ADVERTISEMENT

ಕಲಬುರಗಿ| ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 5:18 IST
Last Updated 11 ಜನವರಿ 2026, 5:18 IST
ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ಪೊಲೀಸರು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದನ್ನು ಖಂಡಿಸಿ ಬಿಜೆಪಿ ಸದಸ್ಯರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು  ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ಪೊಲೀಸರು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದನ್ನು ಖಂಡಿಸಿ ಬಿಜೆಪಿ ಸದಸ್ಯರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು  ಪ್ರಜಾವಾಣಿ ಚಿತ್ರ   

ಕಲಬುರಗಿ: ಹುಬ್ಬಳ್ಳಿಯಲ್ಲಿ ಜ.7ರಂದು ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಎಂಬುವವರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.

‘ರಾಜಕೀಯ ದ್ವೇಷಕ್ಕಾಗಿ ಒಬ್ಬ ಮಹಿಳೆಯ ಮೇಲೆ ದೌರ್ಜನ್ಯ ಎಸಗಲು ಪೊಲೀಸರಿಗೆ ಕುಮ್ಮಕ್ಕು ನೀಡಿದ್ದು, ನಾಚಿಕೆಗೇಡಿನ ಸಂಗತಿ. ಪೊಲೀಸ್‌ ಇಲಾಖೆ ಮೇಲೆ ಸರ್ಕಾರದ ನಿಯಂತ್ರಣ ಇಲ್ಲದಿರುವುದಕ್ಕೆ ಈ ಘಟನೆಯೇ ಸಾಕ್ಷಿ. ಮಹಿಳೆ ಮೇಲೆ ಪೊಲೀಸರು ದರ್ಪ ಪ್ರದರ್ಶಿಸಿರುವುದು ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತ ಹಾಗೂ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಸಮಾಜದಲ್ಲಿ ಪೊಲೀಸ್‌ ವ್ಯವಸ್ಥೆ ಇರುವುದು ಶಾಂತಿ ಕಾಪಾಡಲು ಹೊರತು ಗೂಂಡಾಗಿರಿ ಮಾಡಲು ಅಲ್ಲ. ಮಹಿಳೆಯನ್ನು ಅಸಭ್ಯ ರೀತಿ ನಡೆಸಿಕೊಂಡ ರೀತಿ ನಾಚಿಕೆಗೇಡು. ಘಟನೆಗೆ ಕಾರಣರಾದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ತೇಜೋವಧೆ ಮಾಡಲು ಶ್ರದ್ಧಾಂಜಲಿ ಪೋಸ್ಟ್‌ ಹಾಕಿರುವ ಬಿಲ್ಲವ ಸಂದೇಶ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಹಿಳೆಯರಿಗೆ ಸುರಕ್ಷತೆಯೇ ಮುಖ್ಯ. ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಇಂತಹ ಘಟನೆಗಳು ಮುಂದೆಂದೂ ನಡೆಯದಿರಲಿ’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಪ್ರತಿಭಟನಕಾರರು, ನಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಕುಳಿತು ಪ್ರತಿಭಟಿಸಿದರು. ಇದರಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಮೂಲಕ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಅಶೋಕ ಬಗಲಿ, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಶಾಸಕ ಡಾ.ಅವಿನಾಶ ಜಾಧವ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಶಿವರಾಜ ಪಾಟೀಲ ರದ್ದೇವಾಡಗಿ, ಹರ್ಷಾನಂದ ಗುತ್ತೇದಾರ, ನಿತಿನ್‌ ಗುತ್ತೇದಾರ, ಅಂಬಾರಾಯ ಅಷ್ಟಗಿ, ಬಿಜೆಪಿ ಮಹಿಳಾ ಮೋರ್ಚಾದ ಪ್ರಮುಖರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಪೊಲೀಸರೂ ಸುರಕ್ಷಿತ ಇಲ್ಲ. ಗೃಹ ಸಚಿವ ಪರಮೇಶ್ವರ ‘ಐ ಡೋಂಟ್‌ ನೋ ಮಿನಿಸ್ಟರ್‌’
ಡಾ.ಸುಧಾ ಹಾಲಕೈ ಬಿಜೆಪಿ ರಾಜ್ಯ ವಕ್ತಾರೆ
ಕಾಂಗ್ರೆಸ್‌ ಸರ್ಕಾರ ದ್ವೇಷ ರಾಜಕೀಯ ಮಾಡುತ್ತಿದೆ. ಸುಳ್ಯದಲ್ಲೂ ದಲಿತ ಶಾಸಕಿಗೆ ಅಪಮಾನ ಮಾಡಿರುವುದು ತೀವ್ರ ಖಂಡನೀಯ
ಜಯಶ್ರೀ ಮತ್ತಿಮಡು ಬಿಜೆಪಿ ನಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.