ಕಲಬುರಗಿಯಲ್ಲಿ ‘ಕ್ಯಾನ್‌ಸಿಪ್ಸ್–2024’ ಎರಡು ದಿನಗಳ ಸಮ್ಮೇಳನವನ್ನು ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಉದ್ಘಾಟಿಸಿದರು.
ಕಲಬುರಗಿ: ಭಾರತೀಯ ಮನೋವೈದ್ಯಕೀಯ ಸಂಸ್ಥೆಯ ಕರ್ನಾಟಕ ಘಟಕದ (ಐಪಿಎಸ್–ಕೆಸಿ) 34ನೇ ವಾರ್ಷಿಕ ಸಮ್ಮೇಳನ ‘ಕ್ಯಾನ್‌ಸಿಪ್ಸ್–2024’ಕ್ಕೆ ಶನಿವಾರ ಅದ್ದೂರಿ ಚಾಲನೆ ದೊರೆಯಿತು.
ನಗರದ ನ್ಯೂ ಎಂಆರ್‌ಎಂಸಿ ಅಲುಮ್ನಿ(ಸ್ಯಾಕ್) ಕಟ್ಟಡದಲ್ಲಿ ಕಲ್ಯಾಣ ಕರ್ನಾಟಕ ಮನೋವೈದ್ಯರ ಸಂಘ(ಕೆಕೆಪಿಜಿ)ದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಸಮ್ಮೇಳನವು ‘ಲಿಂಗ ಮತ್ತು ಮಾನಸಿಕ ಆರೋಗ್ಯ’ ಕುರಿತ ಚರ್ಚೆಗೆ ವೇದಿಕೆ ಒದಗಿಸಿದೆ.
ಸಮ್ಮೇಳನದಲ್ಲಿ ಮಾತನಾಡಿದ ಎಚ್.ಕೆ.ಇ. ಸಂಸ್ಥೆಯ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ‘ಶಾಲೆಯಲ್ಲಿ ಶೇ2–3ರಷ್ಟು ವಿದ್ಯಾರ್ಥಿಗಳಿಗೆ ತಮ್ಮ ಮಾನಸಿಕ ಸ್ಥಿತಿಗತಿ ಬಗ್ಗೆ ಅರಿವೇ ಇರುವುದಿಲ್ಲ. ಅವರನ್ನು ಪ್ರಾಥಮಿಕ ಹಂತದಲ್ಲೇ ಸರಿಪಡಿಸಲು ಪ್ರತಿಯೊಂದು ಸರ್ಕಾರಿ ಶಾಲೆಯಲ್ಲೂ ಮನೋವೈದ್ಯಕೀಯ ಆಪ್ತಸಮಾಲೋಚಕರನ್ನು ನೇಮಿಸುವ ಕೆಲಸ ನಮ್ಮ ದೇಶದಲ್ಲಿ ತುರ್ತಾಗಿ ಆಗಬೇಕಿದೆ’ ಎಂದು ಪ್ರತಿಪಾದಿಸಿದರು.
ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಮಾತನಾಡಿ, ‘ಎಲ್‌ಕೆಜಿಯಿಂದ ಉನ್ನತ ಶಿಕ್ಷಣದ ತನಕ ಸರ್ಕಾರ ಲಿಂಗ ಸಮಾನತೆಯ ಪಾಠಗಳನ್ನು ಅಳವಡಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರ ಕುರಿತ ಸಾಧನೆಗಳನ್ನು ತಿಳಿಸಬೇಕಿದೆ. ಆಗ ಲಿಂಗ ಸಮಾನತೆ ಬಗ್ಗೆ ಜಾಗೃತಿ ಮೂಡಬಲ್ಲದು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಪಿಎಸ್–ಕೆಸಿ ಅಧ್ಯಕ್ಷ ಡಾ.ಮುರಳಿ ಟಿ. ಅವರು, ‘ಲಿಂಗತ್ವ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡುವ ಮುನ್ನ ಸಾಮಾನ್ಯ ಉದ್ಯೋಗಿಗಳಿಗೆ ಲಿಂಗ ಸಮಾನತೆ ಕುರಿತು ಸಂವೇದನೆ ಬೆಳೆಸಬೇಕಿದೆ. ಇಲ್ಲದಿದ್ದರೆ ಅವರ ತಾರತಮ್ಯಕ್ಕೆ ಬೇಸತ್ತು ಲಿಂಗತ್ವ ಅಲ್ಪಸಂಖ್ಯಾತರು ಉದ್ಯೋಗ ತೊರೆಯುವ ಸಾಧ್ಯತೆಗಳು ಹೆಚ್ಚು’ ಎಂದರು.
‘ಬದಲಾಗುತ್ತಿರುವ ಜಗತ್ತಿನಲ್ಲಿ ಮನೋವೈದ್ಯಶಾಸ್ತ್ರದ ಭವಿಷ್ಯ: ವೃತ್ತಿಪರ ಸಮುದಾಯಗಳ ಪಾತ್ರ’ ಕುರಿತು ಗದುಗಿನ ಜಿಮ್ಸ್ ಆಸ್ಪತ್ರೆಯ ಪ್ರಾಧ್ಯಾಪಕ ಡಾ.ಸೋಮಶೇಖರ ಬಿಜ್ಜಳ ಬೆಳಕು ಚೆಲ್ಲಿದರು. ‘ಯೋಗಕ್ಷೇಮದ ಕ್ರಮಗಳು’ ಗೋಷ್ಠಿಯಲ್ಲಿ ಬೆಂಗಳೂರು ನಿಮ್ಹಾನ್ಸ್‌ನ ನಿವೃತ್ತ ಪ್ರಾಧ್ಯಾಪಕಿ ಡಾ.ಶ್ರೀಕಲಾ ಭರತ್ ಉತ್ತಮ ಬದುಕಿನ ಕ್ರಮಗಳನ್ನು ವಿವರಿಸಿದರು. ‘ಲಿಂಗ, ಯಾವ ಲಿಂಗ’ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಲಿಂಗ ಸಮಾನತೆಯ ಅಗತ್ಯವನ್ನು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.