ADVERTISEMENT

ಕಲಬುರಗಿ | ಗಂಗಾ ಜಲಾಭಿಷೇಕದ ಕಾವಡ್ ಯಾತ್ರೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 15:27 IST
Last Updated 18 ಆಗಸ್ಟ್ 2024, 15:27 IST
ಕಲಬುರಗಿಯಲ್ಲಿ ಭಾನುವಾರ ಗಂಗಾ ಜಲಾಭಿಷೇಕದ ಕಾವಡ್ ಯಾತ್ರೆ ಜರುಗಿತು
ಕಲಬುರಗಿಯಲ್ಲಿ ಭಾನುವಾರ ಗಂಗಾ ಜಲಾಭಿಷೇಕದ ಕಾವಡ್ ಯಾತ್ರೆ ಜರುಗಿತು   

ಕಲಬುರಗಿ: ನಗರದ ಶರಣಬಸವೇಶ್ವರ ದೇವಸ್ಥಾನದಿಂದ ಆಳಂದ ಚೆಕ್‌ಪೋಸ್ಟ್‌ ಸಮೀಪದ ರಾಮತೀರ್ಥ ಮಂದಿರದವರೆಗೆ ಗಂಗಾ ಜಲಾಭಿಷೇಕದ ಕಾವಡ್ ಯಾತ್ರೆ ಭಾನುವಾರ ಜರುಗಿತು. ಯಾತ್ರೆ ಉದ್ದಕ್ಕೂ ಶಿವ ಭಕ್ತರು ಹರ್ ಹರ್ ಮಹಾದೇವ ಘೋಷಣೆ ಮೊಳಗಿಸಿದರು.

ದೇವಸ್ಥಾನದ ಆವರಣದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್‌. ಅಪ್ಪ ಅವರು 12 ಅಡಿ ಎತ್ತರದ ಶಿವನ ಮೂರ್ತಿಯನ್ನು ಅನಾವರಣಗೊಳಿಸಿ, ಯಾತ್ರೆಗೆ ಚಾಲನೆ ನೀಡಿದರು. ನೂರಾರು ಶಿವಭಕ್ತರು ಗಂಗಾ ಜಲವನ್ನು ಹೊತ್ತು, ಪಾದಯಾತ್ರೆ ಮೂಲಕ ಸಾಗಿದರು.

ಲಾಲ್‌ಗೇರಿ ಕ್ರಾಸ್, ಶಹಾಬಜಾರ್ ನಾಕಾ ಮಾರ್ಗವಾಗಿ ರಾಮತೀರ್ಥ ದೇವಸ್ಥಾನ ತಲುಪಿತು. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಪ್ರಯಾಗರಾಜ್‌ನಿಂದ ತರಿಸಿದ ಗಂಗಾಜಲವನ್ನು ಬಿಂದಿಗೆಯಲ್ಲಿ ತುಂಬಿ ನೀಡಲಾಯಿತು. ಉಜ್ಜಯಿನಿಂದ ತರಿಸಿದ್ದ ಭಸ್ಮ ಲೇಪನವೂ ಮಾಡಲಾಯಿತು.

ADVERTISEMENT

ರಾಮತೀರ್ಥ ದೇವಸ್ಥಾನದಲ್ಲಿ ಪ್ರಸಾದ ವಿತರಿಸಲಾಯಿತು. ಯಾತ್ರೆಯ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮುಗಳನಾಗಾಂವದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಚವದಾಪುರಿಯ ರಾಜಶೇಖರ ಶಿವಾಚಾರ್ಯರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಂಘಟಕ ರಾಜು ಭವಾನಿ, ಡಾ.ಅಲ್ಲಮಪ್ರಭು ದೇಶಮುಖ, ವಿನೋದ ಪಾಟೀಲ ಸರಡಗಿ, ದಯಾನಂದ ಪಾಟೀಲ, ಶ್ರೀಧರ ನಾಗನಹಳ್ಳಿ, ಮಲ್ಲಿಕಾರ್ಜುನ ಸಾರವಾಡ, ದಿವ್ಯ ಹಾಗರಗಿ, ಉದಯ ಪಾಟೀಲ ಸೇರಿ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.