ADVERTISEMENT

ಕಲಬುರಗಿ | ಸಮೀಕ್ಷೆಗೆ ಮೊದಲ ದಿನ ಹಲವು ಅಡ್ಡಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:58 IST
Last Updated 23 ಸೆಪ್ಟೆಂಬರ್ 2025, 4:58 IST
ಕಲಬುರಗಿಯ ಸುಂದರ ನಗರದಲ್ಲಿ ಸೋಮವಾರ ನಡೆದ ಸಮೀಕ್ಷಾ ಕಾರ್ಯವನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ವೀಕ್ಷಿಸಿದರು
ಕಲಬುರಗಿಯ ಸುಂದರ ನಗರದಲ್ಲಿ ಸೋಮವಾರ ನಡೆದ ಸಮೀಕ್ಷಾ ಕಾರ್ಯವನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ವೀಕ್ಷಿಸಿದರು   

ಕಲಬುರಗಿ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲೆಯ ಅಲ್ಲಲ್ಲಿ ಮೊದಲ ದಿನ ಹತ್ತಾರು ಸಮಸ್ಯೆಗಳು ಕಾಡಿದವು.

ಕೆಲವೆಡೆ ಮುಖವಾಗಿ ಸರ್ವರ್‌ ಸಮಸ್ಯೆ ಕಾಡಿತು. ಆ್ಯಪ್‌ ಬಿಡುಗಡೆಯೂ ವಿಳಂಬವಾಯಿತು. ಬಹುತೇಕ ಕಡೆ ಆ್ಯಪ್‌ ಇನ್‌ಸ್ಟಾಲೇಷನ್‌ಗೆ ತಾಂತ್ರಿಕ ತೊಡಕು ಉಂಟಾಯಿತು. ಕೆಲವೆಡೆ ಸಮೀಕ್ಷೆಯ ಕಿಟ್‌ಗಳು ಸಿಗದ ಕಾರಣ ಹಲವು ಗಣತಿದಾರರು ಮೊದಲ ದಿನ ಸಮೀಕ್ಷೆಯಿಂದ ದೂರ ಉಳಿದರು.

ಚಿಂಚೋಳಿಯಲ್ಲಿ 380 ಗಣತಿದಾರರ ಪೈಕಿ 145 ಮಂದಿಗೆ ಮಾತ್ರ ಸಮೀಕ್ಷಾ ಕಿಟ್‌ ಪಡೆದಿದ್ದರು. ಜೊತೆಗೆ ಗಣತಿ‌ಕಾರ್ಯಕ್ಕೆ ನಿಯೋಜಿತರಾದವರಲ್ಲಿ ಅಂಗವಿಕಲರು, ಗರ್ಭಿಣಿಯರು–ಬಾಣಂತಿಯರು ಗಣತಿಯಿಂದ ವಿನಾಯಿತಿ ಕೋರಿದ್ದರು. ಪರಿಷ್ಕೃತ ಆದೇಶ ಸಿಗದ ಕಾರಣ ತುಸು ಗೊಂದಲವಾಯಿತು.

ADVERTISEMENT

ಆಳಂದದಲ್ಲಿ ಕಿಟ್‌ಗಳು ಸಿಗದ ಕಾರಣ ಮಂಗಳವಾರದಿಂದ ಸಮೀಕ್ಷೆ ನಡೆಯಲಿದೆ. ಸೇಡಂನಲ್ಲಿ ಸಮೀಕ್ಷೆ ಕಾರ್ಯಕ್ಕೆ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಕೆಲವೆಡೆ ಆ್ಯಪ್‌ ಲಾಗಿನ್‌ ಆಗದೇ ಗಣತಿದಾರರು ಪರದಾಡಿದರು.

ಕಾಳಗಿ ತಾಲ್ಲೂಕಿನಲ್ಲಿ ಸೋಮವಾರ ಸಮೀಕ್ಷಾ ಕಿಟ್‌ ವಿತರಿಸುವ ಕಾರ್ಯ ನಡೆದಿದ್ದು, ಮಂಗಳವಾರದಿಂದ ಸಮೀಕ್ಷೆ ನಡೆಯಲಿದೆ.

‘ಚಿತ್ತಾಪುರ ತಾಲ್ಲೂಕಿನಲ್ಲಿ ಸಮೀಕ್ಷೆ ಪ್ರಾರಂಭಿಸಲಾಗಿದೆ’ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಚಾಲನೆ:

ಮನೆ–ಮನೆ ಗಣತಿ ಕಾರ್ಯಕ್ಕೆ ಸೋಮವಾರ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಕಲಬುರಗಿಯ ವಾರ್ಡ್‌ ನಂ.33 ಸುಂದರ ನಗರದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಚಾಲನೆ ನೀಡಿದರು.

ಈ ವೇಳೆ, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಉಪ ವಿಭಾಗಾಧಿಕಾರಿ ಸಾಹಿತ್ಯಾ ಆಲದಕಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಪಾಲಿಕೆ ಸದಸ್ಯೆ ರಾಗಮ್ಮ ಇನಾಮ್ದಾರ, ಸಮೀಕ್ಷೆಯ ಸದಸ್ಯ ಕಾರ್ಯದರ್ಶಿ ಸೋಮಶೇಖರ್ ವೈ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಯೋಜನೆಯ ವ್ಯವಸ್ಥಾಪಕ ಅರವಿಂದ ರೆಡ್ಡಿ, ಮೊರಾರ್ಜಿ ಶಾಲೆಯ ಶಿಕ್ಷಕಿ ಜಗದೇವಿ, ಇಲಾಖೆಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.