ADVERTISEMENT

ಕಾಂತರಾಜು ವರದಿ: 'ಕೋಲಿ, ಕಬ್ಬಲಿಗ, ಬೆಸ್ತ ಸಮುದಾಯಕ್ಕೆ ಅನ್ಯಾಯ'

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:49 IST
Last Updated 16 ಏಪ್ರಿಲ್ 2025, 14:49 IST
ಡಾ.ತಳವಾರ ಸಾಬಣ್ಣಾ
ಡಾ.ತಳವಾರ ಸಾಬಣ್ಣಾ   

ಚಿತ್ತಾಪುರ: ‘ಎಚ್. ಕಾಂತರಾಜುರವರ ನೇತೃತ್ವದ ಆಯೋಗವು ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಮಾಹಿತಿ ಆಧರಿಸಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಅಂಕಿ ಸಂಖ್ಯೆಯನ್ನು ಅವೈಜ್ಞಾನಿಕವಾಗಿ ತಿರುಚಿ ಅತ್ಯಂತ ಹಿಂದುಳಿದ ಕೋಲಿ, ಕಬ್ಬಲಿಗ, ಬೆಸ್ತ ಮತ್ತು ಇತರೆ ಪರ್ಯಾಯ ಜಾತಿಗಳಿಗೆ ಅನ್ಯಾಯ ಮಾಡಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ತಳವಾರ ಸಾಬಣ್ಣಾ ಅವರು ಆರೋಪಿಸಿದ್ದಾರೆ.

ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಾಧ್ಯಮಗಳಲ್ಲಿ ಪ್ರಸಾರವಾದ ಮಾಹಿತಿ ಪ್ರಕಾರ ಬೆಸ್ತ (3,99,383), ಅಂಬಿಗ (1,34,230), ಗಂಗಾಮತ (73,627), ಕಬ್ಬೇರ್, ಕಬ್ಬೇರ (58,289), ಕಬ್ಬಲಿಗ (3,88,082) ಮತ್ತು ಮೊಗವೀರ (1,21,478) ಎಂದು ತೋರಿಸಲಾಗಿದೆ. ಈ ಜನಸಂಖ್ಯೆ ವಾಸ್ತವದಿಂದ ಕೂಡಿಲ್ಲ ಎಂದು ಸಮುದಾಯದ ಜನರು ವಿರೋಧಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

1977ರಲ್ಲಿ ಹಾವನೂರು ವರದಿ ಆಧರಿಸಿ ಕರ್ನಾಟಕ ಸರ್ಕಾರದ ಮೀಸಲಾತಿ ಆದೇಶದಲ್ಲಿ ಕೋಲಿ, ಕಬ್ಬಲಿಗ, ಬೆಸ್ತ ಮತ್ತು ಪರ್ಯಾಯ ಪದಗಳನ್ನು ಹಿಂದುಳಿದ ಜಾತಿಗಳಲ್ಲಿ (ಬಿ.ಸಿ.ಟಿ) ಸೇರಿಸಲಾಗಿತ್ತು. 1994ರಲ್ಲಿ ಚಿನ್ನಪ್ಪರೆಡ್ಡಿ ವರದಿಯನುಸಾರ ಇದೇ ಜಾತಿಯ 39 ಪರ್ಯಾಯ ಪದಗಳನ್ನು ಪ್ರವರ್ಗ-1ರ ಗುಂಪಿನಲ್ಲಿ ಸೇರಿಸಲಾಗಿದೆ. ರಾಜ್ಯದಲ್ಲಿ 35 ರಿಂದ 40 ಲಕ್ಷ ಜನಸಂಖ್ಯೆಯಿದೆ. ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಕೋಲಿ, ಕಬ್ಬಲಿಗರ ಜನಸಂಖ್ಯೆ 6 ರಿಂದ 7 ಲಕ್ಷವಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಕಾಂತರಾಜು ವರದಿಯನುಸಾರ ಕೋಲಿ, ಕಬ್ಬಲಿಗ, ಬೆಸ್ತ ಜಾತಿಗಳನ್ನು ಕೇವಲ 14.5 ಲಕ್ಷ ಎಂದು ತೋರಿಸಿರುವುದರಿಂದ ಈ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ಕಳವಳ ವ್ಯಕ್ತ ಮಾಡಿದ್ದಾರೆ. ಬೆಸ್ತ, ಅಂಬಿಗ, ಗಂಗಾಮತ, ಕಬ್ಬೇರ್, ಕಬ್ಬೇರ, ಕಬ್ಬಲಿಗ ಮತ್ತು ಮೊಗವೀರ ಪರ್ಯಾಯ ಪದಗಳ ಜನಸಂಖ್ಯೆ ಪ್ರತ್ಯೇಕ ತೋರಿಸಿದ್ದರಿಂದ ಆಯೋಗದ ಜನಸಂಖ್ಯೆಯ ವರದಿಯು ಈ ಸಮುದಾಯಕ್ಕೆ ತೀರಾ ಅನ್ಯಾಯ ಮಾಡಿದಂತಾಗುತ್ತದೆ. ಇದನ್ನು ವಾಸ್ತವದ ಅಡಿಯಲ್ಲಿ ವೈಜ್ಞಾನಿಕವಾಗಿ ಕೋಲಿ, ಕಬ್ಬಲಿಗ, ಬೆಸ್ತ ಮತ್ತು ಇದರ ಪರ್ಯಾಯ ಪದಗಳನ್ನು ಒಟ್ಟಾಗಿಸಿ ವರದಿ ನೀಡಬೇಕೆಂದು ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.