ಸಾವು
ಪ್ರಾತಿನಿಧಿಕ ಚಿತ್ರ
ಕಲಬುರಗಿ: ಶನಿವಾರ ನಾಪತ್ತೆಯಾಗಿದ್ದ ಯುವಕರೊಬ್ಬರು ನಗರದ ಬಸವೇಶ್ವರ ಕಾಲೊನಿ ಸಮೀಪ ಚರಂಡಿಯಲ್ಲಿ ಶವವಾಗಿ ಭಾನುವಾರ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಕೆಬಿಎನ್ ದರ್ಗಾ ಪ್ರದೇಶದ ನಯಾ ಮೊಹಲ್ಲಾದ ನಿವಾಸಿ ಮುಝಮಿಲ್ ಸಿದ್ದೀಕ್ ಅಹ್ಮದ್ (18) ಮೃತರು.
ಮುಝಮಿಲ್ ಶನಿವಾರ ರಾತ್ರಿ ಮನೆಗೆ ಬಾರದ ಕಾರಣ ಪಾಲಕರು ತಡರಾತ್ರಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ಆದರೆ, ಬೆಳಿಗ್ಗೆಯಷ್ಟೊತ್ತಿಗೆ ಎಂ.ಬಿ.ನಗರ ಸಮೀಪದ ಮಳೆ ನೀರುಗಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಳವು
ಕಲಬುರಗಿಯ ಭವಾನಿ ನಗರದ ಹನುಮಾನ ದೇವಸ್ಥಾನದ ಸಮೀಪದ ಕಿರಾಣಿ ಅಂಗಡಿ ಕೀಲಿ ಮುರಿದ ಕಳ್ಳರು ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಚಂದ್ರಕಾಂತ ಗೋಳಾ ಚಿನ್ನಾಭರಣ ಕಳೆದುಕೊಂಡವರು.
‘ಅಂಗಡಿಯ ಹಿಂದಿನ ಬಾಗಿಲಿನ ಕೀಲಿ ಮುರಿದು ಅಂಗಡಿಯ ಕೌಂಟರ್ ಟೇಬಲ್‌ನ ಡ್ರಾನಲ್ಲಿದ್ದ 30 ಗ್ರಾಂ ಚಿನ್ನಾಭರಣ ಹಾಗೂ ₹12 ಸಾವಿರ ಕದ್ದು ಪರಾರಿಯಾಗಿದ್ದಾರೆ’ ಎಂದು ದೂರಿನಲ್ಲಿ ಚಂದ್ರಕಾಂತ ತಿಳಿಸಿದ್ದಾರೆ. ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹39 ಲಕ್ಷ ವಂಚನೆ
ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ₹39 ಲಕ್ಷ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಹಳೇ ಜೇವರ್ಗಿ ರಸ್ತೆಯ ಶಹಬಾಜ್ ಕಾಲೊನಿಯ ನಿವಾಸಿ ಸೈಯದ್ ಮೋಯಿನ್ ಪಾಶಾ ವಂಚನೆಗೊಳಗಾದವರು.
‘ಷೇರುಪೇಟೆಯಲ್ಲಿ ಹೂಡಿಕೆ ಕುರಿತು ಅಂತರ್ಜಾಲದಲ್ಲಿ ಹುಡುಕುವಾಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಲಿಂಕ್ ಮೂಲಕ ನನ್ನ ವೈಯಕ್ತಿಕ ವಿವರ ನಮೂದಿಸಿದೆ. ಬಳಿಕ ವಾಟ್ಸ್‌ಆ್ಯಪ್ ಮೂಲಕ ಕೆಲವರು ಹೂಡಿಕೆಗೆ ಪ್ರೇರೆಪಿಸಿದರು. ನಾನು ಹಂತಹಂತವಾಗಿ ₹33 ಲಕ್ಷ ಹೂಡಿಕೆ ಮಾಡಿದೆ. ಬಳಿಕ ನನ್ನ ಡಿಮ್ಯಾಟ್ ಖಾತೆಯಲ್ಲಿ ₹80 ಲಕ್ಷ ಲಾಭ ತೋರಿಸಿತ್ತು. ಅದರಿಂದ ಲಾಭಾಂಶ ಹಿಂಪಡೆಯಲು ಯತ್ನಿಸಿದಾಗ ₹6 ಲಕ್ಷದಷ್ಟು ಹಣ ಕಮಿಷನ್ ರೂಪದಲ್ಲಿ ಕಟ್ಟಲು ಸೂಚಿಸಿದರು. ಅದನ್ನೂ ಕಟ್ಟಿದಾಗ ಮತ್ತೆ ₹4.74 ಲಕ್ಷ ವರ್ಗಾಯಿಸಲು ತಿಳಿಸಿದಾಗ ಹೆಚ್ಚಿನ ಲಾಭದ ಆಮಿಷವೊಡ್ಡಿ ವಂಚಿಸಿರುವುದು ಗೊತ್ತಾಯಿತು’ ಎಂದು ಸೈಯದ್ ಮೋಯಿನ್ ಪಾಶಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.