ADVERTISEMENT

‘ಕಲ್ಯಾಣ’ದ ಸರ್ವಾಂಗೀಣ ಅಭಿವೃದ್ಧಿ: ಸಿದ್ದರಾಮಯ್ಯ

ಪ್ರತ್ಯಕ ಸಚಿವಾಲಯಕ್ಕೆ ವಾರದಲ್ಲೇ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 19:42 IST
Last Updated 17 ಸೆಪ್ಟೆಂಬರ್ 2025, 19:42 IST
<div class="paragraphs"><p>ಕಲ್ಯಾಣ ಕರ್ನಾಟಕ ‌ಉತ್ಸವದ ಅಂಗವಾಗಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನೆಯ ರೂವಾರಿ ಸರ್ದಾರ್ ‌ವಲ್ಲಭಭಾಯಿ‌ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. </p></div>

ಕಲ್ಯಾಣ ಕರ್ನಾಟಕ ‌ಉತ್ಸವದ ಅಂಗವಾಗಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನೆಯ ರೂವಾರಿ ಸರ್ದಾರ್ ‌ವಲ್ಲಭಭಾಯಿ‌ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

   

ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯ ಸ್ಥಾಪಿಸುವ ಕುರಿತು ವಾರದೊಳಗೆ ಹುದ್ದೆಗಳ ಸಹಿತ ಅಧಿಸೂಚನೆ ಹೊರಡಿಸಲಾಗುವುದು ಎಂದು ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಕಲ್ಯಾಣ’ ಭಾಗದ ಪ್ರಗತಿಯ ಮಂತ್ರವನ್ನು ಜಪಿಸಿದರು.

ADVERTISEMENT

ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ‘ಕಲ್ಯಾಣ ಕರ್ನಾಟಕ ಉತ್ಸವ’ದಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯಾಗದ ಹೊರತು ಸಂಪೂರ್ಣ ರಾಜ್ಯದ ಅಭಿವೃದ್ಧಿ ಅಸಾಧ್ಯ’ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿ, ‘ಈ ಭಾಗದ ಜನರ ತಲಾ ಆದಾಯ ಹೆಚ್ಚಿಸುವುದರ ಜೊತೆಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲಸೌಕರ್ಯ ಸುಧಾರಣೆ ಸೇರಿ ಸರ್ವಾಂಗೀಣ ಅಭಿವೃದ್ಧಿಯೇ ಸರ್ಕಾರದ ಗುರಿ’ ಎಂಬ ಇಂಗಿತವನ್ನು ವ್ಯಕ್ತಪಡಿಸಿದರು.

‘ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವ ಮೂಲಕ 15 ಲಕ್ಷ ಎಕರೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ₹70 ಸಾವಿರ ಕೋಟಿ ಅನುದಾನ ವಿನಿಯೋಗಿಸಲಾಗುವುದು. ಇದರಿಂದ ರಾಯಚೂರು, ಯಾದಗಿರಿ, ಕೊಪ್ಪಳ, ಕಲಬುರಗಿ ಜಿಲ್ಲೆಗಳ ಒಣಭೂಮಿಗಳಿಗೂ ನೀರಾವರಿ ಸೌಲಭ್ಯ ಸಿಗಲಿದೆ’ ಎಂದು ತಿಳಿಸಿದರು.

‘ಕಲಬುರಗಿಯಲ್ಲಿ ಕಳೆದ ವರ್ಷ ನಡೆದ ಸಚಿವ ಸಂಪುಟದ ಸಭೆಯಲ್ಲಿ ₹11,770 ಕೋಟಿ ಮೊತ್ತದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು. ಅವುಗಳ ಪೈಕಿ ಬಹುತೇಕ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. 2013ರಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಇದುವರೆಗೆ ಒಟ್ಟು ₹24,780 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ₹14,000 ಕೋಟಿ ವೆಚ್ಚ ಮಾಡಲಾಗಿದೆ. ರಸ್ತೆ ಮತ್ತು ಸಂಪರ್ಕ ವ್ಯವಸ್ಥೆಗೆ ಶೇ 50ರಷ್ಟು, ಆರೋಗ್ಯ ಮತ್ತು ಶಿಕ್ಷಣ ವಲಯಕ್ಕೆ ಶೇ 39ರಷ್ಟು ಹಣ ವಿನಿಯೋಗಿಸಲಾಗಿದೆ’ ಎಂದು ವರದಿ ಒಪ್ಪಿಸಿದರು. 

‘ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ ‘371 ಜೆ’ ಕಲಂನಡಿ ವಿಶೇಷ ಸ್ಥಾನಮಾನ ನೀಡಿದ ಬಳಿಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ 1,19,923 ಹುದ್ದೆಗಳನ್ನು ನೇರ ನೇಮಕಾತಿಗೆ ಗುರುತಿಸಲಾಗಿದ್ದು, 84,620 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಒಳಮೀಸಲಾತಿ ವಿಚಾರ ಬಗೆಹರಿದಿರುವುದರಿಂದ ಖಾಲಿ ಇರುವ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡುತ್ತೇವೆ. ಕಲ್ಯಾಣದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆ ಭರ್ತಿಗೂ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಬುಧವಾರ ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಕಲಾವಿದರು ನೃತ್ಯ ಪ್ರದರ್ಶನ ಮಾಡಿದರು  ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

‘ಅಕ್ಷರ ಆವಿಷ್ಕಾರ’, ‘ಆರೋಗ್ಯ ಆವಿಷ್ಕಾರ’, ‘ಉದ್ಯೋಗ ಆವಿಷ್ಕಾರ’, ‘ಕಲ್ಯಾಣ ಪಥ’ದಂತಹ ಯೋಜನೆಗಳಿಗೆ ವೆಚ್ಚ ಮಾಡಿದ ಅನುದಾನದ ಲೆಕ್ಕವೊಪ್ಪಿಸಿದ ಸಿದ್ದರಾಮಯ್ಯ ಅವರು, ತಮ್ಮ ಸರ್ಕಾರ ಕಲ್ಯಾಣದಲ್ಲಿ ‘ಪ್ರಗತಿಯ ಹೊಳೆ’ಯನ್ನೇ ಹರಿಸುತ್ತಿದೆ ಎಂದು ಪ್ರತಿಪಾದಿಸಿದರು. 

ಸಚಿವರಾದ ಪ್ರಿಯಾಂಕ್‌ ಖರ್ಗೆ, ಬೈರತಿ ಸುರೇಶ್‌, ಡಿ.ಸುಧಾಕರ್‌, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್‌ ಪಾಲ್ಗೊಂಡಿದ್ದರು.

‘ಏಮ್ಸ್‌: ಕೇಂದ್ರದಿಂದ ಅಸಹಕಾರ’

‘ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ (ಏಮ್ಸ್‌) ಸ್ಥಾಪಿಸಲು ಅಗತ್ಯವಿರುವ ಎಲ್ಲಾ ನೆರವು ನೀಡಲು ನಮ್ಮ ಸರ್ಕಾರ ಸಿದ್ಧವಿದೆ. ಈ ಬಗ್ಗೆ ಕೇಂದ್ರಕ್ಕೆ ಹಲವು ಪತ್ರಗಳನ್ನೂ ಬರೆದಿದ್ದೇವೆ. ಕೇಂದ್ರ ಸಚಿವರನ್ನೂ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಹೀಗಿದ್ದರೂ ಕೇಂದ್ರ ಸರ್ಕಾರ ಕಿಂಚಿತ್ತೂ ಸಹಕಾರ ನೀಡುತ್ತಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ ‘ಏಮ್ಸ್‌ ಪ್ರಾರಂಭಿಸಲು ಕೇಂದ್ರ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಬುಧವಾರ ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಪಡೆಯಿಂದ ಗೌರವ ವಂದನೆ ಸ್ವೀಕರಿಸಿದರು  ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.