ADVERTISEMENT

ಕಲಬುರಗಿ | ‘ಪ್ರಸಕ್ತ ವರ್ಷ ಪೂರ್ತಿ ಹಣ ಖರ್ಚು ಮಾಡಲು ಪ್ರಯತ್ನ’

ಕೆಕೆಆರ್‌ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ. ಅಜಯಸಿಂಗ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 5:12 IST
Last Updated 30 ಜುಲೈ 2025, 5:12 IST
ಅಜಯಸಿಂಗ್‌
ಅಜಯಸಿಂಗ್‌   

ಕಲಬುರಗಿ: ‘ಮಂಡಳಿ ಅನುದಾನ ಖರ್ಚು ಮಾಡಲು ಈ ಬಾರಿ ರಾಜ್ಯಪಾಲರಿಂದ ಬೇಗ ಅನುಮೋದನೆ ಸಿಕ್ಕಿದೆ. ಶಾಸಕರು ಬರುವ ಆಗಸ್ಟ್ 15ರೊಳಗೆ ಜಿಲ್ಲಾಧಿಕಾರಿ ಮೂಲಕ ಪ್ರಸ್ತಾವ ಸಲ್ಲಿಸಬೇಕು. ಸರ್ಕಾರ ನಿಗದಿ ಪಡಿಸಿದ ₹5 ಸಾವಿರ ಕೋಟಿಯಲ್ಲಿ, ಸುಮಾರು ₹4,500 ಕೋಟಿ ಹಣ ಖರ್ಚು ಮಾಡಲು ಪ್ರಯತ್ನ ಮಾಡಲಾಗುತ್ತಿದೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕರೂ ಆದ ಡಾ. ಅಜಯಸಿಂಗ್‌ ಹೇಳಿದರು.

ಮಂಗಳವಾರ ಕೆಕೆಆರ್‌ಡಿಬಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2023–24ರಲ್ಲಿ ₹2,009 ಕೋಟಿ, 2024–25ನೇ ಸಾಲಿನಲ್ಲಿ ₹3,158 ಕೋಟಿ ಸೇರಿ 24 ತಿಂಗಳಲ್ಲಿ ₹5,167 ಕೋಟಿ ಅನುದಾನ ಖರ್ಚು ಮಾಡಿದ್ದೇವೆ’ ಎಂದು ತಿಳಿಸಿದರು.

‘ಈ ಬಾರಿ ಮೈಕ್ರೋ ಯೋಜನೆ ಅಡಿಯಲ್ಲಿ ₹2,085 ಕೋಟಿ, ಮ್ಯಾಕ್ರೊ ಯೋಜನೆ ಅಡಿಯಲ್ಲಿ ₹875 ಕೋಟಿ ಅನುದಾನ ನೀಡಲಾಗುತ್ತದೆ. ಜಿಲ್ಲಾಮಟ್ಟದ ಎಚ್‌ಡಿಐ ಹೆಚ್ಚಳ ಮಾಡಲು ಸಭೆಯಲ್ಲಿ ಚರ್ಚೆ ಮಾಡಿ ಅನುದಾನ ನೀಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಅರಣ್ಯ ಆವಿಷ್ಕಾರ ಯೋಜನೆಯಡಿ ₹100 ಕೋಟಿ ವೆಚ್ಚದಲ್ಲಿ ಅರಣ್ಯೀಕರಣ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ಸಮುದಾಯ ಶೌಚಾಲಯ ಸ್ಥಾಪಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ₹1,500 ಕೋಟಿ ಹಣ ಮೀಸಲಿರಿಸಿದೆ. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೊಗದೊಂದಿಗೆ ವಸತಿ ನಿಲಯ ಸ್ಥಾಪಿಸಲಾಗುತ್ತದೆ’ ಎಂದು ಅವರು ತಿಳಿಸಿದರು.

ಕಲ್ಯಾಣ ಪಥಕ್ಕೆ ಈ ಬಾರಿಯೂ ಅನುದಾನ: ‘ಇಲ್ಲಿನ ಗ್ರಾಮೀಣ ರಸ್ತೆ ಸುಧಾರಣೆಗೆ ಕಲ್ಯಾಣ ಪಥ ಯೋಜನೆಗೆ ಚಾಲನೆ ನೀಲಾಗಿದ್ದು, ಈ ಬಾರಿಯೂ ₹300 ಕೋಟಿ ‌ಮಂಡಳಿಯಿಂದ ನೀಡಲಾಗುವುದು. ₹5 ಕೋಟಿ ವೆಚ್ಚದಲ್ಲಿ ಡಯಾಲಿಸಿಸ್‌ ಘಟಕ ಸ್ಥಾಪಿಸಲಾಗುವುದು. ಅಕ್ಷರ ಆವಿಷ್ಕಾರ ಯೋಜನೆಯಡಿ 50 ಕೆಪಿಎಸ್‌ ಪಬ್ಲಿಕ್ ಶಾಲೆ ಮಂಡಳಿಯಿಂದ ಸ್ಥಾಪಿಸಲಾಗುತ್ತಿದ್ದು, ಸುಮಾರು‌ 150 ಶಾಲೆ‌ ಶಿಕ್ಷಣ ಇಲಾಖೆಯಿಂದ ತೆರೆಯುವ ಆಶಾಭಾವನೆ ಹೊಂದಿದ್ದೇವೆ’ ಎಂದರು.

ಕೆಕೆಆರ್‌ಡಿಬಿ ಹಾಟ್‌ಲೈನ್‌: ‘ಮಂಡಳಿ ವತಿಯಿಂದ ಖರೀದಿಸಲಾದ ಆಂಬುಲೆನ್ಸ್‌ಗಳಿಗೆ (ಕೆಕೆಆರ್‌ಡಿಬಿ ಹಾಟ್‌ಲೈನ್‌) ಸೆಪ್ಟೆಂಬರ್‌ 17ರಂದು ನಡೆಯುವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗುವುದು. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಇರುವ ಉನ್ನತ ಅಧಿಕಾರದ ಸಮಿತಿಯ ಪ್ರೊ.ಗೋವಿಂದ್ ರಾವ್ ಅವರು ಆಗಸ್ಟ್‌ 6 ಮತ್ತು 7ರಂದು ಭೇಟಿ ನೀಡಲಿದ್ದಾರೆ’ ಎಂದು ಹೇಳಿದರು.

‘ಜಲಭಾಗ್ಯ’ ಯೋಜನೆ ಜಾರಿ ‘ಪ್ರಸ್ತುತ ವರ್ಷದಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಕೆಕೆಆರ್‌ಡಿಬಿಯ ತಲಾ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ‘ಜಲಭಾಗ್ಯ’ ಯೋಜನೆ ಜಾರಿ ಮಾಡಲಾಗುತ್ತಿದೆ. ಎರಡು ವರ್ಷಗಳ ಅವಧಿಯಲ್ಲಿ ಸುಮಾರು ₹400 ಕೋಟಿ ವೆಚ್ಚದಲ್ಲಿ 40 ಕ್ಷೇತ್ರಗಳಲ್ಲಿ ಯೋಜನೆ ಕಾರ್ಯಗತ ಮಾಡಲಾಗುತ್ತಿದೆ. ಸುಮಾರು ₹60 ಕೋಟಿ ವೆಚ್ಚದಲ್ಲಿ ಕೆಕೆಆರ್‌ಡಿಬಿ ವ್ಯಾಪ್ತಿಯ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ₹1.5 ಕೋಟಿ ವೆಚ್ಚದಲ್ಲಿ ‘ರೈತರ ಗೋದಾಮು’ ನಿರ್ಮಾಣ ಮಾಡಲಾಗುವುದು’ ಎಂದು ಡಾ. ಅಜಯ್‌ಸಿಂಗ್ ಹೇಳಿದರು. ₹200 ಕೋಟಿ ವೆಚ್ಚದಲ್ಲಿ ಕೈಗಾರಿಕಾ ಹಬ್‌ ನಿರ್ಮಾಣ: ‘ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗ ಅವಕಾಶ ಸಿಗುವಂತೆ ಮಾಡಲು ಮಂಡಳಿ ಹಾಗೂ ಸಣ್ಣ ಕೈಗಾರಿಕಾ ಇಲಾಖೆ ಜೊತೆಗೂಡಿ ₹200 ಕೋಟಿ ವೆಚ್ಚದಲ್ಲಿ ‘ಕೈಗಾರಿಕಾ ಹಬ್‌ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಸ್ಥಳವನ್ನು ಗುರುತಿಸಿ ಕೈಗಾರಿಕೆ ಸ್ಥಾಪನೆಗೆ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.

‘ಎಲ್ಲರಿಗೂ ಆಸೆ ಆಕಾಂಕ್ಷೆ ಇರುತ್ತೆ’ ‘ಮಲ್ಲಿಕಾರ್ಜುನ ಖರ್ಗೆ ಅವರು ಸುಮಾರು 55 ವರ್ಷಗಳ ಕಾಲ ರಾಜಕೀಯದಲ್ಲಿ ಇದ್ದಾರೆ. ಅವರು ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಹೊಂದಿದ್ದಾರೆ. ಅದಕ್ಕಿಂತ ಹೆಚ್ಚಿನದಾಗಿ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇನ್ನೂ ಕಾಂಗ್ರೆಸ್‌ನ 20 ಸಂಸದರು ಆಯ್ಕೆಯಾಗಿದ್ದರೆ ಅವರು ಪ್ರಧಾನಿಯಾಗುತ್ತಿದ್ದರು’ ಎಂದು ಡಾ. ಅಜಯಸಿಂಗ್‌ ಹೇಳಿದರು. ಮಲ್ಲಿಕಾರ್ಜುನ ಖರ್ಗೆ ವಿಜಯಪುರದಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ‘ರಾಜಕೀಯದಲ್ಲಿ ಎಲ್ಲರಿಗೂ ಆಸೆ ಆಕಾಂಕ್ಷೆ ಇರುತ್ತವೆ. ಅಧಿಕಾರ ಕೈತಪ್ಪಿದ್ದಾಗ ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯ’ ಎಂದರು. ನೀವು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಅವರು ನಮ್ಮ ನಾಯಕರು ಎಐಸಿಸಿ ಅಧ್ಯಕ್ಷರು ಅವರು ಮುಖ್ಯಮಂತ್ರಿ ಮಾಡುವವರು. ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದರೆ ಖಂಡಿತಾ ಸ್ವಾಗತಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.