ಕಲಬುರಗಿ: ಮಗಳ ಮದುವೆಗಾಗಿ ಕುರಿಗಳನ್ನು ಮಾರಿ ಮನೆಯ ಅಲ್ಮೇರಾದಲ್ಲಿ ತಂದಿಟ್ಟಿದ್ದ ₹3.62 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹1.75 ಲಕ್ಷ ನಗದು ಕದ್ದು ಕಳ್ಳರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಲ್ಲೂಕಿನ ತಾಡತೆಗನೂರು ಗ್ರಾಮದ ಕುರಿಗಾಹಿ ಬಸವರಾಜ ಪೂಜಾರಿ ಚಿನ್ನಾಭರಣ, ನಗದು ಕಳೆದುಕೊಂಡವರು.
‘ಮಗಳ ಮದುವೆ ಇರುವದರಿಂದ 15 ಕುರಿಗಳು ಮತ್ತು ಕುರಿಗಳ ಗೊಬ್ಬರ ಮಾರಿದ ಹಣದಲ್ಲಿ ಚಿನ್ನಾಭರಣ ತಂದು ಮನೆಯಲ್ಲಿ ಇಟ್ಟಿದ್ದೆ. ಒಂದಿಷ್ಟು ಮೊದಲಿನ ಚಿನ್ನಾಭರಣವೂ ಇತ್ತು. ನಾವು ಮನೆಯಲ್ಲಿ ಇಲ್ಲದಾಗ ಅಲ್ಮೇರಾದಲ್ಲಿದ್ದ 5 ಗ್ರಾಂ ಬಂಗಾರದ ಐದು ಸುತ್ತು ಉಂಗುರ, 7 ಗ್ರಾಂ ಬಂಗಾರದ ಬೋರಮಾಳ ಸರ, 6 ಗ್ರಾಂ ಚಿನ್ನದ ಸರ, 2 ಗ್ರಾಂ ಬಂಗಾರದ ಜುಮಕಿ, 1 ಗ್ರಾಂ ಚಿನ್ನದ ಕಿವಿಯ ಮುರು, 1/2 ಗ್ರಾಂನ 2 ಜೊತೆ ಕಿವಿ ಕಡ್ಡಿ, 1 ಗ್ರಾ ಚಿನ್ನದ 3 ಬಿಗಡಿ ಕಡ್ಡಿ, 25 ತೋಲ ಬೆಳ್ಳಿ ಆಭರಣಗಳಾದ ಕಾಲು ಚೈನ್, ಹಾಲಗಡ, ಉಡುದಾರ ಸೇರಿದಂತೆ ಒಟ್ಟು ₹3.62 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ ಹಾಗೂ ₹1.75 ಲಕ್ಷ ನಗದು ಕಳವು ಮಾಡಲಾಗಿದೆ’ ಎಂದು ದೂರಿನಲ್ಲಿ ಬಸವರಾಜ ಪೂಜಾರಿ ತಿಳಿಸಿದ್ದಾರೆ.
‘ತಾಯಿ ಮಿರಜ್ ಆಸ್ಪತ್ರೆಗೆ, ತಂದೆ ಕುರಿ ಮೇಯಿಸಲು ಹೋಗಿದ್ದರು. ಪತ್ನಿ ಕೃಷಿ ಕೆಲಸಕ್ಕೆ ಹೋಗಿದ್ದಳು. ನಾನು ಡೊಳ್ಳು ಬಾರಿಸಲು ಹೋಗಿದ್ದೆ. ಇಬ್ಬರು ಮಕ್ಕಳು ಮಲ್ಲಯ್ಯನ ಜಾತ್ರೆಗೆ ಹೋಗಿದ್ದರು. ಮನೆಗೆ ಕೀಲಿ ಹಾಕಿ ಮನೆಯ ಬೀಗದ ಕೈಯನ್ನು ಮಾಡದಲ್ಲಿ ಇಟ್ಟಿದ್ದೆವು. ಮನೆಗೆ ಮರಳಿ ಬಂದಾಗ ಕೀಲಿ ಹಾಕಿದ ಸ್ಥಿತಿಯಲ್ಲೇ ಇತ್ತು. ತಾಯಿ ಸಂಜೆ ಮನಗೆ ಬಂದರು. ಆಗ ಉದ್ರಿ ತಂದಿದ್ದ ರಸಗೊಬ್ಬರದ ಹಣ ಕೇಳಿದಾಗ ತಾಯಿ ಅಲ್ಮೇರಾ ತೆರೆದು ನೋಡಿದಾಗ ಕಳವು ಬೆಳಕಿಗೆ ಬಂದಿದೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.