ADVERTISEMENT

ಸಪ್ತ ಸಾಗರದಾಚೆ ಕನ್ನಡದ ಕಲರವ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 5:26 IST
Last Updated 24 ನವೆಂಬರ್ 2022, 5:26 IST
ಜರ್ಮನಿಯಲ್ಲಿ ಬ್ರಾ–ವೊ ಕನ್ನಡಿಗರ ಬಳಗ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ವೇಷ ಧರಿಸಿದ ಮಕ್ಕಳು  
ಜರ್ಮನಿಯಲ್ಲಿ ಬ್ರಾ–ವೊ ಕನ್ನಡಿಗರ ಬಳಗ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ವೇಷ ಧರಿಸಿದ ಮಕ್ಕಳು     

ಕಲಬುರಗಿ: ಜರ್ಮನಿಯ ಬ್ರೌನ್ಸ್‌ವೆಯ್ಗ್‌ ಮತ್ತು ವಲ್ಫುಸ್‌ಬರ್ಗ್‌ ನಗರದಲ್ಲಿ ವಾಸಿಸುವ ನೂರಾರು ಕನ್ನಡಿಗರು ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಈಚೆಗೆ ಆಚರಿಸಿದರು.

ಜರ್ಮನಿಯಲ್ಲಿನ ಕನ್ನಡಿಗರು ಬ್ರಾ-ವೊ ಕನ್ನಡಿಗರ ಬಳಗ ಸ್ಥಾಪಿಸಿ, ಕಳೆದ ಮೂರು ವರ್ಷಗಳಿಂದ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ.

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಿಕ್ಷಣ ತಜ್ಞ ನರೇಶ ಸೀತಾರಾಮ್, ‘ಕನ್ನಡ ಭಾಷೆಯಿಂದಾಗಿ ನಾವೆಲ್ಲರೂ ಒಗ್ಗೂಡಿ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಗಡಿ ನಾಡು ಕನ್ನಡಿಗರು, ಮಲೆನಾಡು ಕನ್ನಡಿಗರು, ಹೊರ ರಾಜ್ಯದ ಕನ್ನಡಿಗರು, ಹೊರ ರಾಷ್ಟ್ರಗಳ ಕನ್ನಡಿಗರು ಎಂದು ಕರೆಯುವುದು ಸೂಕ್ತವಲ್ಲ. ನಾವು ಎಲ್ಲಿಯೇ ಇದ್ದರು ಕನ್ನಡಿಗರು. ಕನ್ನಡಿಗರು ಎಂಬ ಒಂದೇ ಹೆಸರು ಸಾಕು’ ಎಂದರು.

ADVERTISEMENT

‘ಭಾಷೆಯಿಂದ ಪರಿಚಯವಾಗಿ ಒಂದಾದ ನಾವು ಕಷ್ಟಕಾಲದಲ್ಲಿ ಒಬ್ಬರಿಗೆ ಒಬ್ಬರೂ ನೆರವಾಗಬೇಕು. ಸಹಕಾರ, ಸಹಾಯಸ್ತ ನಮ್ಮ ನೆಲದ ಗುಣಗಳು’ ಎಂದು ಹೇಳಿದರು.

ಬಳಗದ ಮುಖಂಡ ಕಿರಣ್‌ಕುಮಾರ ಮಾತನಾಡಿ, ‘ಕಳೆದ ಮೂರು ವರ್ಷಗಳಿಂದ ಅದ್ಧೂರಿ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಮುಂದಿನ ವರ್ಷ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು. ಬ್ರಾ-ವೊ ಕನ್ನಡಿಗರ ಬಳಗಕ್ಕೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

30ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದರು. ‘ಎಲ್ಲಾದರೂ ಇರು ಎಂತಾದರ ಇರು ಎಂದೆಂದಿಗೂ ನೀ ಕನ್ನಡವಾಗಿರು...’, ಕನ್ನಡವೇ ಸತ್ಯ ಕನ್ನಡವೇ ನಿತ್ಯ...’, ‘ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ...’, ಹುಟ್ಟಿದ್ದರೆ ಕನ್ನಡ ನಾಡಲ್ಲಿ ಹುಟ್ಟಬೇಕು...’ ಹಾಡುಗಳಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು.

ಮಕ್ಕಳ ಪ್ರಾರ್ಥನೆ, ನಾಡಗೀತೆಯೊಂದಿಗೆ ಕನ್ನಡ ಮಾತೆಗೆ ನಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಟ ದಿ.ಪುನೀತ್‌ ರಾಜ್‌ಕುಮಾರ್ ಅವರಿಗೆ ವಿಶೇಷ ನಮನ ಸಲ್ಲಿಸಲಾಯಿತು. ಮಕ್ಕಳ ನೃತ್ಯ, ಭರತ ನಾಟ್ಯ, ಜಾನಪದ ನೃತ್ಯ, ಗೀತ ಗಾಯನ, ರಸಪ್ರಶ್ನೆ, ಮಕ್ಕಳ ವೇಷಭೂಷಣ ನೆರೆದವರ ಗಮನ ಸೆಳೆದವು.

ಕನ್ನಡ ನಾಡಿನ ವಿವಿಧ ಭಾಗಗಳ ಆಹಾರ ಖಾದ್ಯಗಳು ಆಹಾರ ಮೇಳದಲ್ಲಿ ಆಹಾರ ಪ್ರಿಯರನ್ನು ಆಕರ್ಷಿಸಿದವು.

ಕಾರ್ಯಕ್ರಮದಲ್ಲಿ ಶಿವರಾಯ, ರಶ್ಮಿ, ಆನಂದ್ ಕುಮಾರ್, ಪೂಜಾ, ಶ್ರೀಧರ, ಐಶ್ವರ್ಯ, ಶ್ರೇಯಸ್, ನಮಿತಾ, ರಂಜಿತ್, ದೀಪಾ, ಪವನ್ ದೇಶಪಾಂಡೆ, ಗುರು ಚರಣ್, ಪ್ರಭಾತ್, ಅವಿನಾಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.