ADVERTISEMENT

ಕಸಾಪ ಚುನಾವಣೆ | ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲು ಯತ್ನ: ವೀರಭದ್ರ ಸಿಂಪಿ

ಪ್ರಣಾಳಿಕೆ ಬಿಡುಗಡೆ ಮಾಡಿದ ವೀರಭದ್ರ ಸಿಂಪಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 4:39 IST
Last Updated 23 ಏಪ್ರಿಲ್ 2021, 4:39 IST
ವೀರಭದ್ರ ಸಿಂಪಿ
ವೀರಭದ್ರ ಸಿಂಪಿ   

ಕಲಬುರ್ಗಿ: ‘ಈಗಾಗಲೇ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ನಾನು ಚುನಾಯಿತನಾದರೆ ವಿಶ್ವ ಕನ್ನಡ ಸಮ್ಮೇಳವನ್ನು ಆಯೋಜಿಸಲು ಶ್ರಮಿಸುವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವೀರಭದ್ರ ಸಿಂಪಿ ಭರವಸೆ ನೀಡಿದರು.

ನಗರದಲ್ಲಿ ಗುರುವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಬಾಪುಗೌಡ ದರ್ಶನಾಪುರ ರಂಗಮಂದಿರದ ಬಾಕಿ ಉಳಿದಿರುವ ಆಂತರಿಕ ಕೆಲಸಗಳನ್ನು ಪೂರ್ಣಗೊಳಿಸಿ ಮಾದರಿ ರಂಗ ಮಂದಿರ ಮಾಡುವೆ. ನಿರುದ್ಯೋಗಿ ಯುವಜನರಿಗೆ ಸಾಂಸ್ಕೃತಿಕ ಉದ್ಯೋಗಗಳು ಸಿಗುವಂತೆ ಮಾಡಲು ವಚನ, ಜಾನಪದ, ತತ್ವಪದ ಹಾಡುಗಾರಿಕೆ, ನೃತ್ಯ ತರಬೇತಿ ನೀಡಿ ಕಲಾ ತಂಡಗಳನ್ನು ರಚಿಸಿ ಸಾಂಸ್ಕೃತಿಕ ಅವಕಾಶಗಳನ್ನು ಕಲ್ಪಿಸುವುದು. ಗಡಿ ಮತ್ತು ರಾಜ್ಯದಾದ್ಯಂತ ಈ ಕಲಾ ತಂಡಗಳು ಸಂಚರಿಸಿ ಕಲೆ ಪ್ರದರ್ಶನ ಮಾಡಲು ಅವಕಾಶ ಕಲ್ಪಿಸುವುದು. ಕಲಾವಿದರಿಗೆ ಮಾಸಾಶನ ಸಿಗುವಂತೆ ಮಾಡುವುದು ಹೀಗೆ ಹತ್ತಾರು ಹೊಸ ಉದ್ದೇಶಗಳಿವೆ’ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಕುರಿತು ‘ಮರೆಯಲಿ ಹ್ಯಾಂಗ ನಿಮ್ಮ’ ಸರಣಿಯಾಗಿ ಕೃತಿಗಳನ್ನು ಪ್ರಕಟಿಸಲಾಗುವುದು, ಅದಕ್ಕಾಗಿ ಸಮಿತಿ ರಚಿಸಿ ಸ್ವಾತಂತ್ರ್ಯ ಯೋಧರು, ಸಾಹಿತಿಗಳು, ರಂಗಭೂಮಿ ಕಲಾವಿದರು, ಸಹಕಾರಿ, ರಾಜಕೀಯ ಇತ್ಯಾದಿ ಕ್ಷೇತ್ರಗಳ ಜನರನ್ನು ಪರಿಚಯಿಸುವ ಕೆಲಸ ಮಾಡಲಾಗುವುದು. ‘ನಮ್ಮೂರ ಹಿರಿಮೆ’ ಹೆಸರಿನಲ್ಲಿ ಜಿಲ್ಲೆಯ ಐತಿಹಾಸಿಕ ಗ್ರಾಮಗಳ ಪರಿಚಯ ಗ್ರಂಥವನ್ನು ಪ್ರಕಟಿಸಲಾಗುವುದು. ಸಾಧಕರ ಮನದಾಳದ ಮಾತು ಮುಂದುವರೆಸುವುದು. ಕಸಾಪ ಚಟುಟಿಕೆಗಳನ್ನು ಇನ್ನಷ್ಟು ಮಾದರಿ ಮತ್ತು ಸತ್ವಯುತವಾಗಿ ನಡೆಸಿಕೊಂಡು ಹೋಗಲು ಎಲ್ಲ ಕ್ಷೇತ್ರಗಳ ತಜ್ಞರ ಸಮಿತಿಯನ್ನು ರಚನೆ ಮಾಡುವ ಚಿಂತನೆ ಇದೆ ಎಂದು ವಿವರಿಸಿದರು.

ADVERTISEMENT

ಕಲಬುರ್ಗಿಯ ವೈಶಿಷ್ಟ್ಯಗಳನ್ನು ಬಿಂಬಿಸಲು ಒಂದು ದಿನದ ಜಿಲ್ಲಾ ಮಟ್ಟದಲ್ಲಿ ವಚನ ಸಾಹಿತ್ಯ ಸಮ್ಮೇಳನ, ದಾಸ ಸಾಹಿತ್ಯ, ತತ್ವಪದ ಸಾಹಿತ್ಯ, ಜಾನಪದ ಕಲಾ, ದಲಿತ ಸಾಹಿತ್ಯ, ಮಹಿಳಾ ಸಾಹಿತ್ಯ, ಯುವ ಸಾಹಿತ್ಯ, ವೈದ್ಯ ಸಾಹಿತ್ಯ, ಕೃಷಿ ಸಾಹಿತ್ಯ ಮೊದಲಾದ ಸಾಹಿತ್ಯದ ಎಲ್ಲ ಪ್ರಕಾರಗಳ ಸಮ್ಮೇಳನಗಳನ್ನು ನಡೆಸುವ ಮೂಲಕ ಗ್ರಾಮೀಣ ಮಟ್ಟಕ್ಕೂ ಇಂತಹ ಕಾರ್ಯಕ್ರಮ ವಿಸ್ತರಿಸುವ ಉದ್ದೇಶವಿದೆ ಎಂದರು.

ಸೋಲಿನ ಭೀತಿಯಿಂದ ಅಪಪ್ರಚಾರ: ‘ಈ ಸಲ ಚುನಾವಣೆಯಲ್ಲಿ ಕೆಲವರು ಸೋಲಿನ ಭೀತಿಯಿಂದಾಗಿ ಇಲ್ಲದ ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಯಾರೂ ಕಿವಿಗೊಡಬಾರದು. ಅಲ್ಲದೇ ಯಾರು ಏನು ಎಂಬ ಚಿತ್ರಣ ಜನರ ಬಳಿಯಿದೆ. ಅವರ ಬಣ್ಣ ಬಯಲಾಗಿದ್ದರಿಂದ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ’ ಎಂದು ಸಿಂಪಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.