ADVERTISEMENT

‘ತಲಾ ಆದಾಯ ವೃದ್ಧಿಗೆ ಯೋಜನೆ ರೂಪಿಸಿ’: ಪ್ರೊ.ಗೋವಿಂದರಾವ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 8:09 IST
Last Updated 8 ಆಗಸ್ಟ್ 2025, 8:09 IST
ಕಲಬುರಗಿಯ ಕೆಕೆಆರ್‌ಡಿಬಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಮಿತಿಯ ಸದಸ್ಯೆ ಸಂಗೀತಾ ಕಟ್ಟಿಮನಿ, ಸದಸ್ಯ ಕಾರ್ಯದರ್ಶಿ ಆರ್.ವಿಶಾಲ್‌, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್‌, ಕಾರ್ಯದರ್ಶಿ ನಲಿನ್ ಅತುಲ್‌ ಇದ್ದಾರೆ   –ಪ್ರಜಾವಾಣಿ ಚಿತ್ರ
ಕಲಬುರಗಿಯ ಕೆಕೆಆರ್‌ಡಿಬಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಮಿತಿಯ ಸದಸ್ಯೆ ಸಂಗೀತಾ ಕಟ್ಟಿಮನಿ, ಸದಸ್ಯ ಕಾರ್ಯದರ್ಶಿ ಆರ್.ವಿಶಾಲ್‌, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್‌, ಕಾರ್ಯದರ್ಶಿ ನಲಿನ್ ಅತುಲ್‌ ಇದ್ದಾರೆ   –ಪ್ರಜಾವಾಣಿ ಚಿತ್ರ    

ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಯ ತಲಾ ಆದಾಯ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಿಸುವ ಗುರಿಯೊಂದಿಗೆ ಕೆಕೆಆರ್‌ಡಿಬಿ ಹತ್ತು ಇಲ್ಲವೇ ಪಂಚ ವಾರ್ಷಿಕ ದೂರದೃಷ್ಟಿಯುಳ್ಳ ಯೋಜನೆಗಳನ್ನು ಹಾಕಿಕೊಳ್ಳಬೇಕು’ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್‌ ಹೇಳಿದರು.

ನಗರದ ಕೆಕೆಆ‌ರ್‌ಡಿಬಿ ಸಭಾಂಗಣದಲ್ಲಿ ಕೆಕೆಆರ್‌ಡಿಬಿ ಮಂಡಳಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಅವರು ಮಾತನಾಡಿದರು.

‘ಮುಂದಿನ‌ ಹತ್ತು ಅಥವಾ ಐದು ವರ್ಷಗಳಲ್ಲಿ ಆದ್ಯತಾ ಕ್ಷೇತ್ರದಲ್ಲಿ ಸುಧಾರಿಸುವ ಗುರಿಯೊಂದಿಗೆ ಮುನ್ನಡೆಯಬೇಕು. ಡಾ. ಡಿ.ಎಂ.ನಂಜುಂಡಪ್ಪ ವರದಿಯಂತೆ ಯಾವೆಲ್ಲ‌ ವಲಯದಲ್ಲಿ ಈ ಭಾಗ ಹಿಂದುಳಿದಿದೆಯೋ ಅಲ್ಲಿ ಕೊರತೆ ನೀಗಿಸುವ ಕೆಲಸ ಮಂಡಳಿಯಿಂದ ಆಗಬೇಕು. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲಹೆ ನೀಡಬೇಕು‌. ಕೆಕೆಆರ್‌ಡಿಬಿಯು ಸರ್ಕಾರದಂತೆ ಎಲ್ಲದಕ್ಕೂ ಅನುದಾನ ನೀಡದೇ ಆದ್ಯತಾ ವಲಯಕ್ಕೆ ಗಮನ ಹರಿಸಬೇಕು’ ಎಂದರು.

ADVERTISEMENT

ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾತನಾಡಿ, ‘ಕಳೆದ ಎರಡು ವರ್ಷಗಳಿಂದ ಮಂಡಳಿಯು ಆರೋಗ್ಯ, ಶಿಕ್ಷಣ, ಉದ್ಯೋಗ, ಅರಣ್ಯ ಆವಿಷ್ಕಾರದಂಥ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಕಲಬುರಗಿಯಲ್ಲಿ ನಡೆದ‌ ಸಚಿವ ಸಂಪುಟ ಸಭೆಯಲ್ಲಿ ₹857 ಕೋಟಿ ವೆಚ್ಚದ ಆರೋಗ್ಯ ಇಲಾಖೆಯ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, ಇದರಲ್ಲಿ ₹300 ಕೋಟಿಗೂ ಅಧಿಕ ಹೆಚ್ಚಿನ ಹಣ ನೀಡಿ ಪ್ರದೇಶದ ಆರೋಗ್ಯ ಸುಧಾರಣೆಗೆ ಮಂಡಳಿ ಶ್ರಮಿಸುತ್ತಿದೆ. ಇಲ್ಲಿ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸಲು ಕೈಗಾರಿಕಾ ಹಬ್‌ ಸ್ಥಾಪಿಸಲಾಗುತ್ತಿದ’ ಎಂದರು.

ಕೆಕೆಆರ್‌ಡಿಬಿ ಕಾರ್ಯದರ್ಶಿ ನಲಿನ್ ಅತುಲ್ ಪ್ರಾತ್ಯಕ್ಷಿಕೆ ಮೂಲಕ ಮಂಡಳಿಯ ಈವರೆಗಿನ ಪ್ರಗತಿ ಕಾರ್ಯ ವಿವರಿಸಿದರು. ‘ಪ್ರಸ್ತುತ 2025-26ನೇ ಸಾಲಿಗೆ ₹5,000 ಕೋಟಿ ಅನುದಾನ ಘೋಷಿಸಿದ್ದು, ಇದರಲ್ಲಿ ಶೇ 60ರಷ್ಟು, ಅಂದರೆ ₹3,000 ಕೋಟಿ ಅನುದಾನ‌ ಮೈಕ್ರೊ ಮತ್ತು ಮ್ಯಾಕ್ರೊ ಯೋಜನೆಗೆ ಮೀಸಲಿರಿಸಲಾಗಿದೆ. ಉಳಿದಂತೆ ಶೇ 31ರಷ್ಟು ಅನುದಾನ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸುವ‌ ಕಾರ್ಯಕ್ರಮಗಳಿಗೆ ಹಂಚಿಕೆ ಪ್ರಮಾಣದಲ್ಲಿ ಮಂಡಳಿ ಅನುದಾನ ನೀಡಲಿದೆ. ಉಳಿದಂತೆ ಮಂಡಳಿ ಅಧ್ಯಕ್ಷರು, ಯೋಜನಾ‌ ಸಚಿವರು, ಮುಖ್ಯಮಂತ್ರಿಗಳು ತಲಾ ಶೇ 2‌‌ ವಿವೇಚನಾ ನಿಧಿ, ಶೇ 2 ಪ್ರಾದೇಶಿಕ ನಿಧಿ, ಶೇ 1ರಷ್ಟು ಹಣ ಆಡಳಿತಾತ್ಮಕ ವೆಚ್ಚವಾಗಿ ಬಳಸಲಾಗುತ್ತಿದೆ’ ಎಂದರು.

ಸಭೆಯಲ್ಲಿ ಸಮಿತಿ ಸದಸ್ಯೆ ಸಂಗೀತಾ ಕಟ್ಟಿಮನಿ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ‌ ಕಾರ್ಯದರ್ಶಿ ಮತ್ತು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಆರ್.ವಿಶಾಲ್, ಮಂಡಳಿಯ ಶಿಕ್ಷಣ ತಜ್ಞರ ಸಮಿತಿ ಅಧ್ಯಕ್ಷೆ ಪ್ರೊ.ಛಾಯಾ ದೇವಗಾಂವಕರ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಪಾಲಿಕೆ ಅಯುಕ್ತ ಅವಿನಾಶ ಶಿಂದೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದ ನಿರ್ದೇಶಕ ಡಿ.ಬಿ.ಚಂದ್ರಶೇಖರಯ್ಯ, ಕೆಕೆಆರ್‌ಡಿಬಿ ಉಪ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಹೆಚ್ಚುವರಿ ನಿರ್ದೇಶಕಿ ಪ್ರವೀಣ ಪ್ರಿಯಾ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

ಮಂಡಳಿ ಸಭೆಯ ನಂತರ ಪ್ರೊ.ಎಂ.ಗೋವಿಂದರಾವ್‌ ಅವರು ಪ್ರದೇಶದ ಅಭಿವೃದ್ಧಿಗೆ ವಿವಿಧ ಸಂಘ-ಸಂಸ್ಥೆಗಳಿಂದ ಮನವಿ, ಅಭಿಪ್ರಾಯ ಪಡೆದರು.

‘ಹಿಂದುಳಿವಿಕೆ ಕಲ್ಯಾಣಕ್ಕೆ ಸೀಮಿತವಾಗಿಲ್ಲ’:

‘ಹಿಂದುಳಿವಿಕೆ ಎಂಬುದು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೀಮಿತವಲ್ಲ. ರಾಜ್ಯದ ಎಲ್ಲ ಭಾಗಗಳಿಗೂ ಇದು ಅನ್ವಯಿಸುತ್ತದೆ’ ಎಂದು ಪ್ರೊ.ಎಂ.ಗೋವಿಂದರಾವ್‌ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬರೀ ಆದಾಯ ಮಾತ್ರವಲ್ಲದೇ ಉದ್ಯೋಗ ಸೃಷ್ಟಿ ತಲಾವಾರು ಆದಾಯವನ್ನೂ ಗಮನಿಸಬೇಕಿದೆ. ರಾಜ್ಯದಲ್ಲಿರುವ ಜನಸಂಖ್ಯೆಯ ಶೇ 46ರಷ್ಟು ರೈತರಿದ್ದರೂ ರಾಜ್ಯದ ಆದಾಯಕ್ಕೆ ಅವರ ಕೊಡುಗೆ ಕೇವಲ 8.5ರಷ್ಟಿದೆ. ಹೀಗಾಗಿ ಪ್ರೊ.ಡಿ.ಎಂ.ನಂಜುಂಡಪ್ಪ ವರದಿ ಆಧಾರದಲ್ಲಿ ಸಿಡಿಐ ಸೂಚ್ಯಂಕದಂತೆ ಅನುದಾನ ಹಂಚಿಕೆ ಮಾಡಿದರೂ ನಿರೀಕ್ಷಿತ ಅಭಿವೃದ್ಧಿ ಕಾಣದಿರಲು ಕಾರಣಗಳನ್ನು ಪತ್ತೆ ಹಚ್ಚಿ ಇದನ್ನು ಸರಿದೂಗಿಸಿ ಅಸಮಾನತೆ ನಿವಾರಣೆಗೆ ಸಮಗ್ರ ವರದಿ ರೂಪಿಸಲಾಗುವುದು. ಆರೋಗ್ಯ ಶಿಕ್ಷಣ ಕೃಷಿ ಕೈಗಾರಿಕೆ ಮೂಲಸೌಕರ್ಯ ಹೀಗೆ 40ಕ್ಕೂ ಅಧಿಕ ಅಂಶಗಳಲ್ಲಿ ಈವರೆಗಿನ ಫಲಿತಾಂಶದ ಆಧಾರದ ಮೇಲೆ ವರದಿ ಸಿದ್ಧಪಡಿಸಲು ಉದ್ದೇಶಿಸಲಾಗಿದೆ’ ಎಂದರು.

ಕೆಕೆಸಿಸಿಐನಲ್ಲಿ ಸಂವಾದ:

ಪ್ರೊ.ಗೋವಿಂದರಾವ್‌ ಅವರು ಕೆಕೆಸಿಸಿಐ ಹಮ್ಮಿಕೊಂಡಿದ್ದ ‘ಸಂವಾದ’ ಕಾರ್ಯಕ್ರಮದಲ್ಲೂ ಪಾಲ್ಗೊಂಡರು. ಕೆಕೆಸಿಸಿಐನ ಪದಾಧಿಕಾರಿಗಳು ಉದ್ಯಮಿಗಳು ಈ ಭಾಗದ ಅಭಿವೃದ್ಧಿ ಪ್ರಾದೇಶಿಕ ಅಸಮಾನತೆ ನಿರ್ಮೂಲನೆಗೆ ನೀಡಿದ ಸಲಹೆಗಳನ್ನು ದಾಖಲಿಸಿಕೊಂಡರು. ‘ಹಿಂದುಳಿದಿರುವಿಕೆ ನೀಗಲು ಭವಿಷ್ಯದ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕಿದೆ. ಜೊತೆಗೆ ಇರುವ ಸೌಲಭ್ಯ ಮೂಲಸೌಕರ್ಯಗಳ ಪರಿಣಾಮಕಾರಿ ಸದ್ಬಳಕೆಯೂ ಆಗಬೇಕಿದೆ’ ಎಂದು ಪ್ರೊ.ಗೋವಿಂದರಾವ್ ಅಭಿಪ್ರಾಯಪಟ್ಟರು. ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ಸಿಂಗ್ ಮಾತನಾಡಿದರು. ಬಳಿಕ ಕೆಕೆಸಿಸಿಐನಿಂದ 27 ಬೇಡಿಕೆಗಳುಳ್ಳ ಮನವಿಯನ್ನು ಪ್ರೊ.ಗೋವಿಂದರಾವ್‌ ಅವರಿಗೆ ಸಲ್ಲಿಸಲಾಯಿತು. ಕೆಕೆಸಿಸಿಐ ಸಲಹಾ ಸಮಿತಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾಜಿ ಅಧ್ಯಕ್ಷ ಶಶಿಕಾಂತ ಪಾಟೀಲ ಗೌರವ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸಮಯದ ಅಭಾವದಿಂದ ಕೆಲವೇ ಪ್ರಶ್ನೆಗಳಿಗೆ ಅವರು ಕಿವಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.