ADVERTISEMENT

ಟ್ಯಾಂಕರ್‌ ಮಾಲೀಕರಿಂದ ನೀರಿನ ಸಮಸ್ಯೆ: ಜಿಲ್ಲಾಧಿಕಾರಿ

ಸಮಸ್ಯೆ ಪರಿಹಾರಕ್ಕೆ ಗ್ರಾ.ಪಂ ಅಧ್ಯಕ್ಷರಿಗೆ ಮೊರೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 14:29 IST
Last Updated 12 ಏಪ್ರಿಲ್ 2019, 14:29 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಕಲಬುರ್ಗಿ: ‘ಭೀಕರ ಬರದ ಕಾರಣ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆ ಹೆಚ್ಚುತ್ತಿದೆ. ನೀರಿನ ಟ್ಯಾಂಕರ್‌ ಹೊಂದಿರುವ ಮಾಲೀಕರು ಲಾಬಿ ನಡೆಸಿ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉಲ್ಬಣಗೊಳಿಸುತ್ತಿರುವ ದೂರು ಕೇಳಿಬರುತ್ತಿವೆ’ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಹೇಳಿದರು.

‘ಆಯಾ ತಾಲ್ಲೂಕುಗಳ ತಹಶೀಲ್ದಾರರು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೂಲಕ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು’ ಎಂದು ಅವರು ಇಲ್ಲಿ ನಡೆದ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚಿಸಿದರು.

‘ಸಮಸ್ಯಾತ್ಮಕ ಹಾಗೂ ಈಗಾಗಲೇ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸುತ್ತಿರುವ ಗ್ರಾಮಗಳಿಗೆ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಎಂಜಿನಿಯರ್‌ಗಳು ಹಾಗೂ ಪಿಡಿಒ ತೆರಳಿ ಜಂಟಿಯಾಗಿ ಪರಿಶೀಲನೆ ನಡೆಸಬೇಕು’ ಎಂದರು.

ADVERTISEMENT

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಹಾಗೂ ಮುಂದೆ ಸಮಸ್ಯೆ ಉಲ್ಬಣಗೊಳ್ಳಬಹುದಾದ ಗ್ರಾಮಗಳಲ್ಲಿ ಲಭ್ಯವಿರುವ ಕೊಳವೆಬಾವಿಗಳ ಮಾಹಿತಿ ಪಡೆಯಬೇಕು. ಫ್ಲಶಿಂಗ್ ಮಾಡಿದರೆ ನೀರು ಲಭ್ಯವಾಗುವಂಥ ಕೊಳವೆಬಾವಿಗಳ ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕು. ಗ್ರಾಮದ ಸಮೀಪದಲ್ಲಿರುವ ಖಾಸಗಿ ಕೊಳವೆಬಾವಿ ಅಥವಾ ತೆರೆದಬಾವಿಗಳ ಮಾಹಿತಿ ಸಂಗ್ರಹಿಸಬೇಕು. ಭೂವಿಜ್ಞಾನಿಗಳಿಂದ ನೀರು ಲಭ್ಯತೆಯ ವರದಿ ಪಡೆದು ಹೊಸ ಕೊಳವೆಬಾವಿಗಳನ್ನು ಕೊರೆಯಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

‘ಜಮೀನನ್ನು ಸರ್ಕಾರದ ಯೋಜನೆಗೆ ಹಸ್ತಾಂತರ ಮಾಡಿಕೊಳ್ಳದೇ ಖಾಸಗಿ ಜಮೀನುಗಳಲ್ಲಿ ಸರ್ಕಾರದ ಹಣದಲ್ಲಿ ತೆರೆದಬಾವಿ ಮತ್ತು ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಇದು ಕಾನೂನು ವಿರೋಧಿ ಕೆಲಸ. ಸಂಬಂಧಿಸಿದ ಸಹಾಯಕ ಎಂಜಿನಿಯರ್‌ಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳಿಗೆ ನೋಟಿಸ್‌ ನೀಡಬೇಕು’ ಎಂದು ಅವರು ಆದೇಶಿಸಿದರು.

‘ಸರ್ಕಾರಿ ವೆಚ್ಚದಲ್ಲಿ ಖಾಸಗಿ ಜಮೀನಿನಲ್ಲಿ ಕುಡಿಯುವ ನೀರಿಗಾಗಿ ಕೊರೆದ ಕೊಳವೆಬಾವಿ ಅಥವಾ ತೆರೆದಬಾವಿಯಿಂದ ನೀರು ಕೊಡಲು ಖಾಸಗಿ ವ್ಯಕ್ತಿಗಳು ಒಪ್ಪದಿದ್ದರೆ ಅಥವಾ ಅಡ್ಡಿಪಡಿಸಿದರೆ ಆ ಬಾವಿಯನ್ನು ಸರ್ಕಾರದ ವಶಕ್ಕೆ ಪಡೆಯಲು ಕ್ರಮ ಜರುಗಿಸಬೇಕು. ಈ ಕುರಿತು ತಹಶೀಲ್ದಾರರು ನೋಟಿಸ್‌ ಜಾರಿಗೊಳಿಸಬೇಕು’ ಎಂದರು.

‘ಈಗಾಗಲೇ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಜಿಪಿಎಸ್ ವರದಿಯ ಆಧಾರದ ಮೇಲೆ ನೀರು ಸರಬರಾಜಿಗೆ ಮೊತ್ತ ಪಾವತಿಸಬೇಕು. ತಹಶೀಲ್ದಾರ ಕಚೇರಿಯಿಂದ ಎಲ್ಲ ವಾಹನಗಳ ಜಿಪಿಎಸ್ ಮಾಹಿತಿಯನ್ನು ಪ್ರತಿದಿನ ಪರಿಶೀಲಿಸಬೇಕು. ಜಿಪಿಎಸ್ ಮಾಹಿತಿಯನ್ವಯ ಕುಡಿಯುವ ನೀರಿನ ಮೂಲಗಳು ಗ್ರಾಮದ ಸಮೀಪದಲ್ಲಿದ್ದರೆ ತಾತ್ಕಾಲಿಕವಾಗಿ ಪೈಪ್‌ಲೈನ್ ಅಳವಡಿಸುವ ಮೂಲಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಬೇಕು. ಟ್ಯಾಂಕರ್‌ ಮೂಲಕ ಕುಡಿಯವ ನೀರು ಪೂರೈಸುವುದು ತಾತ್ಕಾಲಿಕ ವ್ಯವಸ್ಥೆಯೆ ಹೊರತು ಶಾಶ್ವತ ಪರಿಹಾರವಲ್ಲ ಎಂಬುದನ್ನು ಅಧಿಕಾರಿಗಳು ಮನಗಾಣಬೇಕು’ ಎಂದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ.ಪಿ., ಉಪ ವಿಭಾಗಾಧಿಕಾರಿ ರಾಹುಲ ತುಕಾರಾಮ ಪಾಂಡ್ವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.