ADVERTISEMENT

ಕಮಲಾಪುರ ತಾ.ಪಂ ಕ್ಷೇತ್ರಗಳ ಪುನರ್ ವಿಂಗಡಣೆ : 3 ಕ್ಷೇತ್ರ ಕಡಿತ

ತಾಲ್ಲೂಕು ಪಂಚಾಯಿತಿಯಲ್ಲಿ ಈಗ 10 ಕ್ಷೇತ್ರಗಳು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 12:59 IST
Last Updated 5 ಏಪ್ರಿಲ್ 2021, 12:59 IST
ಏಪ್ರಿಲ್4ಕೆಎಂಪಿ1 ಕಮಲಾಪುರ ತಾಲ್ಲೂಕು ಪಂಚಾಯಿತಿ ಕಚೇರಿ
ಏಪ್ರಿಲ್4ಕೆಎಂಪಿ1 ಕಮಲಾಪುರ ತಾಲ್ಲೂಕು ಪಂಚಾಯಿತಿ ಕಚೇರಿ   

ಕಮಲಾಪುರ: ನೂತನ ಕಮಲಾಪುರ ತಾಲ್ಲೂಕು ಪಂಚಾಯಿತಿಯಲ್ಲಿ ಈ ಹಿಂದೆ 13 ಕ್ಷೇತ್ರಗಳಿದ್ದವು. ಇವುಗಳನ್ನು 10 ಕ್ಕೆ ಸೀಮಿತಗೊಳಿಸುವಂತೆ ಸರ್ಕಾರ ಆದೇಶಿಸಿತು. ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿ ಕಮಲಾಪುರ, ಕಿಣ್ಣಿ ಸಡಕ್, ಮಡಕಿ, ಹೊಳಕುಂದಾ ಕ್ಷೇತ್ರಗಳನ್ನು ಕಡಿತಗೊಳಿಸಿ ಕಾಳಮಂದರ್ಗಿ ಕ್ಷೇತ್ರವನ್ನು ಹೊಸದಾಗಿ ಸೃಜಿಸಿ ಚುನಾವಣಾ ಆಯೋಗ ರಾಜ್ಯಪತ್ರ ಹೊರಡಿಸಿದೆ.

ಕಮಲಾಪುರ ಪಟ್ಟಣ ಪಂಚಾಯಿತಿಯಾಗಿದೆ. ಕಿಣ್ಣಿ ಸಡಕ್ ತಾಲ್ಲೂಕು ಪಂಚಾಯಿತಿ ಕ್ಷೇತ್ರವನ್ನು ಡೊಂಗರಗಾಂವನಲ್ಲಿ, ಮಡಕಿ ತಾಲ್ಲೂಕು ಪಂಚಾಯಿತಿ ಕ್ಷೇತ್ರವನ್ನು ಅಂಬಲಗಾಕ್ಕೆ ಸೇರಿಸಲಾಯಿತು.

ಚೇಂಗಾಟಾ ಕ್ಷೇತ್ರ ಇರುವುದನ್ನು ಮಾರ್ಪಾಡು ಮಾಡಿ ಚೇಂಗಟಾ (ಕಲಮೂಡ) ಎಂದು ಸೇರಿಸಲಾಗಿದೆ. ಹೋಳಕುಂದಾ ಕ್ಷೇತ್ರದ ಹೊಳಕುಂದಾ, ಕಟ್ಟಳ್ಳಿಗಳನ್ನು ಜೀವಣಗಿ ಕ್ಷೇತ್ರದಲ್ಲಿ, ದಸ್ತಾಪುರ ನಾವದಗಿ ಗ್ರಾಮಗಳನ್ನು ಕಾಳಮಂದರ್ಗಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಲಾಗಿದೆ. ಮೊದಲಿನ ಆದೇಶದಲ್ಲಿ ಓಕಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರವಿತ್ತು. ಇದರಿಂದ ಹೊಳಕುಂದಾ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು.

ADVERTISEMENT

ಮರಗುತ್ತಿ ತಾಲ್ಲೂಕು ಪಂಚಾಯಿತಿಯಲ್ಲಿ ಮರಗುತ್ತಿ, ಮರಮಂಚಿ ಮಾತ್ರ ಒಳಗೊಂಡಿದೆ. ಇನ್ನುಳಿದಂತೆ ಕಲಮೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂತಪನಾಳ, ಭುಂಯಾರ, ಭೀಮನಾಳ, ಕವನಳ್ಳಿ, ದಿನಸಿ (ಕೆ), ದಿನಸಿ (ಕೆ) ತಾಂಡಾಗಳನ್ನು ಸೇರಿಸಲಾಗಿದೆ. ಈ ಎಲ್ಲ ಗ್ರಾಮಗಳ ಜನಸಂಖ್ಯೆ ಮರಗುತ್ತಿ ಗ್ರಾಮದ ಜನಸಂಖ್ಯೆಗಿಂತ ಕಡಿಮೆ ಇರುವುದರಿಂದ ತಾಲ್ಲೂಕು ಪಂಚಾಯಿತಿ ಕ್ಷೇತ್ರ ಉಳಿದುಕೊಂಡಿದೆ. ಕಲಮೂಡ ಗ್ರಾಮವನ್ನು ಚೇಂಗಟಾಕ್ಕೆ ಸೇರಿಸಲಾಗಿದೆ. ಒಂದು ವೇಳೆ ಈ ಗ್ರಾಮ ಸಹ ಮರಗುತ್ತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿದ್ದರೆ ಕಲಮೂಡ ತಾಲ್ಲೂಕು ಪಂಚಾಯಿತಿ ಕೇಂದ್ರವಾಗುವ ಸಾಧ್ಯತೆ ಇತ್ತು ಎನ್ನುತ್ತಾರೆ ರಾಜಕಿಯ ನಾಯಕರು.

ವರವಾದ ತಾಂಡಾಗಳು: ಕಾಳಮಂದರ್ಗಿಯಲ್ಲಿ ಗುತ್ತಿತಾಂಡಾ ಸೇರಿ ಓಕಳಿ ಗ್ರಾಮಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು, ಕಾಳಂದರ್ಗಿ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾಯಿತು. ಚೇಂಗಟಾ ಜಂಬನಕೊಳ್ಳ ತಾಂಡಾ ಸೇರಿ ಕಲಮೂಡಕ್ಕಿಂತ ಜನಸಂಖ್ಯೆ ಹೆಚ್ಚಾಗಿದ್ದರಿಂದ ಚೇಂಗಟಾ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾಯಿತು. ಹೀಗಾಗಿ ಈ ಗ್ರಾಮಗಳಿಗೆ ತಾಂಡಾಗಳು ಸೇರಿದ್ದರಿಂದ ವರವಾಗಿ ಪರಿಣಮಿಸಿದೆ.

*ನಾವು ವ್ಯಾಪ್ತಿ ಹಾಗೂ ಜನಸಂಖ್ಯಾವಾರು ವರದಿ ಸಲ್ಲಿಸಿದ್ದೇವೆ. ಕ್ಷೇತ್ರಗಳ ಪುನರ್ವಿಂಗಡಣೆ ಕಾರ್ಯ ಚುನಾವಣಾ ಆಯೋಗ ಮಾಡಿದೆ.
- ಅಂಜುಮ್ ತಬಸುಮ್, ತಹಶೀಲ್ದಾರ್

*ಕ್ಷೇತ್ರಗಳು ಪುನರ್ವಿಂಗಡಣೆ ಚುನಾವಣಾ ಆಯೋಗ ಮಾಡಿದ್ದು, ಊಹಿಸಲು ಸಾಧ್ಯವಾಗದಷ್ಟು ಬದಲಾವಣೆಗಳಾಗಿವೆ. ಇದರಲ್ಲಿ ಯಾರ ಹಸ್ತಕ್ಷೇಪವಿಲ್ಲ. ವಿರೋಧಿಗಳ ಮಾತಿಗೆ ಕಿವಿಗೊಡಬೇಡಿ.
- ಬಸವರಾಜ ಮತ್ತಿಮೂಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.