ADVERTISEMENT

ಸೇಡಂ: ಬಸ್‌ ನಿಲ್ದಾಣ ಸ್ವಚ್ಛಗೊಳಿಸಿ ರಾಜ್ಯೋತ್ಸವ

ಗೌಡನಹಳ್ಳಿ ಗ್ರಾಮದ ಗೆಳೆಯರ ಬಳಗದ ಮಾದರಿ ಕಾರ್ಯ

ಅವಿನಾಶ ಬೋರಂಚಿ
Published 5 ನವೆಂಬರ್ 2022, 6:07 IST
Last Updated 5 ನವೆಂಬರ್ 2022, 6:07 IST
ಗೌಡನಹಳ್ಳಿ ಗ್ರಾಮದ ಬಸ್‌ ನಿಲ್ದಾಣ ಸ್ವಚ್ಛತೆಗೂ ಮುನ್ನ ಪಾಳು ಬಿದ್ದಿರುವುದು
ಗೌಡನಹಳ್ಳಿ ಗ್ರಾಮದ ಬಸ್‌ ನಿಲ್ದಾಣ ಸ್ವಚ್ಛತೆಗೂ ಮುನ್ನ ಪಾಳು ಬಿದ್ದಿರುವುದು   

ಸೇಡಂ: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪಾಳು ಬಿದ್ದ ಬಸ್‌ ತಂಗುದಾಣವನ್ನು ಗೌಡನಹಳ್ಳಿ ಗ್ರಾಮ ದ ಗೆಳೆಯರ ಬಳಗದ ಸದಸ್ಯರು ಸ್ವಚ್ಛಗೊಳಿಸಿದರು.

ತಾಲ್ಲೂಕಿನ ಗೌಡನಹಳ್ಳಿ ಗ್ರಾಮದ ಗೇಟ್ ಬಳಿ ಯಾದಗಿರಿ-ಸೇಡಂ ರಾಜ್ಯಹೆದ್ದಾರಿಗೆ ಹೊಂದಿಕೊಂಡಿರುವ ಬಸ್‌ ತಂಗುದಾಣವು ವರ್ಷಗಳಿಂದ ಪಾಳು ಬಿದ್ದಿತ್ತು. ಮಳೆ, ಬಿಸಿಲಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಅರಿತ ಗೌಡನಳ್ಳಿ ಗ್ರಾಮದ ‘ಗೆಳೆಯರ ಬಳಗ’ ವಾಟ್ಸ್‌ ಆ್ಯಪ್‌ ಗ್ರೂಪ್‌ನ ಯುವಕರು ಶ್ರಮದಾನ ಮಾಡಿ ಬಸ್‌ನಿಲ್ದಾಣ ಸ್ವಚ್ಛಗೊಳಿಸಿದರು.

ಅಕ್ಟೋಬರ್ 25 ರಿಂದ 31ರವರೆಗೆ ನಿತ್ಯವೂ ಗುದ್ದಲಿ, ಹಾರಿ, ಸಲಾಕೆಗಳನ್ನು ತಂದು ಸ್ವಚ್ಛತಾ ಕಾರ್ಯ ನಡೆಸಿದರು. ಒಂದು ವಾರ ನಿರಂತರವಾಗಿ 10 ರಿಂದ 15 ಯುವಕರು ಸಂಜೆ 2 ರಿಂದ 3 ಗಂಟೆ ಕೆಲಸ ಮಾಡಿದರು. ಒಡೆದಿದ್ದ ಪರ್ಸಿಗಳನ್ನು ತೆಗೆದು, ಹೊಸ ಪರ್ಸಿಗಳನ್ನು ಅಳವಡಿಸಿದರು.

ADVERTISEMENT

ಬಳಗದ ಬಹುತೇಕರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಸಂಜೆ ವೇಳೆ ಈ ಕಾರ್ಯ ನೆರವೇರಿಸಿದ್ದಾರೆ. ತಂಗುದಾಣದ ಆವರಣದಲ್ಲೇ ಕನ್ನಡ ನುಡಿಮುತ್ತುಗಳನ್ನು ಬರೆದಿದ್ದಾರೆ.

ಬಸ್‌ನಿಲ್ದಾಣದಲ್ಲಿಯೇ ರಾಜ್ಯೋತ್ಸವ:ಸ್ವಚ್ಛತಾ ಪ್ರಕ್ರಿಯೆ ಬಳಿಕ ಗೆಳೆಯರ ಬಳಗದ ಸದಸ್ಯರು ಬಸ್‌ ತಂಗುದಾಣದ ಆವರಣದಲ್ಲೇ ರಾಜ್ಯೋತ್ಸವ ಆಚರಿಸಿದರು. ಭೋಜಲಿಂಗೇಶ್ವರ ಮಠದ ಪ್ರಕಾಶ ತಾತನವರು ಮತ್ತು ಗ್ರಾಮದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.