
ಕಲಬುರಗಿ: ‘ಲೋಪದೋಷಗಳನ್ನು ಸರಿಪಡಿಸುವ ಹಾಗೂ ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗಾ) ಹೆಸರನ್ನು ವಿಕಸಿತ ಭಾರತ–ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಎಂದು ಬದಲಾಯಿಸಿದೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಉದ್ಯೋಗ ಸೃಷ್ಟಿ ಹಾಗೂ ಆಸ್ತಿ ರಚನೆ ನರೇಗಾ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಆದರೆ, ಯೋಜನೆಯ ಅನುಷ್ಠಾನದ ವೇಳೆ ಈ ಆಶೋತ್ತರಗಳನ್ನು ಗಾಳಿಗೆ ತೂರಲಾಗುತ್ತಿತ್ತು. ಸತ್ಯಾ ಸತ್ಯತೆ ತಿಳಿಯಲು ರಚಿಸಲಾಗಿದ್ದ ಸಂಸದೀಯ ಸಮಿತಿ ಈ ಕುರಿತು ಪರಿಶೀಲಿಸಿದಾಗ ಶ್ರಮಿಕರಿಗೆ ಕೂಲಿ ಪಾವತಿ ವಿಳಂಬ, ಕಳಪೆ ಮತ್ತು ಅಪೂರ್ಣ ಕಾಮಗಾರಿ, ಬೋಗಸ್ ಬಿಲ್, ಯಂತ್ರ ಬಳಕೆ, ನಕಲಿ ಜಾಬ್ ಕಾರ್ಡ್ ಸೃಷ್ಟಿ, ಅಸ್ತಿತ್ವದಲ್ಲಿಲ್ಲದ ಕಾಮಗಾರಿಗೆ ಅನುದಾನ ಬಳಸಿಕೊಂಡಿರುವುದು ಕಂಡುಬಂದಿತ್ತು. ಇವುಗಳನ್ನು ತಡೆಯುವ ಉದ್ದೇಶದಿಂದ ಕಾಯ್ದೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿ ಅದರ ಹೆಸರು ಬದಲಿಸಿ ಜಾರಿಗೆ ತರಲಾಗಿದೆ’ ಎಂದು ಹೇಳಿದರು.
‘ನರೇಗಾ ಯೋಜನೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತಡೆಯಲು ಎನ್‌ಡಿಎ ಸರ್ಕಾರ ತಂತ್ರಜ್ಞಾನ ಬಳಕೆಗೆ ಮುಂದಾಯಿತು. ಇದರ ಭಾಗವಾಗಿಯೇ ಜಿಯೊ ಟ್ಯಾಗ್, ಫೋಟೊಗ್ರಾಫಿಕ್ ಎವಿಡೆನ್ಸ್, ಬಯೊ ಮೆಟ್ರಿಕ್, ಆಧಾರ್ ಸೀಡಿಂಗ್ ಮತ್ತು ಡಿಬಿಟಿ ಮೂಲಕ ಕೂಲಿ ಪಾವತಿ, ಎನ್‌ಎನ್‌ಎಂಎಸ್ ಆ್ಯಪ್ ಮೂಲಕ ಹಾಜರಿ ಹಾಕುವಂಥ ಸುಧಾರಣಾ ಕ್ರಮಗಳನ್ನು ಪರಿಚಯಿಸಿತು. ನರೇಗಾ ಯೋಜನೆ ಮುಗಿಸುವ ಉದ್ದೇಶ ಇದ್ದರೆ ಇಂಥ ಕ್ರಾಂತಿಕಾರಕ ಕ್ರಮಗಳನ್ನು ಏಕೆ ಕೈಗೊಳ್ಳುತ್ತಿತ್ತು’ ಎಂದು ಅವರು ಪ್ರಶ್ನಿಸಿದರು.
ಶಾಸಕರಾದ ಬಸವರಾಜ ಮತ್ತಿಮಡು, ಅವಿನಾಶ ಜಾಧವ, ಮಾಜಿ ಶಾಸಕರಾದ ಸುಭಾಷ ಗುತ್ತೇದಾರ, ರಾಜಕುಮಾರ ಪಾಟೀಲ ತೇಲ್ಕೂರ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಬೆಣ್ಣೂರ, ಲಿಂಗರಾಜ ಬಿರಾದಾರ, ಮಹಾದೇವ ಬೆಳಮಗಿ ಹಾಗೂ ಕಾರ್ಯದರ್ಶಿ ಸಂತೋಷ ಹಾದಿಮನಿ ಹಾಜರಿದ್ದರು.
125 ದಿನಗಳ ಉದ್ಯೋಗ ಭರವಸೆ
‘ಹೊಸ ಕಾಯ್ದೆ ಗ್ರಾಮೀಣ ಕುಟುಂಬಗಳಿಗೆ 125 ದಿನಗಳ ಉದ್ಯೋಗ ಭರವಸೆಯನ್ನು ನೀಡಲಿದೆ’ ಎಂದು ಅಮರನಾಥ ಪಾಟೀಲ ತಿಳಿಸಿದರು. ‘ಅಲ್ಲದೆ ಅದು ತಂತ್ರಜ್ಞಾನ ಆಧಾರಿತ ಪಾರದರ್ಶಕ ಮೇಲ್ವಿಚಾರಣೆ ಸಾಧ್ಯವಾಗಿಸುತ್ತದೆ. ಹೊಸ ಕಾಯ್ದೆ ರಾಜ್ಯ ಸರ್ಕಾರದ ನಿರ್ಧಾರದ ಹಕ್ಕು ಕಿತ್ತುಕೊಳ್ಳುವುದಿಲ್ಲ. ವೀಕೇಂದ್ರಿಕರಣಕ್ಕೆ ಪೆಟ್ಟು ಬೀಳುತ್ತದೆ ಎನ್ನುವುದು ಸುಳ್ಳು. ಹೊಸ ಕಾಯ್ದೆ ಗ್ರಾಮ ಪಂಚಾಯಿತಿಗಳನ್ನು ವಿಕಸನಕ್ಕೆ ತೆರೆದುಕೊಳ್ಳುವಂತೆ ಮಾಡುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.