ಕಲಬುರಗಿ: ‘ಹೆಣ್ಣು–ಗಂಡಿನ ನಡುವಣ ಭೇದ ದೇವರ ಸೃಷ್ಟಿಯಲ್ಲ. ಆ ಭೇದ ಸೃಷ್ಟಿಸಿದ್ದು ಭೂಮಿ ಮೇಲಿನ ಜನ’ ಎಂದು ಅಖಿಲ ಭಾರತ ಜನವಾದಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಬಾಳಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿಯ 11ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ದೇವರು ಎಲ್ಲರಿಗಾಗಿ ಒಂದೇ ಭೂಮಿ, ಸೂರ್ಯ, ನೀರು–ನೆರಳು, ಗಾಳಿ, ಒಂದೇ ಬಣ್ಣದ ರಕ್ತ ಕೊಟ್ಟಿದ್ದಾನೆ. ಆದರೆ, ಹೆಣ್ಣು ಕನಿಷ್ಠ, ಹೆಣ್ಣು ಮೈಲಿಗೆ ಎಂಬುದನ್ನು ಶತಮಾನಗಳಿಂದ ಸಮಾಜ ತಲೆ ತುಂಬಿದೆ. ಸಿಕ್ಕಲ್ಲೆಲ್ಲ ಸಂಚರಿಸಿ ಸಿಕ್ಕಿದ್ದನ್ನು ತಿಂದು ಬರುವ ದನದ ಹಾಲು ದೇವರಿಗೆ ಸಲ್ಲುವುದಾದರೆ, ಜೀವ ನೀಡುವ ಶಕ್ತಿಯುಳ್ಳ ಮಹಿಳೆಯರು ಹೇಗೆ ಕನಿಷ್ಠರಾಗುತ್ತಾರೆ? ಬಸವಣ್ಣ, ಅಂಬೇಡ್ಕರ್, ಪರಮಾತ್ಮ ಸೇರಿದಂತೆ ಎಲ್ಲರೂ ಹುಟ್ಟಿದ್ದು ತಾಯಿಯಿಂದಲೇ. ಮಹಿಳೆಯರ ಹೊಟ್ಟೆಯು ದೇವರನ್ನು ಹಡೆದ ದೇವರಗುಡಿ’ ಎಂದರು.
‘ಇಂಥ ಮಹಿಳೆಯರು ಶಾಸಕರಾಗಿ ವಿಧಾನಸೌಧದಲ್ಲಿ ಇರಲಿ, ಜಿಲ್ಲಾಧಿಕಾರಿಯೇ ಆಗಲಿ ಇಲ್ಲವೇ ಸೇನೆಯೇ ಸೇರಲಿ. ಅವರಿಗೆ ಎಲ್ಲಿಯೂ ರಕ್ಷಣೆಯೇ ಇಲ್ಲ. ಇದಕ್ಕೆ ಸಮಾಜದಲ್ಲಿ ನಡೆದ ಇತ್ತೀಚಿನ ಘಟನೆಗಳೇ ನಿದರ್ಶನ. ಇನ್ನು, ಜನ ಸಾಮಾನ್ಯರಿಗೆ, ಬೀದಿ ಬದಿಯಲ್ಲಿ ಇರುವವರಿಗೆ ರಕ್ಷಣೆ ಸಿಗುತ್ತದೆಯೇ?’ ಎಂದು ಕಳವಳ ವ್ಯಕ್ತಪಡಿಸಿದರು.
‘ಹೆಣ್ಣು ಮಕ್ಕಳ ರಕ್ಷಣೆ, ಅವರ ಸಬಲೀಕರಣ, ಅವರು ಹಕ್ಕುಗಳನ್ನು ಪಡೆಯುವಂತಾಗಲು ಸಂಘಟಿತರಾಗುವುದೊಂದೇ ಮಾರ್ಗ. ಈ ನಿಟ್ಟಿನಲ್ಲಿ ಹಳ್ಳಿ–ಹಳ್ಳಿಯಲ್ಲಿ ಮಹಿಳಾ ಸಂಘಟನೆಗಳನ್ನು ಕಟ್ಟುವ ಅಗತ್ಯವಿದೆ. ಸಂಘಟನೆಯಿಂದ ಮುಂದಿನ ದಿನಗಳಲ್ಲಿ ಒಂಟಿ ಮಹಿಳೆಯರ ಸಮೀಕ್ಷೆ ನಡೆಸಿ, ಅವರ ಸಬಲೀಕರಣಕ್ಕೆ ಶ್ರಮಿಸುವ ಗುರಿಯಿದೆ’ ಎಂದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ‘ಸೀಮಾತೀತವಾಗಿ ವಿಶ್ವದಲ್ಲಿನ ಮಹಿಳೆಯರೆಲ್ಲ ಒಂದೇ. ದುಡಿಯುವ ಮಂದಿ ಎಲ್ಲವೂ ಒಂದೇ. ನಮ್ಮ ಮೇಲಿನ ಅತ್ಯಾಚಾರ, ಹಿಂಸೆ, ದೌರ್ಜನ್ಯ ತಡೆಯಬೇಕಾದರೆ, ನಾವೆಲ್ಲ ಸಂಘಟಿತರಾಗಬೇಕು. ಜನವಾದಿ ಸಂಘಟನೆಯ ಸದಸ್ಯತ್ವ ಸಂಖ್ಯೆಯನ್ನು ಈಗಿನ 7–8 ಸಾವಿರದಿಂದ 25ಕ್ಕೆ ಹೆಚ್ಚಿಸಬೇಕು. ಪ್ರತಿ ಗ್ರಾಮ, ಪಟ್ಟಣ, ತಾಲ್ಲೂಕುಗಳಲ್ಲಿ ಜನವಾದಿ ಸಂಘಟನೆ ಕಟ್ಟಬೇಕಿದೆ’ ಎಂದರು.
ಮುಖಂಡರಾದ ಶಾಂತಾ ಘಂಟಿ, ಗೌರಮ್ಮ ಪಾಟೀಲ, ಲವಿತ್ರಾ ವಸ್ತ್ರದ, ಸುಜಾತಾ ಕುಸನೂರು ಮಾತನಾಡಿದರು. ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಚಂದಮ್ಮ ಗೋಳಾ, ಕಾರ್ಯದರ್ಶಿ ಪದ್ಮಿನಿ ಕಿರಣಗಿ ವೇದಿಕೆಯಲ್ಲಿ ಇದ್ದರು.
ಸಿದ್ದಿಪಾಷಾ ದರ್ಗಾದಿಂದ ಕನ್ನಡ ಭವನದ ತನಕ ಮೆರವಣಿಗೆ ಸಂಘಟಿತರಾದರೆ ಮಹಿಳೆಯರಿಗೆ ನ್ಯಾಯ ಒಗ್ಗಟ್ಟು, ಸಂಘಟನೆ ಪ್ರತಿಪಾದಿಸಿದ ಗಣ್ಯರು
- ‘ದೇಶದಲ್ಲಿ ಮುಂದೆ ಕಾದಿದೆ ಕಷ್ಟ...’ ‘ದೇಶದಲ್ಲಿ ಬಡವರು ಮುಸ್ಲಿಮರು ದಲಿತರಿಗೆ ಮತಹಕ್ಕು ಸಿಗದಂತೆ ಮಾಡುವ ಷಡ್ಯಂತ್ರ ಬಿಹಾರದಲ್ಲಿ ಆರಂಭವಾಗಿದೆ. ದೇಶದಲ್ಲಿ ಮುಂದೆ ಕಷ್ಟದ ದಿನಗಳಿವೆ. ನಾವು ಬರೀ ಪಡಿತರ ಚೀಟಿ ಮನೆ ಉದ್ಯೋಗ ಖಾತ್ರಿ ಸಂಬಳ ಪಿಂಚಣಿಗಾಗಿ ಮಾತ್ರವೇ ಬಡಿದಾಡುತ್ತ ಕುಳಿತರೆ ನಮ್ಮ ದೇಶ ಉಳಿಯಲ್ಲ. ಮೂರು ಪಟ್ಟು ಕೆಲಸ ಮಾಡಿ ಮನೆ ಕುಟುಂಬ ತವರು ಮನೆ–ಗಂಡನ ಮನೆ ಉಳಿಸಿರುವ ನಮಗೆ ಈ ದೇಶ ಉಳಿಸುವುದು ಕಷ್ಟವೇ? ಮಹಿಳೆಯರು ಸಂಘಟಿತರಾದರೆ ರಾಜಕೀಯ ತಿಳಿವಳಿಕೆ ತೆಗೆದುಕೊಂಡರೆ ದುಡಿಯುವ ಮಂದಿ ಒಂದೇ ಹಿಂದೂ–ಮುಸ್ಲಿಂ ಒಂದೇ ಎಂದರೆ ಮಾತ್ರವೇ ದೇಶ ಉಳಿಸಲು ಸಾಧ್ಯ’ ಎಂದು ಕೆ.ನೀಲಾ ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.