ADVERTISEMENT

ಕಲಬುರಗಿ: ‘ಪ್ರತಿಷ್ಠಾನ: ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ’

ಚೆನ್ನಣ್ಣ ವಾಲೀಕಾರ ಪುಣ್ಯತಿಥಿ ನಿಮಿತ್ತ ವಿಶೇಷ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:05 IST
Last Updated 17 ಡಿಸೆಂಬರ್ 2025, 7:05 IST
ಕಲಬುರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚೆನ್ನಣ್ಣ ವಾಲೀಕಾರ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್ ಚಾಲನೆ ನೀಡಿದರು. ಶಾರದಾದೇವಿ ಜಾಧವ, ಸವಿತಾ ತಿವಾರಿ, ಅಮೃತಾ ಕಟಕೆ, ಸ್ವಾಮಿರಾವ ಕುಲಕರ್ಣಿ, ಸದಾನಂದ ಪೆರ್ಲ, ಕೆ.ಎಸ್.ಬಂಧು, ಬಿ.ಎಚ್.ನಿರಗುಡಿ ಭಾಗವಹಿಸಿದ್ದರು
ಕಲಬುರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚೆನ್ನಣ್ಣ ವಾಲೀಕಾರ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್ ಚಾಲನೆ ನೀಡಿದರು. ಶಾರದಾದೇವಿ ಜಾಧವ, ಸವಿತಾ ತಿವಾರಿ, ಅಮೃತಾ ಕಟಕೆ, ಸ್ವಾಮಿರಾವ ಕುಲಕರ್ಣಿ, ಸದಾನಂದ ಪೆರ್ಲ, ಕೆ.ಎಸ್.ಬಂಧು, ಬಿ.ಎಚ್.ನಿರಗುಡಿ ಭಾಗವಹಿಸಿದ್ದರು   

ಕಲಬುರಗಿ: ‘ರಾಜ್ಯದಲ್ಲಿ ವಿವಿಧ ಗಣ್ಯರ ಹೆಸರಿನಲ್ಲಿ 27 ಸರ್ಕಾರದ ಪ್ರತಿಷ್ಠಾನಗಳಿದ್ದು, ಅವುಗಳ ಪೈಕಿ ಒಬ್ಬರದೂ ಕಲ್ಯಾಣ ಕರ್ನಾಟಕದವರಿದ್ದಲ್ಲ’ ಎಂದು ಡಾ.ಚೆನ್ನಣ್ಣ ವಾಲೀಕಾರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ, ಸಾಹಿತಿ ಸ್ವಾಮಿರಾವ್ ಕುಲಕರ್ಣಿ ವಿಷಾದಿಸಿದರು.

ಸಂಸ್ಥೆಯ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗ (ಸ್ವಾಯತ್ತ)ದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಚೆನ್ನಣ್ಣ ವಾಲೀಕಾರ ಅವರ ಆರನೇ ಪುಣ್ಯತಿಥಿ ಅಂಗವಾಗ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಚೆನ್ನಣ್ಣನವರ ಹೋರಾಟ ಗೀತೆಗಳ ಗಾಯನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚೆಗಷ್ಟೇ ಕೊಪ್ಪಳದಲ್ಲಿ ಸಿದ್ದಯ್ಯ ಪುರಾಣಿಕ ಪ್ರತಿಷ್ಠಾನವನ್ನು ಆರಂಭಿಸಲಾಗಿದೆ. ಕಲಬುರಗಿಯ ಚೆನ್ನಣ್ಣ ವಾಲೀಕಾರ ಹಾಗೂ ಶಾಂತರಸರ ಸ್ಮರಣಾರ್ಥ ಪ್ರತಿಷ್ಠಾನವನ್ನು ಸ್ಥಾಪಿಸಿ ಅಗತ್ಯ ಅನುದಾನವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ವಿಷಾದಿಸಿದರು.

ADVERTISEMENT

ಚೆನ್ನಣ್ಣ ವಾಲೀಕಾರ ಅವರು ಕೊನೆವರೆಗೂ ತಾವು ನಂಬಿದ ತತ್ವಕ್ಕೆ ಅಂಟಿಕೊಂಡಿದ್ದರು. ಸಾರ್ವಜನಿಕರೇ ಚೆನ್ನಣ್ಣ ಅವರ ಸ್ಮಾರಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗೆ ವಂತಿಗೆ ನೀಡಿದರೆ ಸರ್ಕಾರದ ಮುಲಾಜು ಇಲ್ಲದೇ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಬಹುದಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್, ‘ನೋವಿನಲ್ಲೇ ಕಾವ್ಯ ಹುಟ್ಟುತ್ತದೆ ಎಂದು ಚೆನ್ನಣ್ಣ ಅವರು ಹೇಳಿದ್ದರು. ಅದರಂತೆ 1978ರಲ್ಲಿ ನಾನು ಇಂಗ್ಲಿಷ್ ವಿಷಯದಲ್ಲಿ ಫೇಲ್ ಆದಾಗ ಮನಸ್ಸಿಗೆ ಬಹಳ ನೋವಾಗಿತ್ತು. ಆಗಲೇ ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡೆ. ಇಂದು 9 ವಿಶ್ವವಿದ್ಯಾಲಯಗಳಲ್ಲಿ ನನ್ನ 16 ಕೃತಿಗಳ ಪಾಠಗಳು ಸೇರ್ಪಡೆಯಾಗಿವೆ’ ಎಂದು ಹೇಳಿದರು.

ಸಾಹಿತಿಯೊಬ್ಬರು ದಲಿತ, ಬಲಿತ ಸಾಹಿತ್ಯ ಯಾವುದೂ ಇಲ್ಲ ಎಂದು ಹೇಳಿಕೆ ನೀಡಿದ್ದಕ್ಕೆ ಪ್ರತಿರೋಧವೆಂಬಂತೆ ದಲಿತ, ಬಂಡಾಯ, ರೈತ ಚಳವಳಿಗಳು ಆರಂಭವಾದವು. ಆಗಲೇ ತಮ್ಮ ಲೇಖನಿಯಿಂದ ಬಂಡಾಯ ಸಾಹಿತ್ಯವನ್ನು ಹೊರಹೊಮ್ಮಿಸುತ್ತಿದ್ದ ಚೆನ್ನಣ್ಣ ಅವರು, ‘ಯಾವ ಅಕ್ಷರಗಳಲ್ಲಿ ಬರೆದು ತೋರಿಸಲಯ್ಯ ನನ್ನ ಎದೆಯ ಬ್ಯಾನಿ’ ಎಂದು ತಮ್ಮ ವೇದನೆಯನ್ನು ಹೊರಹಾಕಿದರು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್‌.ನಿರಗುಡಿ ಮಾತನಾಡಿ, ‘ಪ್ರಾಧಿಕಾರದಲ್ಲಿ ಕಲ್ಯಾಣ ಕರ್ನಾಟಕದ ಸಾಹಿತಿಗಳನ್ನು ನಿರ್ಲಕ್ಷಿಸಲಾಗಿದ್ದು, ಶಾಂತರಸ, ಚೆನ್ನಣ್ಣ ವಾಲೀಕಾರ, ಗೀತಾ ನಾಗಭೂಷಣ ಅವರ ಕುರಿತು ಪುಸ್ತಕ ಪ್ರಕಟಿಸುವಂತೆ ಪ್ರಾಧಿಕಾರದ ಮೇಲೆ ಒತ್ತಡ ಹೇರಿದ್ದೇನೆ. ಮುಂದಿನ ದಿನಗಳಲ್ಲಿ ಪುಸ್ತಕಗಳನ್ನು ತರಲು ಪ್ರಯತ್ನ ನಡೆದಿದೆ’ ಎಂದು ಹೇಳಿದರು.

‘ವಿಶ್ವವಿದ್ಯಾಲಯ, ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಪ್ರಾಧಿಕಾರದಿಂದ ತಲಾ ₹ 25 ಸಾವಿರ ಮೊತ್ತದ ಪುಸ್ತಕಗಳನ್ನು ನೀಡಲಾಗುತ್ತಿದ್ದು, ಇದೇ 23ರಂದು ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಪ್ರೊ.ಸವಿತಾ ತಿವಾರಿ ಮಾತನಾಡಿದರು. 

ಚೆನ್ನಣ್ಣ ಅವರ ಪತ್ನಿ ಸಿದ್ದಮ್ಮ ವಾಲೀಕಾರ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಉಪಾಧ್ಯಕ್ಷ ಕೆ.ಎಸ್.ಬಂಧು, ಕಾರ್ಯದರ್ಶಿ ಅಪ್ಪಾಸಾಹೇಬ ವಾಲೀಕಾರ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಶಾರದಾದೇವಿ ಜಾಧವ, ನಾಗಪ್ಪ ಗೋಗಿ, ಅಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಸದಾನಂದ ಪೆರ್ಲ ಇತರರು ವೇದಿಕೆಯಲ್ಲಿದ್ದರು.

‘ಅಂಬೇಡ್ಕರ್ ಬಗ್ಗೆ ಗೌರವ’

ಚೆನ್ನಣ್ಣ ವಾಲೀಕಾರ ಅವರು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಬಹಳ ಗೌರವ ಪ್ರೀತಿ ಇಟ್ಟುಕೊಂಡಿದ್ದರು. ಅದಕ್ಕೇ ಅಂಬೇಡ್ಕರ್ ಅವರು ನಿಧನರಾದ ಬಳಿಕ ‘ನೀವು ಹೋದ ಮರುದಿನ ನಮ್ಮ ಬದುಕು ಮೊದಲಿನಂಗ ಆಗೇದೊ ಎಂದು ಬರೆದಿದ್ದರು’ ಎಂದು ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಅಮೃತಾ ಕಟಕೆ ಅಭಿಪ್ರಾಯಪಟ್ಟರು.

ವಾಲೀಕಾರ ಅವರ ತತ್ವ ಸತ್ವ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ‘ಚೆನ್ನಣ್ಣ ಅವರಿಗೆ ತೋರಿಕೆಗೆ ಬದುಕುವುದು ಇಷ್ಟವಾಗುತ್ತಿರಲಿಲ್ಲ. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದಾಗಲೂ ಅವರ ಮನೆಯ ಮುಂದೆ ಕೌದಿಯನ್ನು ಒಣಗಿಸಲು ಹಾಕುತ್ತಿದ್ದರು. ಈ ಬಗ್ಗೆ ಅವರಿಗೆ ಯಾವ ಹಿಂಜರಿಕೆಯೂ ಇರಲಿಲ್ಲ. ತರಗತಿಯಲ್ಲಿ ಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳಲು ವಿದ್ಯಾರ್ಥಿಗಳು ಹೆದರುತ್ತಿದ್ದರು. ಏಕೆಂದರೆ ಯಾವುದಾದರೂ ಕಥೆಯನ್ನು ಹೇಳುವಾಗ ಎದುರಿಗಿನ ವಿದ್ಯಾರ್ಥಿಗಳನ್ನೇ ಪಾತ್ರಗಳಾಗಿ ಕಾಣುತ್ತಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.