ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಕಲಬುರಗಿ ನಗರ ಸಜ್ಜಾಗಿದೆ. ನಗರದ ವೃತ್ತಗಳು, ಕಟ್ಟಡಗಳು ವಿದ್ಯುದ್ದೀಪಗಳ ಬೆಳಕಿನ ಚಿತ್ತಾರದಲ್ಲಿ ಮಿನುಗುತ್ತಿವೆ.
ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಹಾಗೂ ಕೆಕೆಆರ್‌ಡಿಬಿ ಕಚೇರಿ ಕಟ್ಟಡವು ತ್ರಿವರ್ಣ ಧ್ವಜ ಬಣ್ಣಗಳೊಂದಿಗೆ ರಾರಾಜಿಸುತ್ತಿವೆ. ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರ ಸೇರಿದಂತೆ ಹಲವೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸುವ ಫಲಕಗಳನ್ನು ಇರಿಸಲಾಗಿದೆ.
ಹೈದರಾಬಾದ್ ನಿಜಾಮರ ಆಡಳಿತದಿಂದ ಈ ಭಾಗವನ್ನು ಬಿಡುಗಡೆಗೆ ಕಾರಣರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಇರುವ ವೃತ್ತವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿ ಆಕರ್ಷಕಗೊಳಿಸಲಾಗಿದೆ. ಎಸ್‌ವಿಪಿ ವೃತ್ತದಿಂದ ಜಗತ್ ವೃತ್ತ ಸಾಗುವ ಮಾರ್ಗದ ರಸ್ತೆ ವಿಭಜಕದಲ್ಲಿರುವ ಕಂಬಗಳಿಗೆ ತ್ರಿವರ್ಣ ಧ್ವಜದ ಬಣ್ಣ ಹೋಲುವ ಲೈಟ್ ಸರಗಳನ್ನು ಅಳವಡಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಕೆಕೆಆರ್‌ಡಿಬಿ ಕಚೇರಿಗೆ ತೆರಳುವ ಮಾರ್ಗವೂ ವಿದ್ಯುತ್ ದೀಪಗಳ ಚಿತ್ತಾರದಲ್ಲಿ ಮಿನುಗುತ್ತಿದೆ. ಮರಗಳಡಿಯಲ್ಲಿ ವಿದ್ಯುತ್ ದೀಪಗಳನ್ನು ಇಳಿಬಿಟ್ಟು ಅಂದಗೊಳಿಸಲಾಗಿದೆ.
ಸ್ವಚ್ಛತೆ, ಬಣ್ಣ, ರಸ್ತೆ ದುರಸ್ತಿ:
ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ನಗರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅವರು ಓಡಾಡುವ ಮಾರ್ಗದಲ್ಲಿ ಸೋಮವಾರವಾಗಿ ಭರದಿಂದ ಸ್ವಚ್ಛತಾ ಕಾರ್ಯಕೈಗೊಳ್ಳಲಾಯಿತು. ಅಗತ್ಯವಿದ್ದ ಕಡೆ ರಸ್ತೆ ದುರಸ್ತಿಯನ್ನೂ ಮಾಡಲಾಯಿತು. ರಸ್ತೆ ಅಂಚಿಗೆ ಬಣ್ಣ ಬಳಿದು ಅಂದಗೊಳಿಸಲಾಯಿತು.
ಪೊಲೀಸರು ಮುಖ್ಯಮಂತ್ರಿ ಸಂಚರಿಸುವ ಮಾರ್ಗದಲ್ಲಿ ಪೊಲೀಸ್ ವಾಹನಗಳೊಂದಿಗೆ ತಾಲೀಮು ನಡೆಸಿದರು. ಇದರಿಂದಾಗಿ ಕೆಲ ಹೊತ್ತು ಸಾರ್ವಜನಿಕರ ಸಂಚಾರವನ್ನು ನಿಯಂತ್ರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.