ADVERTISEMENT

‘ಉದ್ಯಮಿಗಳು, ದಾನಿಗಳಿಂದಲೂ ನೆರವು ಪಡೆಯಿರಿ’

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 10:28 IST
Last Updated 11 ಜನವರಿ 2020, 10:28 IST
ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಆಹಾರ ಸಮಿತಿಯ ಡಾ.ರತೇಂದ್ರನಾಥ ಸೂಗೂರ ವರದಿ ಮಂಡಿಸಿದರು. ಶಾಸಕರಾದ ಡಾ.ಅವಿನಾಶ್‌ ಜಾಧವ್, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಬಿ.ಜಿ.ಪಾಟೀಲ, ಕನೀಜ್ ಫಾತಿಮಾ ಹಾಗೂ ಅಧಿಕಾರಿಗಳು ಇದ್ದರು
ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಆಹಾರ ಸಮಿತಿಯ ಡಾ.ರತೇಂದ್ರನಾಥ ಸೂಗೂರ ವರದಿ ಮಂಡಿಸಿದರು. ಶಾಸಕರಾದ ಡಾ.ಅವಿನಾಶ್‌ ಜಾಧವ್, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಬಿ.ಜಿ.ಪಾಟೀಲ, ಕನೀಜ್ ಫಾತಿಮಾ ಹಾಗೂ ಅಧಿಕಾರಿಗಳು ಇದ್ದರು   

ಕಲಬುರ್ಗಿ: ನಗರದಲ್ಲಿ ಫೆಬ್ರುವರಿ ಮೊದಲ ವಾರದಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ಸರ್ಕಾರ ಹಣ ಬಿಡುಗಡೆ ಮಾಡಲಿದೆ. ಜೊತೆಗೆ, ಜಿಲ್ಲೆಯ ಸಿಮೆಂಟ್‌ ಕಾರ್ಖಾನೆ, ಸಕ್ಕರೆ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ದಾನಿಗಳಿಂದ ನೆರವು ಪಡೆದರೆ ಇನ್ನಷ್ಟು ಅದ್ಧೂರಿಯಾಗಿ ಸಮ್ಮೇಳನ ಮಾಡಬಹುದು ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆಶಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಿವಿಧ ಉಪಸಮಿತಿಗಳ ಮುಖ್ಯಸ್ಥರು ಹಾಗೂ ಸದಸ್ಯರೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಸಚಿವರು, ‘ಜಿಲ್ಲಾಧಿಕಾರಿ ಅವರು ಅಂದಾಜು ಪಟ್ಟಿಯನ್ನು ಸಲ್ಲಿಸಿದ ಬಳಿಕ ಸರ್ಕಾರ ಸಮ್ಮೇಳನಕ್ಕೆ ಹಣಕಾಸು ನೆರವು ನೀಡಲಿದೆ. ಆದರೆ, ಇದರಲ್ಲಿ ಜಿಲ್ಲೆಯ ಜನರನ್ನೂ ಒಳಗೊಳ್ಳಬೇಕಿದೆ. ಅವರನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.‌

‘ಸಿಮೆಂಟ್‌ ಕಾರ್ಖಾನೆಗಳು, ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಸಂಪರ್ಕಿಸಿ ಇದು ಜಿಲ್ಲೆಯಲ್ಲಿ ನೆಡೆಯುತ್ತಿರುವ ಸಮ್ಮೇಳನವಾಗಿರುವುದರಿಂದ ಅಗತ್ಯ ನೆರವು ನೀಡಿ ಎಂದು ಮನವಿ ಮಾಡಿಕೊಳ್ಳಿ. ಪ್ರತಿ ಕಾರ್ಖಾನೆಗಳಿಂದ ₹ 10 ಲಕ್ಷದಿಂದ ₹25 ಲಕ್ಷ ನೀಡುವಂತೆ ಮನವಿ ಮಾಡಿಕೊಳ್ಳಬಹುದು. ಆ ಹಣವನ್ನು ಸಮ್ಮೇಳನಕ್ಕಾಗಿ ತೆರೆದ ಜಿಲ್ಲಾಧಿಕಾರಿ ಅವರ ಖಾತೆಗೆ ಜಮಾ ಆಗುವಂತೆ ನೋಡಿಕೊಳ್ಳಿ’ ಎಂದರು.

ADVERTISEMENT

ಬಸ್‌ಗಳ ಮೇಲೆ ಸಮ್ಮೇಳನದ ವಿವರ ಪ್ರಕಟಿಸಿ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಸಮ್ಮೇಳನದ ದಿನಾಂಕವನ್ನು ಬರೆಸಬೇಕು. ಇದರಿಂದ ರಾಜ್ಯದ ವಿವಿಧೆಡೆ ಸಂಚರಿಸುವ ಬಸ್‌ಗಳು ಸಮ್ಮೇಳನದ ಪ್ರಚಾರ ಮಾಡುತ್ತವೆ ಎಂದು ಕಾರಜೋಳ ಅವರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಂ ಅವರಿಗೆ ನಿರ್ದೇಶನ ನೀಡಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ‘ಕನ್ನಡ ಭವನದ ವಾರ್ಷಿಕ ನಿರ್ವಹಣೆಗೆ, ಸುಣ್ಣ ಬಣ್ಣ ಬಳಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಬಳಿ ಹಣವಿಲ್ಲ. ಇದಕ್ಕೆ ಏನಾದರೂ ವ್ಯವಸ್ಥೆ ಮಾಡಬೇಕು’ ಎಂದು ಮನವಿ ಮಾಡಿದರು.

ತಕ್ಷಣ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಅಮೀನ್‌ ಮುಖ್ತಾರ್‌ ಅವರನ್ನು ಕರೆದ ಸಚಿವರು, ಭವನಕ್ಕೆ ಸುಣ್ಣ, ಬಣ್ಣ ಹಚ್ಚಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆಯಾಗಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ, ‘ಸಮ್ಮೇಳನದ ಮೂರೂ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು 80ರಿಂದ 100 ಕಲಾ ತಂಡಗಳನ್ನು ಆಯ್ಕೆ ಮಾಡಲಾಗುತ್ತಿದೆ. ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಕಲಾವಿದರಿಗೆ ಮುಖ್ಯ ವೇದಿಕೆಯಲ್ಲಿ ಅವಕಾಶ ನೀಡಲಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಶಾಸಕರಾದ ಎಂ.ವೈ.ಪಾಟೀಲ, ಸುಭಾಷ್‌ ಗುತ್ತೇದಾರ, ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ, ಕನೀಜ್‌ ಫಾತಿಮಾ, ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮಹಾನಗರ ‍ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಇದ್ದರು.

**

‘ಅಡುಗೆ ಗುತ್ತಿಗೆ ಬೇಡ. ಕಾರ್ಮಿಕರ ಗುತ್ತಿಗೆ ನೀಡಿ’

ಸಮ್ಮೇಳನದ ಅಡುಗೆ ಜವಾಬ್ದಾರಿಯನ್ನು ಕೇಟರಿಂಗ್‌ನವರಿಗೆ ವಹಿಸುವ ಬದಲು ಅಡುಗೆ ಕಾರ್ಮಿಕರನ್ನು ಮಾತ್ರ ಗುತ್ತಿಗೆ ಆಧಾರದ ಮೇಲೆ ಕರೆಸಿಕೊಳ್ಳಿ. ಅವರಿಗೆ ಬೇಕಾದ ದಿನಸಿಯನ್ನು ನೀವೇ ಕೊಡಿಸಿ ಎಂದು ಗೋವಿಂದ ಕಾರಜೋಳ ಸೂಚಿಸಿದರು.

ಅಡುಗೆ ಗುತ್ತಿಗೆ ಪಡೆದವರು ಪ್ಲೇಟ್‌ ಲೆಕ್ಕದಲ್ಲಿ ಊಟ ಬಡಿಸುತ್ತಾರೆ. ಕಲಬುರ್ಗಿಯಲ್ಲಿ ನಡೆಯುವು ದೊಡ್ಡ ಹಬ್ಬವಾಗಿರುವುದರಿಂದ ಕುತೂಹಲಕ್ಕಾಗಿ ಸಾಕಷ್ಟು ಜನ ಬಂದಿರುತ್ತಾರೆ. ಅವರು ಊಟ ಮಾಡದೇ ವಾಪಸ್‌ ಹೋಗಬಾರದು. ಬರೀ ಟೋಕನ್ ಇದ್ದವರಿಗೆ ಮಾತ್ರ ಊಟ ಎಂಬ ಧೋರಣೆಯೂ ಸರಿಯಲ್ಲ. ಹೀಗಾಗಿ, ಅಡುಗೆಗೆ ಅಗತ್ಯವಾದ ದಿನಸಿ ಸಾಮಾನುಗಳನ್ನು ಆಹಾರ ಸಮಿತಿ ಖರೀದಿಸಲಿ. ಅಡುಗೆ ಮಾಡುವುದಕ್ಕೆ ಮಾತ್ರ ಗುತ್ತಿಗೆ ಕೊಡಿ. ಹೀಗಾದಾಗ ಬಂದ ಎಲ್ಲರಿಗೂ ಸಾಕಾಗುವಷ್ಟು ಊಟ ಕೊಡಬಹುದು. ಮೂರು ದಿನವೂ ಹೋಳಿಗೆ, ತುಪ್ಪದ ಊಟ ಕೊಡಿ. ಸಂಜೆ ಚಹಾ, ಮಿರ್ಚಿಯಂತಹ ಉಪಾಹಾರ ಕೊಡಿ. ಬರೀ ಉತ್ತರ ಕರ್ನಾಟಕದ ಶೈಲಿಯ ಊಟ ಕೊಡುವುದು ಬೇಡ. ಕರಾವಳಿ, ಮಧ್ಯ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಶೈಲಿಯ ಊಟವೂ ಇರಲಿ. ಇವುಗಳಿಗೆ ಪ್ರತ್ಯೇಕ ಕೌಂಟರ್‌ ಮಾಡಿದರೆ ಆ ಭಾಗದವರು ಅಲ್ಲಿಗೆ ತೆರಳಬಹುದು ಎಂದು ಸಲಹೆ ನೀಡಿದರು.

**

ಯಾರು ಏನೆಂದರು?

ಸಮ್ಮೇಳನದ ಮೆರವಣಿಗೆ ಸಂದರ್ಭದಲ್ಲಿ ಆದಷ್ಟೂ ಸ್ಥಳೀಯ ಕಲಾವಿದರನ್ನೇ ಬಳಸಿಕೊಳ್ಳಿ. ಅವರೇನೂ ಸಂಭಾವನೆಯ ಆಸೆಗಾಗಿ ಬರುವುದಿಲ್ಲ. ತಮ್ಮ ಜಿಲ್ಲೆಯಲ್ಲಿ ನಡೆಯುವ ಸಮ್ಮೇಳನಕ್ಕೆ ತಮ್ಮದೂ ಸೇವೆ ಇರಲಿ ಎಂದು ಬಯಸಿರುತ್ತಾರೆ. ಅವರಿಗೆ ಪ್ರಮಾಣಪತ್ರ ಕೊಡಿ. ಅವರು ಬಂದು ಹೋಗುವ ಖರ್ಚನ್ನು ಭರಿಸೋಣ

ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ, ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ

ಕಲಬುರ್ಗಿಯ ಫಿಲ್ಟರ್‌ ಬೆಡ್‌ನಲ್ಲಿ ಗೃಹಮಂಡಳಿಯ ವತಿಯಿಂದ 200 ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ತಾತ್ಕಾಲಿಕವಾಗಿ ಸಮ್ಮೇಳನದ ಪ್ರತಿನಿಧಿಗಳ ವಾಸ್ತವ್ಯಕ್ಕೆ ಬಳಸಿಕೊಳ್ಳಬಹುದು.

ದತ್ತಾತ್ರೇಯ ಪಾಟೀಲ ರೇವೂರ, ಶಾಸಕ

**

‘ಸ್ಮರಣ ಸಂಚಿಕೆ ಸ್ಮರಣೀಯವಾಗಿರಲಿ’

ಸಮ್ಮೇಳನದ ಸಂದರ್ಭದಲ್ಲಿ ಹೊರತರುವ ಸ್ಮರಣ ಸಂಚಿಕೆಯು ಸಂಗ್ರಹಯೋಗ್ಯವಾಗಿರಬೇಕು. ಪ್ರಮುಖ ಲೇಖಕರ ಲೇಖನಗಳನ್ನು ಒಳಗೊಂಡಿರಬೇಕು ಎಂದು ಸ್ಮರಣ ಸಂಚಿಕೆಯ ಸಂಪಾದಕರಲ್ಲೊಬ್ಬರಾದ ಡಾ. ಸ್ವಾಮಿರಾವ ಕುಲಕರ್ಣಿ ಅವರಿಗೆ ಸೂಚಿಸಿದರು.

ವಿಜಯಪುರದ ಸಿದ್ಧೇಶ್ವರ ಶ್ರೀಗಳು, ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ಕೋ.ಚೆನ್ನಬಸಪ್ಪ,ಚಂದ್ರಶೇಖರ ಕಂಬಾರ, ಸಿ.ಪಿ.ಕೃಷ್ಣಕುಮಾರ್‌, ಪ್ರಧಾನ್‌ ಗುರುದತ್ತ, ಚಿರಂಜೀವಿ ಸಿಂಗ್, ವೈದೇಹಿ, ಕೆ.ಈ.ರಾಧಾಕೃಷ್ಣ, ಮಲ್ಲಿಕಾ ಘಂಟಿ ಹಾಗೂ ಇತರ ಪ್ರಮುಖ ಲೇಖಕರಿಂದ ಲೇಖನಗಳನ್ನು ತರಿಸಿಕೊಳ್ಳಿ ಎಂದು ಸೂಚಿಸಿದರು.

**

ಉಚಿತ ಬಸ್‌ ವ್ಯವಸ್ಥೆ ಮಾಡುವಂತೆ ಒತ್ತಾಯ

ಸಮ್ಮೇಳನದ ಸಾರಿಗೆ ಸಮಿತಿ ಅಧ್ಯಕ್ಷರೂ ಆದ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ, ಸಮ್ಮೇಳನದ ಸಂದರ್ಭದಲ್ಲಿ ಪ್ರತಿನಿಧಿಗಳು ಹಾಗೂ ಸಾಹಿತ್ಯಾಸಕ್ತರನ್ನು ಕರೆತರಲು ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯವರು ₹ 6 ಲಕ್ಷ ಬಾಡಿಗೆ ಕಟ್ಟಬೇಕು ಎಂದಿದ್ದಾರೆ. ಇದೊಂದು ಸಾರ್ವಜನಿಕ ಕಾರ್ಯಕ್ರಮವಾಗಿರುವುದರಿಂದ ಉಚಿತವಾಗಿ ಬಸ್‌ಗಳನ್ನು ನೀಡುವಂತೆ ಸೂಚಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಸಮಿತಿ ಕಾರ್ಯಾಧ್ಯಕ್ಷರೂ ಆದ ಜಿ.ಪಂ. ಸಿಇಒ ಡಾ.ರಾಜಾ ಪಿ, ‘ಸಾರಿಗೆ ಸಂಸ್ಥೆಯಿಂದ ಮೂರು ದಿನಗಳವರೆಗೆ ಪ್ರತಿ ತಾಲ್ಲೂಕಿಗೆ ಎರಡು ಬಸ್‌ಗಳಂತೆ 20 ಬಸ್‌ಗಳನ್ನು ಬಾಡಿಗೆಗೆ ಪಡೆಯುತ್ತಿದ್ದೇವೆ. ಬೆಳಿಗ್ಗೆ ಅಲ್ಲಿಂದ ಹೊರಟು ಸಂಜೆ ಇಲ್ಲಿಂದ ಮರಳುತ್ತವೆ. ಅದರ ಮಧ್ಯದಲ್ಲಿ ನಗರದ ಪ್ರಮುಖ ಸ್ಥಳಗಳಿಂದ ನಿರಂತರವಾಗಿ ಜನರನ್ನು ಕರೆತರುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.