ADVERTISEMENT

‘ಅವ್ವ ಇಲ್ಲ, ಅಪ್ಪ ನೀನೂ ಇಲ್ಲಂದ್ರ ಯಾರು ದಿಕ್ಕು....’

ತಾಯಿ ಜೊತೆಗಿಲ್ಲದ ಮಕ್ಕಳಿಗೆ ತಂದೆಯ ಸಾವಿನ ಅಘಾತ

​ಪ್ರಜಾವಾಣಿ ವಾರ್ತೆ
Published 18 ಮೇ 2025, 6:28 IST
Last Updated 18 ಮೇ 2025, 6:28 IST
ಆಶಪ್ಪ
ಆಶಪ್ಪ   

ವಾಡಿ: ‘ಅವ್ವ ಇಲ್ಲ, ಅಪ್ಪ.. ಈಗ ನೀನೂ ಇಲ್ಲಂದ್ರ ಹ್ಯಾಂಗ.. ನಮಗ ಯಾರು ದಿಕ್ಕು.. ಅಪ್ಪ ಕಣ್ಣು ತೆಗಿಯಪ್ಪ.. ಎಂದು ಮೃತ ಕಾರ್ಮಿಕ ಆಶಪ್ಪ ಅವರ ಮಕ್ಕಳ ರೋದನ ಮುಗಿಲು ಮುಟ್ಟಿತ್ತು. ಮಕ್ಕಳು, ಮೃತ ತಂದೆಯ ಪಕ್ಕದಲ್ಲಿ ಕುಳಿತು ಎದೆ ಬಡಿದುಕೊಂಡು ರೋದಸುತ್ತಿರುವ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣಾಲೆಗಳಲ್ಲಿ ನೀರು ಹರಿಸಿತ್ತು.

ವಿದ್ಯುತ್‌ ತಗುಲಿ ಮೃತಪಟ್ಟಿದ್ದ ಅಂಗವಿಕಲ ಕೂಲಿ ಕಾರ್ಮಿಕ ಆಶಪ್ಪ ಮುಸಲಾ ಅವರ ಮನೆಯ ಎದುರು ಕಂಡು ಬಂದ ದೃಶ್ಯ ಇದು.

ತಂದೆಯ ಸಾವಿನಿಂದಾಗಿ ಭಾಗ್ಯಶ್ರೀ (10), ದೇವಮ್ಮ(8) ಹಾಗೂ ಸಾಬಣ್ಣ(6) ಅನಾಥರಾದ ಮಕ್ಕಳು. ಗಾಳಿ–ಮಳೆಗೆ ಶೆಡ್‌ನ ಪತ್ರಾಸ್‌ಗಳು ಹಾರಿಹೋಗದೆ ಭದ್ರವಾಗಿರಲಿ ಎಂದು ಬಿಗಿದಿದ್ದ ತಂತಿಯೇ ಕೂಲಿಕಾರ್ಮಿಕನ ಜೀವಕ್ಕೆ ಮಾರಕವಾಗಿದೆ.

ADVERTISEMENT

ಆಗಿದ್ದೇನು: ಲಾಡ್ಲಾಪುರ ಬಸ್ ನಿಲ್ದಾಣ ಪ್ರದೇಶದಲ್ಲಿ ವಾಸವಾಗಿರುವ ಆಶಪ್ಪ ಅವರಿಗೆ ಹಾಸು ಹೊದ್ಡಿರುವ ಬಡತನ. ಹೀಗಾಗಿ ಇರುವ ಚಿಕ್ಕಜಾಗದಲ್ಲಿಯೇ ಪತ್ರಾಸ್‌ ಶೆಡ್‌ ಹಾಕಿಕೊಂಡು ಮೂವರು ಮಕ್ಕಳೊಂದಿಗೆ ವಾಸವಾಗಿದ್ದರು. ಅವರು, ರಾತ್ರಿ 9ಕ್ಕೆ ಮಕ್ಕಳಿಗೆ ಸ್ವತಃ ಅಡುಗೆ ತಯಾರಿಸಿ, ಊಟ ಮಾಡಿಸಿದ್ದರು. ಬಳಿಕ ಮಕ್ಕಳಿಗೆ ಶೌಚ ಮಾಡಿಸಿಕೊಂಡು ಮರಳುತ್ತಿದ್ದರು. ಅಂಗವಿಕಲರಾಗಿದ್ದರಿಂದ ಅವರು, ಮನೆಯ ಗೋಡೆ ಹಿಡಿದುಕೊಂಡು ಬರುವಾಗ ವಿದ್ಯುತ್‌ ತಂತಿ ತಗುಲಿದೆ. ನಂತರ ಜೋರಾಗಿ ದೂರ ತಳ್ಳಿದ ಪರಿಣಾಮ ಕಲ್ಲಿನ ಮೇಲೆ ಬಿದ್ದು ತಲೆಗೆ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈಗ ಅವರನ್ನೇ ನಂಬಿದ್ದ ಕುಟುಂಬ ಬೀದಿಗೆ ಬಿದ್ದಿದೆ. ತಾಯಿ ಇಲ್ಲದ ಕಾರಣ ತಂದೆಯ ಆಶ್ರಯದಲ್ಲಿದ್ದ ಮೂವರು ಮಕ್ಕಳು, ಈಗ ತಂದೆಯ ಸಾವಿನಿಂದ ದಿಕ್ಕು ತೋಚದಂತಾಗಿದ್ದಾರೆ.

ಪರಿಹಾರಕ್ಕೆ ಒತ್ತಾಯ: ವಿದ್ಯುತ್ ಸ್ಪರ್ಶದಿಂದಾಗಿ ಮೃತಪಟ್ಟ ಅಂಗವಿಕಲ ಆಶಪ್ಪ, ಕೂಲಿ ಕೆಲಸ ಮಾಡಿ ಕುಟುಂಬಕ್ಕೆ ಆಸರೆಯಾಗಿದ್ದರು. ಅವರ ಸಾವಿನಿಂದಾಗಿ ಮೂವರು ಪುಟ್ಟ ಮಕ್ಕಳು ಬೀದಿಗೆ ಬಂದಿದ್ದಾರೆ. ಅವರಿಗೆ ಇರಲು ಮನೆ ಇಲ್ಲ. ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿದ್ಯುತ್‌ ಸ್ಪರ್ಶ; ಕೂಲಿ ಕಾರ್ಮಿಕ ಸಾವು

ವಾಡಿ: ವಿದ್ಯುತ್‌ ತಂತಿ ತಗುಲಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಆಶಪ್ಪ ಮುಸಲಾ ಮೃತಪಟ್ಟ ಕಾರ್ಮಿಕ. ಮೃತರಿಗೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ. ಘಟನಾ ಸ್ಥಳಕ್ಕೆ ವಾಡಿ ಪಿಎಸ್ಐ ತಿರುಮಲೇಶ ಕೆ. ಹಾಗೂ ಜೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶನಿವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಧ್ಯಾಹ್ನ 3 ಗಂಟೆಗೆ ಅಂತ್ಯಸಂಸ್ಕಾರ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.