ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳಲ್ಲಿ ತಗ್ಗು ಗುಂಡಿಗಳದ್ದೇ ದರ್ಬಾರು. ಸಾಲು ಸಾಲು ಗುಂಡಿಗಳು ವಾಹನ ಸವಾರರಿಗೆ ಮೃತ್ಯುಕೂಪಗಳಂತೆ ಆಗಿವೆ.
2023–24ನೇ ಸಾಲಿನಲ್ಲಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆ (ಸಿಎಂಜಿಎಸ್‌ವೈ) ಅಡಿ ಕೋಟ್ಯಂತರ ರೂಪಾಯಿ ಅನುದಾನ ರಸ್ತೆಗಳಿಗೆ ಸುರಿದರೂ ‘ಗುಂಡಿ’ಗಳಿಗೆ ಮುಕ್ತಿ ಸಿಕ್ಕಿಲ್ಲ. ಕೆಲವು ಗ್ರಾಮಗಳ ರಸ್ತೆಗಳ ಗುಂಡಿಗಳಿಗೆ ತಾತ್ಕಾಲಿಕವಾಗಿ ಮುರಂ ಹಾಗೂ ಜಲ್ಲಿ ಕಲ್ಲುಗಳನ್ನು ಹಾಕಲಾಗಿದೆ. ಭಾರವಾದ ವಾಹನಗಳ ಓಡಾಟದಿಂದಾಗಿ ಕಲ್ಲುಗಳು ಮೇಲೆದ್ದು ದೂಳು ಹಬ್ಬುತ್ತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2023–24ನೇ ಸಾಲಿನಲ್ಲಿ ಸಿಎಂಜಿಎಸ್‌ವೈ ಅಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಅಗತ್ಯ ಅಭಿವೃದ್ಧಿ ಮತ್ತು ದುರಸ್ತಿಗಾಗಿ ರಸ್ತೆಗಳ ಉದ್ದಕ್ಕೆ ಅನ್ವಯವಾಗಿ ಸಾಮಾನ್ಯ ಅನುದಾನ ಹಾಗೂ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ ಸೇರಿ ₹ 10.76 ಕೋಟಿ ನೀಡಲಾಗಿದೆ. ಆದರೂ ರಸ್ತೆ ಮೇಲಿನ ಗುಂಡಿಗಳು ಕೆಸರು, ನೀರಿನಿಂದ ಮುಚ್ಚಿಕೊಂಡು ಸವಾರರ ಬಲಿಗಾಗಿ ಕಾಯುತ್ತಿವೆ.
ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರವಾದ ದಂಡೋತಿ, ಇವಣಿ, ಮಲಕೂಡ, ಭಾಗೋಡಿ, ಗುಂಡಗುರ್ತಿ, ಬೆಳಗುಂಪಾ, ಮರಗೋಳ ಕ್ರಾಸ್–ತೆಂಗಳಿ ಕ್ರಾಸ್, ಮುಡಬೂಳ–ಭಾಗೋಡಿ, ಚಿತ್ತಾಪುರ–ಯರಗಲ್, ವಾಡಿ– ಇಂಗಳಗಿ, ವಾಡಿ–ಕೊಂಚೂರು, ಸಂಕನೂರು– ನಾಲವಾರ (ರೈಲ್ವೆ ಕೆಳಸೇತುವೆ), ಲಾಡ್ಲಾಪುರ–ಹಳ್ಳೊಳ್ಳಿ ಸೇರಿದಂತೆ ಹಲವು ಗ್ರಾಮಗಳ ರಸ್ತೆ ನಿರ್ವಹಣೆಯಿಲ್ಲದೆ ಹಾಳಾಗಿ, ಸಂಚಾರಕ್ಕೆ ಸಂಚಕಾರ ತರುತ್ತಿವೆ.
ಚಿಂಚೋಳಿ ತಾಲ್ಲೂಕಿನ ಕುಂಚಾವರಂ, ಧರ್ಮಾಸಾಗರ, ಕೊಳ್ಳೂರು ಕ್ರಾಸ್, ಪಟಪಳ್ಳಿ, ಯಂಪಳ್ಳಿ, ಸಾಲೇಬೀರನಹಳ್ಳಿ, ಚಿಮ್ಮನಚೋಡ, ತುಮಕುಂಟಾ, ಗಡಿಕೇಶ್ವಾರ, ಕೊರಡಂಪಳ್ಳಿ, ಅಫಜಲಪುರ ತಾಲ್ಲೂಕಿನ ಬಳೂರ್ಗಿ, ಬಡದಾಳ, ಹಳಿಯಾಳ, ಘತ್ತರಗಾ, ನಂದರಗಿ, ಭೈರಾಮಡಗಿ, ರೇವೂರು, ಅಂಕಲಗಾ, ಸಿದ್ಧನೂರು, ದಿಕ್ಸಂಗ, ತೆಲ್ಲೋಣಗಿ, ಯಡ್ರಾಮಿಯ ಮಳ್ಳಿ, ನಾಗರಹಳ್ಳಿ, ಶಿವಪುರ, ಬಳಬಟ್ಟಿ, ವಡಗೇರಾ ಗ್ರಾಮಗಳ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿವೆ ಎನ್ನುತ್ತಾರೆ ಸ್ಥಳೀಯರು.
ರಸ್ತೆಗಳಲ್ಲಿ ಸಣ್ಣ ವಾಹನಗಳು ಸಂಚರಿಸಿದರೆ ಸಾಕು, ಭಾರಿ ಪ್ರಮಾಣ ದೂಳು ಹರಡುತ್ತದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಅಸ್ತಮಾ, ದೂಳಿನ ಅಲರ್ಜಿ ಇರುವವರ ಸ್ಥಿತಿ ಶೋಚನೀಯವಾಗಿದೆ. ರಸ್ತೆಯ ತಗ್ಗುಗಳಿಗೆ ಹಾಕಿರುವ ಕಲ್ಲು, ಮಣ್ಣು ವಾಹನಗಳ ವೇಗಕ್ಕೆ ಸಿಡಿಯುತ್ತವೆ ಎನ್ನುತ್ತಾರೆ ಕುಂಬಾರಹಳ್ಳಿ ನಿವಾಸಿ ಆರ್. ರಾಜು.
ವಾಡಿ–ಇಂಗಳಗಿ ರಸ್ತೆ 40 ವರ್ಷಗಳಿಂದ ನಿರ್ವಹಣೆ ದುರಸ್ತಿಯಾಗದೆ ಸಂಪೂರ್ಣವಾಗಿ ಹದಗೆಟ್ಟಿದ್ದು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಿದೆ- ಶಾಂತಕುಮಾರ ಇಂಗಳಗಿ ನಿವಾಸಿ
ಚಿತ್ತಾಪುರದಿಂದ 6 ಕಿ.ಮೀ. ದೂರ ಇಟಗಾ ಗ್ರಾಮದ ರಸ್ತೆ ಹದಗೆಟ್ಟು ಹತ್ತು ವರ್ಷಗಳು ಕಳೆದರೂ ಸಿಮೆಂಟ್ ಕಾರ್ಖಾನೆಯಾಗಲಿ ಸ್ಥಳೀಯ ಆಡಳಿತವಾಗಿಲಿ ರಸ್ತೆ ದುರಸ್ತಿಗೆ ಗಮನಹರಿಸಿಲ್ಲ- ತಮ್ಮಣ್ಣ ಡಿಗ್ಗಿ ಗ್ರಾಮ ಪಂಚಾಯಿತಿ ಸದಸ್ಯ ಇಟಗಾ
2023–24ನೇ ಸಾಲಿನಲ್ಲಿ ಸಿಎಂಜಿಎಸ್‌ವೈ ಅಡಿ ಹಂಚಿಕೆಯಾದ ಅನುದಾನ (₹ ಲಕ್ಷಗಳಲ್ಲಿ) ತಾಲ್ಲೂಕು;ಡಾಂಬರ್ ರಸ್ತೆ;ಜಲ್ಲಿ ರಸ್ತೆ;ಮಣ್ಣಿನ ರಸ್ತೆ;ಒಟ್ಟು ಕಿ.ಮೀ;ಅನುದಾನ ಅಫಜಲಪುರ;374;333;522;1230;61.20 ಆಳಂದ;486;219;643;1349;67 ಚಿಂಚೋಳಿ;332;162;694;1190;59.22 ಚಿತ್ತಾಪುರ;207;119;267;594;29.59 ಜೇವರ್ಗಿ;196;102;371;670;33.40 ಕಲಬುರಗಿ;151;56;231;439;21.88 ಕಾಳಗಿ;162;88;257;507;25.30 ಕಮಲಾಪುರ;354;131;539;1025;51.06 ಸೇಡಂ;158;119;477;756;37.65 ಶಹಾಬಾದ್;48;27;62;139;6.94 ಯಡ್ರಾಮಿ;133;69;252;456;22.71 ಒಟ್ಟು;2605;1431;4321;8358;4.16 (₹ ಕೋಟಿ) ಆಧಾರ; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಎಸ್‌ಸಿಪಿ ಮತ್ತು ಟಿಎಸ್‌ಪಿ ಅಡಿ ಹಂಚಿಕೆಯಾದ ಅನುದಾನ ತಾಲ್ಲೂಕು;ಎಸ್‌ಸಿಪಿ;ಟಿಎಸ್‌ಪಿ;ಒಟ್ಟು(₹ ಲಕ್ಷಗಳಲ್ಲಿ) ಕಲಬುರಗಿ ಗ್ರಾಮೀಣ;25;35;60 ಚಿಂಚೋಳಿ;50;–;50 ಚಿತ್ತಾಪುರ;125;–;125 ಕಲಬುರಗಿ ದಕ್ಷಿಣ;75;15;90 ಸೇಡಂ;75;15;90 ಆಳಂದ;75;–;75 ಜೇವರ್ಗಿ;75;20;95 ಅಫಜಲಪುರ;75;–;75 ಒಟ್ಟು;5.75;0.85;6.60 (₹ ಕೋಟಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.