡೆ ಸ್ಥಳಾಂತರಿಸಿದರು    ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್‌ ಆಜಾದ್‌
ಕಲಬುರಗಿಯ ಬಿದ್ದಾಪುರ ಕಾಲೊನಿಯಲ್ಲಿ ಗುರುವಾರ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಮನೆಯ ಪಾತ್ರೆಗಳನ್ನು ಮಹಿಳೆಯರು ಬೇರೆಡೆ ಸ್ಥಳಾಂತರಿಸಿದರು    ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್‌ ಆಜಾದ್‌   

ಕಲಬುರಗಿ: ‘ಬೆಳ್ಳಂಬೆಳಿಗ್ಗೆ ಸುರಿದ ಮಳೆಗೆ ಮನೆಯಲ್ಲೆಲ್ಲ ನೀರು. ನಿದ್ದೆಯಿಂದ ಎದ್ದಾಗಿನಿಂದಲೂ ಮನೆಯಿಂದ ನೀರು ಬಳಿದು ಹೊರ ಹಾಕೋದೇ ಕೆಲಸವಾಗಿದೆ. ಗಂಟೆ 11 ಹೊಡೆದರೂ, ಚಹಾ ಕೂಡ ಕುಡಿದಿಲ್ಲ. ಪರೀಕ್ಷೆ ಎನ್ನುತ್ತ ಮಕ್ಕಳು ಉಪವಾಸವೇ ಶಾಲೆಗಳಿಗೆ ಹೋದರು...’

ಇದು ನಗರದ ರಿಂಗ್ ರಸ್ತೆಯ ಆಚೆಗಿನ ಬಿದ್ದಾಪುರ ಕಾಲೊನಿ, ಬಸಂತ ನಗರ ಬಡಾವಣೆ ಮಹಿಳೆಯರ ಆಕ್ರೋಶ. 

ಗುರುವಾರ ನಸುಕಿನಲ್ಲಿ ಅಬ್ಬರಿಸಿದ ಮಳೆಯು ಬಿದ್ದಾಪುರ ಕಾಲೊನಿಯ ಕೆಲವೆಡೆ ಅವಾಂತರ ಸೃಷ್ಟಿಸಿತು. ಡಬರಾಬಾದ್‌ ಕ್ರಾಸ್‌ ಪ್ರದೇಶ, ಎಂಎಸ್‌ಕೆ ಮಿಲ್‌ ಪ್ರದೇಶ, ಹೀರಾಪುರ ವೃತ್ತದ ಕಡೆಯಿಂದ ನುಗ್ಗಿ ಬಂದ ಮಳೆ ನೀರು ರೈಲ್ವೆ ಹಳಿ ಕೆಳಗಿನ ಕಿರುಗಾಲುವೆಗಳ ಮೂಲಕ ತೆಗ್ಗು ಪ್ರದೇಶದತ್ತ ನುಗ್ಗಿತು.

ADVERTISEMENT

ಬೆಳಕು ಮೂಡುವ ಮುನ್ನವೇ ಹತ್ತಾರು ಮನೆಗಳಲ್ಲಿ ನೀರು ಹೊಕ್ಕಿತ್ತು. ಖಾಲಿ ನಿವೇಶನಗಳು, ಬಡಾವಣೆ ರಸ್ತೆಗಳು ಕೆರೆ–ಹಳ್ಳಗಳಂತೆ ಭಾಸವಾದವು. ನೀರು ಹೊಕ್ಕ ‍ಪೈಕಿ ಬಹುತೇಕರವು ಪತ್ರಾಸ್ ಮನೆಗಳು. ನಿತ್ಯ ದುಡಿದು ತಿನ್ನುವ ಬಡ ಕಾರ್ಮಿಕರು.

‘ಮನ್ಯಾಗ ನಸಕಿನ್ಯಾಗ ಸುರಿದ ಮಳೆಗೆ ನೀರು ಹೊಕ್ಕಾವ್ರಿ. ಹೊರಗ ಒಂದೇ ಸಮ ಮಳೀ. ಮನ್ಯಾಗ ಕೊಳಚಿ ಸೇರಿದ ಮಳಿ ನೀರ್. ಆ ನೀರ್ ಬಸದು–ಬಸದು ಸಾಕಾಯಿತ್ರಿ. ಎಷ್ಟು ನೀರು ತುಂಬಿ ಚೆಲ್ಲಿದರೂ, ನೀರು ಬಂದ ಬರಾಕತಾವ್ರಿ’ ಎಂದು ಕಲಾವತಿ, ಮಹಾದೇವಿ, ಚಂದ್ರಕಲಾ ಸೇರಿದಂತೆ ಹಲವರು ಅಳಲು ತೋಡಿಕೊಂಡರು.

‘ಎಂದಿನಂತೆ ಐದು ಗಂಟೆಗೆ ಎದ್ದೆವು. ಅಷ್ಟೊತ್ತಿಗೆ ಮಳೆ ನೀರು ನುಗ್ಗಿತು. ಮೊದಲೇ ನಮ್ಮದು ಸಣ್ಣ ಪತ್ರಾಸ್ ಮನೆ. ಮನ್ಯಾಗ ಈಗ ಮೊಳಕಾಲುದ್ದ ನೀರಿದೆ. ಪಾತ್ರೆ–ಪಗಡೆ, ದಿನಸಿ ಎತ್ತಿ ಮ್ಯಾಲ್‌ ಇಡಕ್ಕೂ ಜಾಗವಿಲ್ಲ’ ಎಂದು ಮನೆಗೆ ನುಗ್ಗಿದ್ದ ಮೊಳಲುದ್ದ ನೀರಲ್ಲಿ ನಿಂತಿದ್ದ ಅನಿತಾ ತ್ರಿಮುರಕೆ ಅಸಹಾಯಕತೆ ವ್ಯಕ್ತಪಡಿಸಿದರು.

‘ನಸುಕಿನಲ್ಲೇ ಮನೆಗೆ ನೀರು ಹೊಕ್ಕಿತು. ಇರೋಬರೋ ಒಂದಿಷ್ಟು ಸಾಮಾನು ಗಂಟು ಕಟ್ಟಿ ಎತ್ತರದ ಪ್ರದೇಶದಲ್ಲಿರುವ ಅಕ್ಕನ ಮನೆಗೆ ಸಾಗಿಸಿದೆ. ನಮ್ಮ ಮನೆಗೆ ಇದೀಗ ಮಂಚ ಮುಳುಗುವಷ್ಟು ನೀರು ನುಗ್ಗಿದೆ’ ಎನ್ನುತ್ತ ರೋಹಿಣಿ ನಾಟೇಕರ ತಮ್ಮ ಮನೆ ತೋರಿಸಿದರು. ಅಲ್ಲಿ ಕಿಟಕಿಗೂ ತುಸು ಕೆಳಗಿನ ತನಕ ನೀರು ತುಂಬಿತ್ತು.

‘ಮನ್ಯಾಗ ಹೊಕ್ಕಿರೋ ನೀರು ಸಂಜೆ ತನಕ ಇಳಿದರೆ ಚಲೋ. ಮತ್ತೇನಾದರೂ ಮಳಿ ಸುರಿದ್ರ, ರಾತ್ರಿ ಎಲ್ಲಿ ಕಳಿಯಬೇಕು ಎಂಬುದೇ ಚಿಂತೆಯಾಗಿದೆ’ ಎಂದು ಬೋರಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

‘ಮಳೆ ನೀರು ಹೊಕ್ಕು ಅಕ್ಕಿ, ಜೋಳ, ಬೇಳೆ ತೊಯ್ದಿವೆ. ಎಲ್ಲ ಸಾಮಾನು ಮ್ಯಾಲೆ ತೆಗೆದಿಟ್ಟಿದ್ದರಿಂದ ಅಡುಗೆಗೂ ಜಾಗ ಇಲ್ಲದಂತಾಗಿದೆ. ಮಳೆ ನೀರಿನ್ಯಾಗ ಹಾವುಗಳ ಕಾಟ ಶುರುವಾಗಿದೆ’ ಎಂದು ನರಸಮ್ಮ ಹೇಳಿದರು.

ವಿವಿಧೆಡೆ ಸಮಸ್ಯೆ: ‌

ಬಿದ್ದಾಪುರ ಕಾಲೊನಿಯಲ್ಲದೇ ನಗರದ ಗಂಜ್‌ ಕಾಲೊನಿಯಲ್ಲೂ ಮೂರು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನರು ಸಮಸ್ಯೆ ಎದುರಿಸಿದರು.

ಧರಿಯಾಪುರ ಕೋಟನೂರು ಪ್ರದೇಶ ಸೇರಿದಂತೆ ಹಲವೆಡೆ ಚರಂಡಿಗಳು ಉಕ್ಕಿ ಹರಿದು, ಖಾಲಿ ನಿವೇಶನಗಳು ಕೆರೆಗಳಂತೆ ಭಾಸವಾದವು.

ಕಿರುಮೃಗಾಲಯ:

ಧಾರಾಕಾರ ಮಳೆಯಿಂದ ನಗರದ ಕಿರು ಮೃಗಾಲಯ ಭಾಗಶಃ ಜಲಾವೃತಗೊಂಡಿತ್ತು. ಜಿಂಕೆಗಳು ವಿಹರಿಸುವ ಪ್ರದೇಶದಲ್ಲಿ ವ್ಯಾಪಕ ನೀರು ನಿಂತಿದ್ದರಿಂದ ಜಿಂಕೆಗಳು ಶೆಡ್‌ಗಳಲ್ಲಿ ಕಾಲ ಕಳೆದವು. ಪ್ರವೇಶ ದ್ವಾರದಲ್ಲಿ ಜಮಾಯಿಸಿದ್ದ ಮಳೆ ನೀರನ್ನು ಪಂಪ್‌ಸೆಟ್‌ ಮೂಲಕ ಮೃಗಾಲಯದ ಸಿಬ್ಬಂದಿ ದಿನವಿಡೀ ಹೊರಹಾಕಿದ ದೃಶ್ಯ ಕಂಡು ಬಂತು.

ಕಲಬುರಗಿಯ ಬಿದ್ದಾಪುರ ಕಾಲೊನಿಯಲ್ಲಿ ಗುರುವಾರ ಮನೆಗೆ ನುಗ್ಗಿದ ಮಳೆ ನೀರನ್ನು ಮಹಿಳೆಯೊಬ್ಬರು ಪಾತ್ರೆಗಳಲ್ಲಿ ತುಂಬಿ ಹೊರ ಹಾಕಿದರು
ಕಲಬುರಗಿ ನಗರದಲ್ಲಿ ಗುರುವಾರ ಬೆಳಿಗ್ಗೆ ಸುರಿದ ಮಳೆಯಿಂದ ಕಿರು ಮೃಗಾಲಯ ಮತ್ತು ಮಕ್ಕಳ ಉದ್ಯಾನದಲ್ಲಿ ನಿಂತಿದ್ದ ಮಳೆ ನೀರು ಹೊರಹಾಕಲು ಸಿಬ್ಬಂದಿ ಶ್ರಮಿಸಿದರು
ಕಲಬುರಗಿ ನಗರದಲ್ಲಿ ಗುರುವಾರ ಬೆಳಿಗ್ಗೆ ಸುರಿದ ಮಳೆಯಿಂದ ರೋಟರಿ ಶಾಲೆ ಆವರಣ ಜಲಾವೃತವಾಗಿತ್ತು 
ಕಲಬುರಗಿ ನಗರದಲ್ಲಿ ಕೋಟನೂರು ಧರಿಯಾಪುರ ಪ್ರದೇಶದಲ್ಲಿ ಒಳಚರಂಡಿ ಹಾಗೂ ಮಳೆ ನೀರು ಖಾಲಿ ನಿವೇಶನಕ್ಕೆ ನುಗ್ಗಿ ಕೆರೆಯಂತೆ ಭಾಸವಾಯಿತು
ಕಲಬುರಗಿಯ ಬ್ರಹ್ಮಪುರ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಳೆಯಿಂದ ಜಲಾವೃತಗೊಂಡಿದ್ದರಿಂದ ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಪರದಾಡಿದರು

‘ಮಳೆ ನೀರುಗಾಲುವೆಯೇ ಇಲ್ಲ...’

ಮುಸಲಧಾರೆ ಮಳೆಯಿಂದ ಬಿದ್ದಾಪುರ ಕಾಲೊನಿ ಮನೆಗಳಿಗೆ ನೀರು ಹೊಕ್ಕಲು ಅಸಮರ್ಪಕ ಚರಂಡಿ ಮನೆನೀರು ಕಾಲುವೆಗಳೇ ಕಾರಣ. ಹೀರಾಪುರದಿಂದ ಮುಂದೆ ಅಫಜಲಪುರ ರಸ್ತೆ ತನಕ ಮಳೆ ನೀರು ಕಾಲುವೆಯೇ ಸರಿಯಿಲ್ಲ. ಕಚ್ಚಾ ಕಾಲುವೆಯಲ್ಲಿ ಮಳೆ ನೀರು ಹೊಕ್ಕರೆ ಅದು ದಿಕ್ಕು ತಪ್ಪಿ ತಗ್ಗು ಪ್ರದೇಶಗಳಿಗೆ ನುಗ್ಗಿದ್ದರಿಂದ ಸಮಸ್ಯೆಯಾಗಿದೆ’ ಎಂಬುದು ಸ್ಥಳೀಯರ ಆರೋಪ. ‘ಮಳೆಗಾಲುವೆಗೆ ₹ 10 ಕೋಟಿ ಮಂಜೂರು’ ‘ಹೀರಾಪುರ ಕ್ರಾಸ್‌ನಿಂದ ಅಫಜಲಪುರ ರಸ್ತೆ ತನಕ ಸುಸಜ್ಜಿತ ಮಳೆ ನೀರುಗಾಲುವೆ ನಿರ್ಮಾಣ ಕಾಮಗಾರಿ ಟೆಂಡರ್‌ ಹಂತದಲ್ಲಿದೆ. 2 ಮೀಟರ್‌ ಅಗಲ 10 ಅಡಿ ಆಳದ ಮಳೆ ನೀರುಗಾಲುವೆಗೆ ಕೆಕೆಆರ್‌ಡಿಬಿಯಿಂದ ₹ 5 ಕೋಟಿ ಮಹಾತ್ಮ ಗಾಂಧಿ ನಗರೋತ್ಥಾನದ ಯೋಜನೆಯಡಿ ₹ 5 ಕೋಟಿ ಈಗಾಗಲೇ ಮಂಜೂರಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದರೆ ಶೀಘ್ರವೇ ಕಾಮಗಾರಿ ಆರಂಭವಾಗಲಿದೆ’ ಎಂದು ವಾರ್ಡ್‌ನಂ.51ರ ಪಾಲಿಕೆ ಸದಸ್ಯೆ ಪಾರ್ವತಿ ರಾಜು ದೇವದುರ್ಗ ತಿಳಿಸಿದರು.

ಮಲೆನಾಡು ನೆನಪಿಸಿದ ವರ್ಷಧಾರೆ

ಕಲಬುರಗಿ ನಗರದ‌ಲ್ಲಿ ಎರಡು ದಿನಗಳಿಂದ ನಸುಕಿನಿಂದ ಸುರಿಯುತ್ತಿರುವ ಮಳೆ ‘ಬಿಸಿಲು ನಗರಿ’ಯಲ್ಲಿ ಮಲೆನಾಡಿನ ವಾತಾವರಣ ನೆನಪಿಸುತ್ತಿದೆ. ಗುರುವಾರ ಬೆಳಿಗ್ಗೆ 4 ಗಂಟೆಯಿಂದ ಧಾರಾಕಾರವಾಗಿ ಆರಂಭವಾದ ಮಳೆ‌ ಬೆಳಿಗ್ಗೆ 8 ಗಂಟೆ ತನಕ ಸುರಿಯಿತು. ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ಜನ‌ಜೀವನ ಅಸ್ತವ್ಯಸ್ತಗೊಂಡಿದೆ. ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಉದ್ಯೋಗಕ್ಕೆ ತೆರಳುವ ನೌಕರರು ಹಾಗೂ ಕೂಲಿ‌ಕೆಲಸಕ್ಕೆ ತೆರಳುವ‌ ಕಾರ್ಮಿಕರು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.