ADVERTISEMENT

ಕಾಳಗಿ | ಪ್ರಜಾಸೌಧ ಕಟ್ಟಡ ಕಾಮಗಾರಿ ಸ್ಥಗಿತ ಯಾಕೆ?

ಶಾಸಕ ಡಾ.ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 5:17 IST
Last Updated 6 ಡಿಸೆಂಬರ್ 2025, 5:17 IST
ಕಾಳಗಿಯಲ್ಲಿ ಶುಕ್ರವಾರ ಶಾಸಕ ಡಾ.ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಜರುಗಿತು
ಕಾಳಗಿಯಲ್ಲಿ ಶುಕ್ರವಾರ ಶಾಸಕ ಡಾ.ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಜರುಗಿತು    

ಕಾಳಗಿ: ತಾಲ್ಲೂಕು ಆಡಳಿತ ಮುಖ್ಯಕಚೇರಿಯ ಪ್ರಜಾಸೌಧ ಕಟ್ಟಡ ಕಾಮಗಾರಿ ಇದ್ದಕ್ಕಿದ್ದಂತೆ ಯಾಕೆ ಸ್ಥಗಿತಗೊಂಡಿದೆ. ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ನಾನೇನು ಅಡ್ಡ ಬಂದಿದ್ದೇನೆಯೆ? ಅಭಿವೃದ್ಧಿ ಬೇಕಿಲ್ಲೊ? ಎಂದು ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಅವರು ವಿರೋಧ ಪಕ್ಷದವರಿಗೆ ಪರೋಕ್ಷವಾಗಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಶುಕ್ರವಾರ ಪಟ್ಟಣದಲ್ಲಿ ತಾಲ್ಲೂಕು ಪಂಚಾಯಿತಿ ಆಯೋಜಿಸಿದ ತ್ರೈಮಾಸಿಕ ಕೆಡಿಪಿ ಸಭೆ ಮತ್ತು 2026-27ನೇ ಸಾಲಿನ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ನನಗೆ ಗೊತ್ತು ಮಾಡದೆ ಕಟ್ಟಡ ಆರಂಭಿಸಿದರೂ ಮಕ್ಕಳಿಗೆ ಹಾಸ್ಟೆಲ್ ಬೇಕಾಗುತ್ತೆ ಅಂತ ಸುಮ್ನೆ ಇದ್ದಿರುವೆ. ಹನ್ನೊಂದು ತಿಂಗಳಲ್ಲೇ ಪೂರ್ಣಗೊಳ್ಳಬೇಕಾದ ಪ್ರಜಾಸೌಧ ಕಟ್ಟಡ ಕಾಮಗಾರಿ ಇದ್ದಕ್ಕಿದ್ದಂತೆ ಯಾಕೆ ನಿಲ್ಲಿಸಿದಿರಿ? ಡಿಸಿಗೆ ಕೇಳಿದರೆ ತಹಶೀಲ್ದಾರ್ ಹೆಸರು ಹೇಳ್ತಾರೆ, ನೀವು ಅವರ ಹೆಸರು ಹೇಳ್ತಿರಿ? ನಾನಿದ್ದು ಏನು ಪ್ರಯೋಜನ? ಎಂದು ಅವರು ತಹಶೀಲ್ದಾರ್‌ಗೆ ಪ್ರಶ್ನಿಸಿದರು.

ADVERTISEMENT

‘ಕೂಡಲೇ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಪಂಚಾಯಿತಿ ಕಚೇರಿ ಜಾಗದ ಸಮಸ್ಯೆ ಬಗೆಹರಿಸಬೇಕು. ಶೆಳ್ಳಗಿ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಚಾಲನೆ ಕೊಡಬೇಕು. ಗೋಟೂರ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕು. ವಿವಿಧೆಡೆ ಬಸ್ಸಿನ ಸೌಕರ್ಯ ಕಲ್ಪಿಸಬೇಕು. ಇನ್ನು ಬರಬೇಕಾದ ಬೆಳೆ ಪರಿಹಾರ, ಮೃತ ರೈತರ ಪರಿಹಾರ, ಪಿಂಚಣಿ ಫಲಾನುಭವಿಗಳಿಗೆ ಒದಗಿಸಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ ಮಾತನಾಡಿ ‘ನರೇಗಾ, ವಸತಿ ಯೋಜನೆ ಕುರಿತು ವಿವರಿಸಿದರು. ಮುಂದಿನ ಸಭೆಯ ಒಂದುವಾರದ ಮುಂಚೆ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿಯ ಸಂಪೂರ್ಣ ಮಾಹಿತಿ ಸಲ್ಲಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಂಕಜಾ ಎ, ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಜಗದೇವಪ್ಪ ಪಾಳಾ ವೇದಿಕೆಯಲ್ಲಿದ್ದರು.

ಕೃಷಿ ಸಹಾಯಕ ನಿರ್ದೇಶಕರಾದ ಸಂಜುಕುಮಾರ ಮಾನಕರ, ವೀರಶೆಟ್ಟಿ ಚವಾಣ, ಬಿಇಒ ಶಶಿಧರ ಬಿರಾದಾರ, ವಿ.ಲಕ್ಷ್ಮಯ್ಯ, ಡಾ.ಅಮರೇಶ ಎಮ್.ಎಚ್, ಜೆಸ್ಕಾಂ ಎಇಇ ಮಹ್ಮದ ಇಲಿಯಾಸ್, ಡಾ.ರೇವಣಸಿದ್ದ ಕಮಲಾಪುರ, ಎಇ ಉಮೇಶ ರಾಠೋಡ, ಬಸ್ ಘಟಕದ ವ್ಯವಸ್ಥಾಪಕ ಯಶವಂತ ಯಾತನೂರ ಮತ್ತಿತರ ಅಧಿಕಾರಿಗಳು ಇಲಾಖೆ ವರದಿ ನೀಡಿದರು.

ಸಮಸ್ಯೆಗಳ ಸುರಿಮಳೆಗೈದ ಜನ ಕೆಡಿಪಿ ಸಭೆ ಮುಗಿಯುತ್ತಿದ್ದಂತೆ ಸಭಾಂಗಣಕ್ಕೆ ನುಗ್ಗಿದ ಅನೇಕ ಜನರು ‘ಚಿಕ್ಕಂಡಿ ನಾಮುನಾಯಕ ತಾಂಡಕ್ಕೆ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ಸರ್ಕಾರಿ ಬಸ್ಸು ಬರುತ್ತಿಲ್ಲ. ಖಾಸಗಿ ನಿವೇಶನದಲ್ಲಿ ಸಾರ್ವಜನಿಕ ವಿದ್ಯುತ್ ಕಂಬ ಹಾಕಿದ್ದಾರೆ. ಕಾಳಗಿ ಪಟ್ಟಣದ ಎಲ್ಲೆಂದರಲ್ಲಿ ಪೈಪ್ ಲೈನ್ ನೆಪದಲ್ಲಿ ರಸ್ತೆ ಅಗೆದು ಹಾಕಲಾಗಿದೆ. ಮುಖ್ಯರಸ್ತೆ ಮೇಲೆ ಬೈಕ್ ಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಬೆಡಸೂರ ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿ ಪಠ್ಯಪುಸ್ತಕ ಕೊರತೆ ಎದ್ದುಕಾಣುತ್ತಿದೆ. ಹಳ್ಳಿಗಳಲ್ಲಿ ಜಲಜೀವನ ಮಿಷನ್ ಯೋಜನೆ ಹಳ್ಳ ಹಿಡಿದಿದೆ. ರೈತರಿಗೆ ಸರಿಯಾಗಿ ಬೆಳೆಪರಿಹಾರ ಬಂದಿಲ್ಲ’ ಎಂದು ದೂರಿ ಕ್ರಮಕ್ಕೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.